ಕೋಚಿಂಗ್ ಸಂಸ್ಥೆ ಮೇಲೆ ದಾಳಿ ಗುಂಡಿನ ದಾಳಿ ಪ್ರಕರಣ: ಸಿಸಿಟಿವಿ ಪರಿಶೀಲನೆ ಬಳಿಕ ಪೊಲೀಸರ ಸ್ಪಷ್ಟನೆ
ಪಾಟ್ನಾ: ಖ್ಯಾತ ಶಿಕ್ಷಕ ಹಾಗೂ ಯೂಟ್ಯೂಬರ್ ಖಾನ್ ಸರ್ ಅವರ ಖಾನ್ ಗ್ಲೋಬಲ್ ಸ್ಟಡೀಸ್ ಕೋಚಿಂಗ್ ಸಂಸ್ಥೆಯ ಮೇಲಿನ ದಾಳಿ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಘಟನೆಯ ಬಳಿಕ ಖಾನ್ ಸರ್ ದುಷ್ಕರ್ಮಿಗಳು ಸಂಸ್ಥೆಯ ಮೇಲೆ ದಾಳಿ ನಡೆಸಿ ಹಲವಾರು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಿದ್ದರೆ, ಪೊಲೀಸರ ತನಿಖೆ ಮತ್ತು ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯಲ್ಲಿ ಇದುವರೆಗೆ ಗುಂಡಿನ ದಾಳಿಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಪಾಟ್ನಾದ ಕಡಮ್ಕುವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಮಚ್ವಾಟೋಲಿ ಪ್ರದೇಶದಲ್ಲಿರುವ ಖಾನ್ ಗ್ಲೋಬಲ್ ಸ್ಟಡೀಸ್ ಸಂಸ್ಥೆಯ ಮೇಲೆ 15 ರಿಂದ 20 ಮಂದಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ದಾಳಿಕೋರರು ಸಂಸ್ಥೆಯೊಳಗೆ ನುಗ್ಗಿ ಕಲ್ಲು ತೂರಾಟ ನಡೆಸಿದ್ದು, ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಾರೆ. ಅಲ್ಲದೆ, ಸಂಸ್ಥೆಯ ಭದ್ರತಾ ಸಿಬ್ಬಂದಿಯ ಮೇಲೂ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಬಳಿಕ ಪ್ರತಿಕ್ರಿಯಿಸಿದ್ದ ಖಾನ್ ಸರ್, “ದುಷ್ಕರ್ಮಿಗಳು ಸಂಸ್ಥೆಯ ಮೇಲೆ ದಾಳಿ ನಡೆಸಿ 8 ರಿಂದ 10 ಸುತ್ತು ಗುಂಡು ಹಾರಿಸಿದ್ದಾರೆ” ಎಂದು ಆರೋಪಿಸಿದ್ದರು. ಜೊತೆಗೆ, ಪಕ್ಕದ ಕೋಚಿಂಗ್ ಸಂಸ್ಥೆಯ ಮಾಲೀಕರು ಈ ಹಿಂದೆ ಬೆದರಿಕೆ ಹಾಕಿದ್ದರು ಎಂದು ಕೂಡ ಅವರು ಹೇಳಿದ್ದರು.
ಆದರೆ ಪ್ರಕರಣದಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಗುಂಡಿನ ದಾಳಿ ಕುರಿತು ಯಾವುದೇ ಉಲ್ಲೇಖ ಇಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಇದರಿಂದ ಖಾನ್ ಸರ್ ಅವರ ಆರಂಭಿಕ ಹೇಳಿಕೆಗಳ ಕುರಿತು ಪ್ರಶ್ನೆಗಳು ಉದ್ಭವಿಸಿವೆ.
ಪಾಟ್ನಾ ನಗರ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಿಡುಗಡೆ ಮಾಡಿದ ಅಧಿಕೃತ ಪ್ರಕಟಣೆಯಲ್ಲಿ, “ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ದಾಳಿಯ ವೇಳೆ ಕಲ್ಲು ತೂರಾಟ ಮತ್ತು ವಿಧ್ವಂಸಕ ಕೃತ್ಯ ನಡೆದಿರುವುದು ಕಂಡುಬಂದಿದೆ. ಆದರೆ ಯಾವುದೇ ಗುಂಡಿನ ದಾಳಿ ನಡೆದಿರುವುದಕ್ಕೆ ಸಾಕ್ಷ್ಯ ದೊರೆತಿಲ್ಲ” ಎಂದು ತಿಳಿಸಲಾಗಿದೆ.
ಪಾಟ್ನಾದ ಡಿಎಸ್‌ಪಿ ರಾಜೇಶ್ ರಂಜನ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಘಟನೆಯಲ್ಲಿ ಹಿಂಸಾಚಾರ ಮತ್ತು ಧ್ವಂಸಕೃತ್ಯ ನಡೆದಿರುವುದು ದೃಢಪಟ್ಟಿದೆ. ಆದರೆ ಗುಂಡಿನ ದಾಳಿ ನಡೆದಿರುವ ಬಗ್ಗೆ ಈವರೆಗೆ ಯಾವುದೇ ದೃಢೀಕರಣ ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಜ್ಞಾನ ಬಿಂದು ಎಂಬ ಮತ್ತೊಂದು ಕೋಚಿಂಗ್ ಸಂಸ್ಥೆಗೆ ಸಂಬಂಧಿಸಿದ 15 ರಿಂದ 20 ಮಂದಿ ಈ ಕೃತ್ಯದಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ. ಆರೋಪಿಗಳನ್ನು ಗುರುತಿಸಲು ಮತ್ತು ಬಂಧಿಸಲು ವಿಶೇಷ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.
ಘಟನೆಯು ಶಿಕ್ಷಣ ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ವಾತಾವರಣ ಎಷ್ಟು ತೀವ್ರವಾಗಿದೆ ಎಂಬ ಚರ್ಚೆಗೆ ಕಾರಣವಾಗಿದ್ದು, ದಾಳಿಯ ಹಿಂದಿನ ಉದ್ದೇಶ ಹಾಗೂ ನಿಜವಾದ ಕಾರಣಗಳ ಬಗ್ಗೆ ಪೊಲೀಸರು ಆಳವಾದ ತನಿಖೆ ನಡೆಸುತ್ತಿದ್ದಾರೆ.
ಇದೀಗ ಪ್ರಕರಣದಲ್ಲಿ ಪ್ರಮುಖ ಪ್ರಶ್ನೆಯಾಗಿ ಉಳಿದಿರುವುದು, ಖಾನ್ ಸರ್ ಹೇಳಿದಂತೆ ನಿಜವಾಗಿಯೂ ಗುಂಡಿನ ದಾಳಿ ನಡೆದಿತ್ತೇ ಅಥವಾ ಇಲ್ಲವೇ ಎಂಬುದು. ತನಿಖೆ ಪೂರ್ಣಗೊಂಡ ಬಳಿಕವೇ ಈ ಕುರಿತು ಸ್ಪಷ್ಟ ಚಿತ್ರಣ ಸಿಗುವ ನಿರೀಕ್ಷೆಯಿದೆ.






















