ತಿರುವನಂತಪುರಂ : ಕೇರಳ ವಿಧಾನಸಭೆ ಚುನಾವಣೆಯ ಫಲಿತಾಂಶಗಳು ಹೊರಬರುತ್ತಿರುವ ಹಿನ್ನೆಲೆ, ಯುಡಿಎಫ್ ಭರ್ಜರಿ ಗೆಲುವಿನತ್ತ ಮುನ್ನಡೆಯುತ್ತಿದೆ. ಸತತ ಮೂರನೇ ಬಾರಿ ಅಧಿಕಾರದ ಕನಸು ಕಂಡ ಎಲ್‌ಡಿಎಫ್ ಮೈತ್ರಿಕೂಟಕ್ಕೆ ಭಾರಿ ಹಿನ್ನಡೆ ಎದುರಾಗಿದ್ದು, ರಾಜ್ಯ ರಾಜಕೀಯದಲ್ಲಿ ದೊಡ್ಡ ತಿರುವು ಕಂಡುಬರುತ್ತಿದೆ.
ಯುಡಿಎಫ್ ಅಧಿಕಾರಕ್ಕೆ ಬರಲು ಬಹುತೇಕ ಖಚಿತವಾಗುತ್ತಿದ್ದಂತೆ, ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆ ತೀವ್ರಗೊಂಡಿದೆ.
ಸಿಎಂ ರೇಸ್‌ನಲ್ಲಿ ಪ್ರಮುಖರು : ಕೆ.ಸಿ. ವೇಣುಗೋಪಾಲ್, ಹಾಗೂ ವಿ.ಡಿ. ಸತೀಶನ್, ಮತ್ತು ರಮೇಶ್ ಚೆನ್ನಿತ್ತಲ ಮುಖ್ಯಮಂತ್ರಿಯಾಗಿ ರಾಜ್ಯದ ನಾಯಕತ್ವ ವಹಿಸುವ ಸಾಮರ್ಥ್ಯ ಹೊಂದಿದ್ದಾರೆ ಆದರೆ ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಹಾಗೂ ವರಿಷ್ಠರು, ನೂತನ ಶಾಸಕರ ಅಭಿಪ್ರಾಯ ಪಡೆದು ಸಿಎಂ ಹೆಸರನ್ನು ಘೋಷಿಸುವ ಸಾಧ್ಯತೆ ಇದೆ.
ಪ್ರಸ್ತುತ ವಿರೋಧ ಪಕ್ಷದ ನಾಯಕರಾಗಿರುವ ಸತೀಶನ್ ಸಿಎಂ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಸರ್ಕಾರದ ವಿರುದ್ಧ ಅವರು ತೋರಿದ ಆಕ್ರಮಣಕಾರಿ ನಿಲುವು ಮತ್ತು ವಿಧಾನಸಭೆಯಲ್ಲಿನ ಅವರ ಕಾರ್ಯಪದ್ಧತಿ ಅವರಿಗೆ ಹೆಚ್ಚು ಬೆಂಬಲ ತಂದಿದೆ. ಪ್ರಮುಖ ಮೈತ್ರಿ ಪಾಲುದಾರ ಐಯುಎಂಎಲ್ ಕೂಡ ಅವರ ಪರ ಒಲವು ತೋರಿರುವುದು ಗಮನಾರ್ಹ. ಇತ್ತ ಹಿರಿಯ ಕಾಂಗ್ರೆಸ್ ನಾಯಕನಾಗಿರುವ ರಮೇಶ್ ಚೆನ್ನಿತ್ತಲ ಲ ಅವರಿಗೆ ಆಡಳಿತ ಅನುಭವವಿದ್ದು, ಗೃಹ ಸಚಿವರಾಗಿಯೂ ಕೆಲಸ ಮಾಡಿದ ಹಿನ್ನೆಲೆ ಇದೆ. ಸತೀಶನ್ ಜೊತೆ ಇವರ ಹೆಸರು ಸಹ ಬಲವಾಗಿ ಕೇಳಿಬರುತ್ತಿದೆ.
ವೈಲ್ಡ್ ಕಾರ್ಡ್ ಎಂಟ್ರಿ ಸಾಧ್ಯತೆ : ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ವೇಣುಗೋಪಾಲ್ ಕಾಂಗ್ರೆಸ್ ಹೈಕಮಾಂಡ್‌ಗೆ ಆಪ್ತರು. ನಾಯಕತ್ವದಲ್ಲಿ ಒಮ್ಮತ ಬರದಿದ್ದರೆ ‘ವೈಲ್ಡ್ ಕಾರ್ಡ್’ ಅಭ್ಯರ್ಥಿಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಅಲ್ಲದೆ ಕೆಪಿಸಿಸಿ ಅಧ್ಯಕ್ಷರಾಗಿರುವ ಸನ್ನಿ ಜೋಸೆಫ್ ಹೆಸರು ಕೂಡ ಚರ್ಚೆಯಲ್ಲಿ ಇದೆ. ಪಕ್ಷದೊಳಗಿನ ಸಮನ್ವಯದ ಪರಿಸ್ಥಿತಿಯಲ್ಲಿ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.
ಇನ್ನೂ ಶಶಿ ತರೂರ್, ಚಾಂಡಿ ಉಮ್ಮನ್ ಮತ್ತು ಕೆ. ಸುಧಾಕರನ್ ಹೆಸರುಗಳು ಸಹ ಚರ್ಚೆಯಲ್ಲಿವೆ. ಇವರು ರಾಜ್ಯದ ನಾಯಕತ್ವ ವಹಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಅಂತಿಮ ನಿರ್ಧಾರ ಯಾರದು? : ಕಾಂಗ್ರೆಸ್ ಪಕ್ಷವು ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ. ಆದ್ದರಿಂದ ಅಂತಿಮ ನಿರ್ಧಾರವನ್ನು ಕಾಂಗ್ರೆಸ್ ಹೈಕಮಾಂಡ್ ಮತ್ತು ಹೊಸದಾಗಿ ಆಯ್ಕೆಯಾದ ಶಾಸಕರ ಅಭಿಪ್ರಾಯದ ಆಧಾರದ ಮೇಲೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇದೇ ವೇಳೆ, ಮೈತ್ರಿಯ ಪ್ರಮುಖ ಭಾಗವಾಗಿರುವ ಐಯುಎಂಎಲ್‌ನ ನಿಲುವು ಕೂಡ ನಿರ್ಣಾಯಕವಾಗಲಿದೆ.
ಒಟ್ಟಾರೆ, ಕೇರಳದಲ್ಲಿ ರಾಜಕೀಯವಾಗಿ ದೊಡ್ಡ ಬದಲಾವಣೆಯ ಸೂಚನೆ ದೊರೆತಿದ್ದು, ಮುಂದಿನ ಮುಖ್ಯಮಂತ್ರಿ ಆಯ್ಕೆ ರಾಜಕೀಯ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.





















