Home Advertisement
Home ಸಿನಿ ಮಿಲ್ಸ್ ಜಗನ್ನಾಥನ ನಾಡಿನಲ್ಲಿ ನಡೆದ ಸೌಂದರ್ಯ ಸಮರ: ಮಿಸ್ ಇಂಡಿಯಾ ಪಟ್ಟ ಗೋವಾ ಸುಂದರಿ ಪಾಲು.

ಜಗನ್ನಾಥನ ನಾಡಿನಲ್ಲಿ ನಡೆದ ಸೌಂದರ್ಯ ಸಮರ: ಮಿಸ್ ಇಂಡಿಯಾ ಪಟ್ಟ ಗೋವಾ ಸುಂದರಿ ಪಾಲು.

0
83

ಭಾರತದ ಅತ್ಯಂತ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆ ‘ಫೆಮಿನಾ ಮಿಸ್ ಇಂಡಿಯಾ 2026’ರ 61ನೇ ಆವೃತ್ತಿಯು ಏಪ್ರಿಲ್ 18 ರಂದು ಒಡಿಶಾದ ಭುವನೇಶ್ವರದಲ್ಲಿ ಅದ್ಧೂರಿಯಾಗಿ ಸಂಪನ್ನಗೊಂಡಿತು. ದೇಶದ ಮೂಲೆ ಮೂಲೆಗಳಿಂದ ಬಂದಿದ್ದ 30 ಸ್ಪರ್ಧಿಗಳನ್ನು ಹಿಂದಿಕ್ಕಿ, ಗೋವಾ ಮೂಲದ ಸಾದ್ವಿ ಸತೀಶ್ ಸೈಲ್ ಈ ವರ್ಷದ ‘ಮಿಸ್ ಇಂಡಿಯಾ’ ಕಿರೀಟವನ್ನು ಮುಡಿಗೇರಿಸಿಕೊಂಡರು.

ಈ ಬಾರಿಯ ಗ್ರಾಂಡ್ ಫಿನಾಲೆಗೆ ಭುವನೇಶ್ವರದ ಕಳಿಂಗ ಇನ್ಸಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (KIIT) ಸಾಕ್ಷಿಯಾಯಿತು. ವಿಶೇಷವೆಂದರೆ ಇತಿಹಾಸದಲ್ಲೇ ಮೊದಲ ಬಾರಿಗೆ ವಿಶ್ವವಿದ್ಯಾನಿಲಯವೊಂದು ಈ ಪ್ರತಿಷ್ಠಿತ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ವರ್ಷದ ಸ್ಪರ್ಧೆಯು “ಈ ಮಣ್ಣಿನ ಹೆಣ್ಣುಮಕ್ಕಳು” ಎಂಬ ಪರಿಕಲ್ಪನೆಯೊಂದಿಗೆ ಭಾರತೀಯ ಮಹಿಳೆಯರ ವೈವಿಧ್ಯತೆ ಮತ್ತು ಏಕತೆಯನ್ನು ಜಗತ್ತಿಗೆ ಸಾರಿತು.

ಮಾಡೆಲಿಂಗ್ ಮತ್ತು ಉದ್ಯಮಶೀಲತೆಯಲ್ಲಿ ಆಸಕ್ತಿ ಹೊಂದಿರುವ ಸಾದ್ವಿ ಸತೀಶ್ ಸೈಲ್, ಆರಂಭದಿಂದಲೂ ತಮ್ಮ ಆತ್ಮವಿಶ್ವಾಸದಿಂದ ಎಲ್ಲರ ಗಮನ ಸೆಳೆದಿದ್ದರು. ಸಾಂಪ್ರದಾಯಿಕ ಉಡುಗೆ, ಈಜುಡುಗೆ ಮತ್ತು ಸಂಜೆ ನಿಲುವಂಗಿಯ ವಿವಿಧ ಸುತ್ತುಗಳಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿದ, ಅಂತಿಮ ಪ್ರಶ್ನೋತ್ತರ ವಿಭಾಗದಲ್ಲಿ ನೀಡಿದ ಚುರುಕಾದ ಉತ್ತರಗಳ ಮೂಲಕ ತೀರ್ಪುಗಾರರ ಮನಗೆದ್ದರು. ಹಿಂದಿನ ವರ್ಷದ ವಿಜೇತೆ ನಿಕಿತಾ ಪೋರ್ವಾಲ್ ಅವರು ಸಾದ್ವಿ ಕಿರೀಟ ಧಾರಣೆ ಮಾಡಿದರು. ಸ್ಪರ್ಧೆಯಲ್ಲಿ ರಾಜನಂದಿನಿ ಪವಾರ್ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದರು.

ಫಿನಾಲೆಗೂ ಮುನ್ನ ಸ್ಪರ್ಧಿಗಳು ಪುರಿಯ ಪವಿತ್ರ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದರು. ಅಲ್ಲದೆ ಒಡಿಶಾದ ಸಾಂಪ್ರದಾಯಿಕ ‘ಛೇನಾ ಪೋಡಾ ಉತ್ಸವ’ದಲ್ಲಿ ಭಾಗವಹಿಸುವ ಮೂಲಕ ಸ್ಥಳೀಯ ಸಂಸ್ಕೃತಿಯನ್ನು ಅರಿಯುವ ಪ್ರಯತ್ನ ಮಾಡಿದ್ದರು. ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ಮಾಪಕ ಮಧುರ್ ಭಂಡಾರ್ಕರ್, ನಟಿ ನೇಹಾ ಧೂಪಿಯಾ, ಸಂಗೀತ ಸಂಯೋಜಕ ಅಮಲ್ ಮಲ್ಲಿಕ್ ಮತ್ತು ಹಿರಿಯ ನಟಿ ಜೀನತ್ ಅಮನ್ ಭಾಗವಹಿಸಿದ್ದರು.

ಈ ಗೆಲುವಿನೊಂದಿಗೆ ಸಾದ್ವಿ ಸತೀಶ್ ಸೈಲ್ ಮುಂದಿನ 75 ನೇ ವಿಶ್ವ ಸುಂದರಿ (Miss World) ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅರ್ಹತೆ ಪಡೆದಿದ್ದಾರೆ. ಭಾರತದ ಸೌಂದರ್ಯ ಮತ್ತು ಸಂಸ್ಕೃತಿಯನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಎತ್ತಿಹಿಡಿಯುವ ಜವಾಬ್ದಾರಿ ಈಗ ಸಾದ್ವಿ ಹೆಗಲ ಮೇಲಿದೆ. ಸಾದ್ವಿ ಈ ಸಾಧನೆಗೆ ದೇಶಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.