ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭಾರತೀಯ ತ್ರಿವರ್ಣ ಧ್ವಜ ಮತ್ತೊಮ್ಮೆ ವಿಶ್ವ ವೇದಿಕೆಯಲ್ಲಿ ಭಾರತದ ಗೌರವವನ್ನು ಎತ್ತಿ ಹಿಡಿದಿದೆ. ರಾಧಾನಗರ್ ಬೀಚ್ ನಲ್ಲಿ ನೀರಿನಡಿ ಅತಿದೊಡ್ಡ ರಾಷ್ಟ್ರೀಯ ಧ್ವಜವನ್ನು ಹಾರಿಸುವ ಮೂಲಕ ಭಾರತವು ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದೆ.
ಈ ಐತಿಹಾಸಿಕ ಸಾಧನೆಯಲ್ಲಿ 223 ನುರಿತ ಡೈವರ್‌ಗಳ ತಂಡ ಭಾಗವಹಿಸಿದ್ದು, ಭಾರತೀಯ ನೌಕಾಪಡೆ, ಅಂಡಮಾನ್ ಪೊಲೀಸ್, ಕರಾವಳಿ ಕಾವಲು ಪಡೆ ಹಾಗೂ ಇತರ ಇಲಾಖೆಗಳು ಸಹಕಾರ ನೀಡಿವೆ. ಸುಮಾರು 60 × 40 ಮೀಟರ್ ಗಾತ್ರದ ಭವ್ಯ ತ್ರಿವರ್ಣ ಧ್ವಜವನ್ನು ಸಮುದ್ರದ ಅಡಿಯಲ್ಲಿ ನಿಯೋಜಿಸುವುದು ದೊಡ್ಡ ತಾಂತ್ರಿಕ ಹಾಗೂ ಸಮನ್ವಯದ ಸವಾಲಾಗಿತ್ತು.
ಕಾರ್ಯಕ್ರಮದ ಬಳಿಕ ಗಿನ್ನೆಸ್ ವಿಶ್ವ ದಾಖಲೆ ತೀರ್ಪುಗಾರ ರಿಷಿ ನಾಥ್ ಅವರು ಅಧಿಕೃತವಾಗಿ ದಾಖಲೆ ಘೋಷಿಸಿ, ಪ್ರಮಾಣಪತ್ರವನ್ನು ಲೆಫ್ಟಿನೆಂಟ್ ಗವರ್ನರ್ ಡಿ.ಕೆ. ಜೋಶಿ ಅವರಿಗೆ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಮುಖ್ಯ ಕಾರ್ಯದರ್ಶಿ ಚಂದ್ರಭೂಷಣ್ ಕುಮಾರ್ ಹಾಗೂ ಡಿಜಿಪಿ ಎಚ್.ಎಸ್. ಧಲಿವಾಲ್ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಈ ಸಾಧನೆ ಕೇವಲ ಒಂದು ದಾಖಲೆ ಮಾತ್ರವಲ್ಲ ಇದು ಭಾರತದ ಸಾಮರ್ಥ್ಯ, ತಂಡಬಲ ಮತ್ತು ರಾಷ್ಟ್ರಭಕ್ತಿಗೆ ಒಂದು ಜೀವಂತ ಉದಾಹರಣೆ. ಇದೇ ವೇಳೆ, ಮೇ 3ರಂದು “ಅತ್ಯಂತ ಎತ್ತರದ ಮಾನವ ರಾಶಿ” ನಿರ್ಮಾಣದ ಮತ್ತೊಂದು ಗಿನ್ನೆಸ್ ದಾಖಲೆ ಪ್ರಯತ್ನಕ್ಕೂ ಸಿದ್ಧತೆ ನಡೆಯುತ್ತಿದೆ.





















