ನವದೆಹಲಿ: ರಾಜ್ಯಸಭೆ ಸಚಿವಾಲಯದ ಹೊಸ ಕಾರ್ಯದರ್ಶಿಯಾಗಿ ಕರ್ನಾಟಕದ ಕೋಲಾರ ಮೂಲದ ಡಾ. ಕೆ.ಎಸ್. ಸೋಮಶೇಖರ್ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ರಾಜ್ಯಸಭೆಯ ಸಭಾಧ್ಯಕ್ಷ ಹಾಗೂ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಆದೇಶ ಹೊರಡಿಸಿದ್ದು, ಸಂಸದೀಯ ವಲಯದಲ್ಲಿ ಇದು ಮಹತ್ವದ ನೇಮಕಾತಿಯಾಗಿ ಪರಿಗಣಿಸಲಾಗಿದೆ.
3 ದಶಕಗಳ ಅನುಭವಕ್ಕೆ ಸಿಕ್ಕ ಗೌರವ: ಡಾ. ಸೋಮಶೇಖರ್ ಅವರು ಕಳೆದ ಮೂರು ದಶಕಗಳಿಂದ ಸಂಸದೀಯ ಕ್ಷೇತ್ರದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಅನುಭವಿ ಅಧಿಕಾರಿ. 1993ರಲ್ಲಿ ರಾಜ್ಯಸಭೆ ಸಚಿವಾಲಯದಲ್ಲಿ ಭಾಷಾಂತರಕಾರರಾಗಿ ಸೇವೆ ಆರಂಭಿಸಿದ ಅವರು, ನಂತರ ಕ್ರಮೇಣ ಜಂಟಿ ನಿರ್ದೇಶಕ, ನಿರ್ದೇಶಕ, ಜಂಟಿ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಕಾರ್ಯದರ್ಶಿ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಸಂಸದೀಯ ಕಾರ್ಯಪದ್ಧತಿಯಲ್ಲಿ ಪರಿಣಿತಿ : ಸಂಸದೀಯ ನಡವಳಿಕೆ, ಶಾಸಕಾಂಗ ಆಡಳಿತ, ಸಮಿತಿ ನಿರ್ವಹಣೆ ಹಾಗೂ ಭಾಷಾಂತರ ಸೇವೆಗಳ ಕ್ಷೇತ್ರದಲ್ಲಿ ಅವರು ಅಪಾರ ಪರಿಣತಿ ಹೊಂದಿದ್ದಾರೆ. ವಿಜ್ಞಾನ, ತಂತ್ರಜ್ಞಾನ, ಆರೋಗ್ಯ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದ ಸಂಸದೀಯ ಸಮಿತಿಗಳಲ್ಲಿಯೂ ಅವರು ಪ್ರಮುಖ ಪಾತ್ರವಹಿಸಿದ್ದರು.
ಅಂತಾರಾಷ್ಟ್ರೀಯ ಮಟ್ಟದಲ್ಲೂ ಸೇವೆ : ಡಾ. ಸೋಮಶೇಖರ್ ಅವರು ವಿವಿಧ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದು, ದೇಶದ ಸಂಸದೀಯ ವ್ಯವಸ್ಥೆಯನ್ನು ಜಾಗತಿಕ ವೇದಿಕೆಯಲ್ಲಿ ಪರಿಚಯಿಸಿದ್ದಾರೆ.
ಈಗ ರಾಜ್ಯಸಭೆಯ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಅವರು, ಸಂಸದೀಯ ಕಾರ್ಯಚಟುವಟಿಕೆಗಳನ್ನು ಸಮರ್ಥವಾಗಿ ನಿರ್ವಹಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿದ್ದಾರೆ. ಅವರ ಅನುಭವ ಮತ್ತು ಪರಿಣಿತಿ ರಾಜ್ಯಸಭೆಯ ಕಾರ್ಯಪದ್ಧತಿಗೆ ಮತ್ತಷ್ಟು ಬಲ ನೀಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.






















