SK Home Ad
Home ಸುದ್ದಿ ದೇಶ ಮೋದಿ ಮಹತ್ವದ ಸಭೆ; ದೇಶ ಭದ್ರತೆ ಮೇಲೆ ಹೈ ಅಲರ್ಟ್! ಭಾರತಕ್ಕೆ ಅಪಾಯ ಇದೆಯಾ?

ಮೋದಿ ಮಹತ್ವದ ಸಭೆ; ದೇಶ ಭದ್ರತೆ ಮೇಲೆ ಹೈ ಅಲರ್ಟ್! ಭಾರತಕ್ಕೆ ಅಪಾಯ ಇದೆಯಾ?

0
609

ನವದೆಹಲಿ: ದೇಶದ ಭದ್ರತೆ ಹಾಗೂ ಸನ್ನದ್ಧತೆಯನ್ನು ಪರಿಗಣಿಸಿ ಮಹತ್ವದ ಸಭೆಯನ್ನು ಇಂದು (ಮಾ.27) ಕೇಂದ್ರ ಸರ್ಕಾರ ಆಯೋಜಿಸಿದೆ. ಈ ಸಭೆಯ ಮುಖ್ಯ ಉದ್ದೇಶ, ದೇಶದ ಒಟ್ಟಾರೆ ಸಿದ್ಧತೆ, ತುರ್ತು ಪರಿಸ್ಥಿತಿಗಳಿಗೆ ಕೈಗೊಳ್ಳಲಾಗಿರುವ ಯೋಜನೆಗಳು ಹಾಗೂ ವಿವಿಧ ರಾಜ್ಯಗಳ ಸಹಕಾರವನ್ನು ಸಮಗ್ರವಾಗಿ ಪರಿಶೀಲಿಸುವುದಾಗಿದೆ.

ಆದರೆ, ಏಪ್ರಿಲ್ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣದಿಂದ ಈ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆ, ಆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಪ್ರತ್ಯೇಕ ಸಭೆಯನ್ನು ಶೀಘ್ರದಲ್ಲೇ ನಡೆಸುವ ಯೋಜನೆ ರೂಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಅವರ ಬದಲಿಗೆ ಆಹಾರ ಸಚಿವ ಕೆ.ಹೆಚ್‌ ಮುನಿಯಪ್ಪ ಅವರು ಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

ಇದಕ್ಕೂ ಮುನ್ನ, ಭಾನುವಾರ (ಮಾರ್ಚ್ 22) ಪ್ರಧಾನ ಮಂತ್ರಿಯವರು ಭದ್ರತೆ ಕುರಿತ ಸಂಪುಟ ಸಮಿತಿ ಸಭೆಗೆ ಅಧ್ಯಕ್ಷತೆ ವಹಿಸಿದ್ದರು. ಆ ಸಭೆಯಲ್ಲಿ ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿ, ಅಲ್ಲಿನ ಸಂಘರ್ಷದ ಪರಿಣಾಮಗಳು ಮತ್ತು ಅದು ಭಾರತಕ್ಕೆ ಉಂಟುಮಾಡಬಹುದಾದ ಸವಾಲುಗಳ ಬಗ್ಗೆ ಸಮಗ್ರ ಚರ್ಚೆ ನಡೆದಿದೆ.

ಸಂಘರ್ಷ ಮುಂದುವರಿದಲ್ಲಿ, ವಿದೇಶಗಳಲ್ಲಿ ಇರುವ ಭಾರತೀಯರ ಸುರಕ್ಷತೆ ಹಾಗೂ ಅವರನ್ನು ಸುರಕ್ಷಿತವಾಗಿ ದೇಶಕ್ಕೆ ತರಲು ಬೇಕಾದ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಪ್ರಧಾನ ಮಂತ್ರಿ ಸೂಚನೆ ನೀಡಿದ್ದಾರೆ.

ಆರ್ಥಿಕ, ಭದ್ರತೆ ಹಾಗೂ ವಿದೇಶಾಂಗ ಕ್ಷೇತ್ರಗಳಲ್ಲಿ ಉಂಟಾಗಬಹುದಾದ ಪರಿಣಾಮಗಳನ್ನು ಮನಗಂಡು, ಸರ್ಕಾರ ಎಲ್ಲಾ ರೀತಿಯ ಸನ್ನದ್ಧತೆಗಳನ್ನು ಹೆಚ್ಚಿಸುತ್ತಿದೆ ಎಂಬುದಾಗಿ ತಿಳಿದುಬಂದಿದೆ.

ಒಟ್ಟಿನಲ್ಲಿ, ದೇಶದ ಸುರಕ್ಷತೆ ಮತ್ತು ನಾಗರಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಕ್ರಮಗಳನ್ನು ವೇಗಗೊಳಿಸುತ್ತಿದೆ.