ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಮತ್ತೆ ವಿವಾದದ ಸುಳಿಗೆ ಸಿಲುಕಿದ್ದಾರೆ. ಈ ವರ್ಷದ ಆರಂಭದಲ್ಲಿ ಕೇರಳ ಸಾಹಿತ್ಯ ಹಬ್ಬದಲ್ಲಿ ಅವರು ರಾಮಾಯಣದ ಕುರಿತು ನೀಡಿದ್ದ ಹೇಳಿಕೆಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಮುನ್ನಲೆಗೆ ಬಂದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಈಗಾಗಲೇ ಅವರ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ದೂರು ಕೂಡ ದಾಖಲಾಗಿದೆ.
ಆ ಸಂದರ್ಶನದಲ್ಲಿ ಪ್ರಕಾಶ್ ರಾಜ್ ಅವರು ಮಕ್ಕಳ ನಾಟಕವೊಂದರ ಉಲ್ಲೇಖ ಮಾಡುತ್ತಾ ರಾಮಾಯಣದ ಪ್ರಸಂಗವೊಂದನ್ನು ವಿಭಿನ್ನವಾಗಿ ವಿವರಿಸಿದ್ದರು. “ರಾಮ ಮತ್ತು ಲಕ್ಷ್ಮಣ ಹಣ್ಣುಗಳನ್ನು ತಿನ್ನುತ್ತಿದ್ದಾಗ ಶೂರ್ಪನಖಿ ಮತ್ತು ರಾವಣ ಅಲ್ಲಿಗೆ ಬರುತ್ತಾರೆ. ಶೂರ್ಪನಖಿ ಬಂದು ಇವರು ಹಣ್ಣುಗಳನ್ನು ತಿನ್ನುತ್ತಿದ್ದಾರೆ ಎಂದಾಗ, ರಾವಣ ಅವರು ಹಸಿದಿದ್ದಾರೆ, ತಿನ್ನಲಿ ಬಿಡು ಆಮೇಲೆ ಮಾತನಾಡೋಣ ಎನ್ನುತ್ತಾನೆ. ಇದಕ್ಕೆ ಪ್ರತಿಯಾಗಿ ರಾಮ ನಾವು ನಿಮ್ಮ ತೋಟದ ಹಣ್ಣು ತಿಂದಿದ್ದೇವೆ, ಹಣ ನೀಡುತ್ತೇವೆ ಎನ್ನುತ್ತಾನೆ. ಆಗ ಶೂರ್ಪನಖಿ ಜಿಎಸ್‌ಟಿ ಸೇರಿ 2000 ರೂಪಾಯಿ ಆಗುತ್ತದೆ ಎನ್ನುತ್ತಾಳೆ. ಕೊನೆಗೆ ರಾವಣ ಹಣ್ಣು ತಿಂದ ಮೇಲೆ ಅದರ ಬೀಜವನ್ನು ಇಲ್ಲಿಯೇ ಬಿತ್ತಿ ಗಿಡ ಬೆಳೆಸಿ ಹೋಗಿ ಎನ್ನುತ್ತಾನೆ” ಎಂದು ಪ್ರಕಾಶ್ ರಾಜ್ ಹೇಳಿದ್ದರು.
ರಾಮಾಯಣದಂತಹ ಪವಿತ್ರ ಕಾವ್ಯಕ್ಕೆ ಜಿಎಸ್‌ಟಿ ಮತ್ತು ಹಣದ ವಿಚಾರವನ್ನು ತಳುಕು ಹಾಕಿ ಹಾಸ್ಯ ಮಾಡಿದ್ದು ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ವಕೀಲೆ ಅಮಿತಾ ಸಚ್‌ದೇವ ಎಂಬುವವರು ಈ ಬಗ್ಗೆ ದೂರು ದಾಖಲಿಸಿದ್ದು, “ಇದು ಸನಾತನ ಧರ್ಮ ಮತ್ತು ಹಿಂದೂ ದೇವರನ್ನು ಅವಮಾನಿಸುವ ಉದ್ದೇಶಪೂರ್ವಕ ಕೃತ್ಯ” ಎಂದು ಕಿಡಿಕಾರಿದ್ದಾರೆ. ಇದೇ ವೇಳೆ ಪ್ರಕಾಶ್ ರಾಜ್ ಅವರು ಉತ್ತರ ಮತ್ತು ದಕ್ಷಿಣ ಭಾರತದ ವಿಭಜನೆಯ ಬಗ್ಗೆಯೂ ಮಾತನಾಡುತ್ತಾ, ಉತ್ತರದವರು ದಕ್ಷಿಣಕ್ಕೆ ಬಂದು ಕೆಲಸ ಮಾಡಿ ಹೋಗಬೇಕು, ಅದು ಬಿಟ್ಟು ‘ಒಂದು ರಾಷ್ಟ್ರ, ಒಂದು ಚುನಾವಣೆ’ಯಂತಹ ಮಾತುಗಳನ್ನು ಆಡಬಾರದು ಎಂದು ಹೇಳಿದ್ದು ಕೂಡ ವಿವಾದಕ್ಕೆ ತುಪ್ಪ ಸುರಿದಂತಾಗಿದೆ.
ಈ ವಿವಾದದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಪ್ರಕಾಶ್ ರಾಜ್ ಅವರ ಮುಂಬರುವ ಸಿನಿಮಾಗಳನ್ನು ಬಹಿಷ್ಕರಿಸಬೇಕು ಎಂಬ ಅಭಿಯಾನ ಶುರುವಾಗಿದೆ. ಅದರಲ್ಲೂ ಮಹೇಶ್ ಬಾಬು ಮತ್ತು ಪ್ರಿಯಾಂಕಾ ಚೋಪ್ರಾ ನಟನೆಯ ‘ವಾರಣಾಸಿ’ ಚಿತ್ರದಲ್ಲಿ ಪ್ರಕಾಶ್ ರಾಜ್ ಅವರು ಶಿವನ ಪಾತ್ರ ಮಾಡುತ್ತಿರುವುದಕ್ಕೆ ಭಕ್ತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗಷ್ಟೇ ತಾಯಿಯನ್ನು ಕಳೆದುಕೊಂಡಿದ್ದ ಪ್ರಕಾಶ್ ರಾಜ್, ತಾಯಿಯ ಆಸೆಯಂತೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ್ದರು. ಆ ಫೋಟೋಗಳು ವೈರಲ್ ಆದಾಗ ಅವರನ್ನು ಕೆಲವರು ಶ್ಲಾಘಿಸಿದ್ದರು, ಇನ್ನು ಕೆಲವರು ಟೀಕಿಸಿದ್ದರು. ಸದ್ಯದ ಈ ರಾಮಾಯಣ ವಿವಾದದ ಬಗ್ಗೆ ಪ್ರಕಾಶ್ ರಾಜ್ ಮತ್ತು ಅವರ ತಂಡ ಇನ್ನೂ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.





















