SK Home Ad
Home ಸುದ್ದಿ ದೇಶ ಶಿಕ್ಷಣ ಸಚಿವರ ರಾಜೀನಾಮೆ ಆಗ್ರಹಿಸಿ ಕಾಕ್ರೋಚ್ ಪಾರ್ಟಿ ಪ್ರತಿಭಟನೆ

ಶಿಕ್ಷಣ ಸಚಿವರ ರಾಜೀನಾಮೆ ಆಗ್ರಹಿಸಿ ಕಾಕ್ರೋಚ್ ಪಾರ್ಟಿ ಪ್ರತಿಭಟನೆ

0
66

Digital ತಾಣದಿಂದ ಬೀದಿಗಿಳಿದು ಪರೀಕ್ಷಾ ಹಗರಣಗಳ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ: ಜೂನ್ 6ರಂದು ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆ – ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯ

ನವದೆಹಲಿ: ಪರೀಕ್ಷಾ ಅಕ್ರಮಗಳು, ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ, ಸಿಬಿಎಸ್‌ಇ ಅಂಕಗಳ ಗೊಂದಲ ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದಿರುವ ಹಲವು ವಿವಾದಗಳ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿರುವ ಕಾಕ್ರೋಚ್ ಜನತಾ ಪಕ್ಷ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಜೂನ್ 6ರಂದು ದೆಹಲಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ.

ಸೋಮವಾರ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಬಿಡುಗಡೆ ಮಾಡಿದ ವಿಡಿಯೋ ಸಂದೇಶದಲ್ಲಿ ಮಾತನಾಡಿದ ಅವರು, ದೇಶದ ವಿದ್ಯಾರ್ಥಿಗಳು ಮತ್ತು ಯುವಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಪರೀಕ್ಷಾ ಪ್ರಕ್ರಿಯೆಯಲ್ಲಿ ನಡೆದಿರುವ ಲೋಪಗಳು ಹಾಗೂ ನಿರಂತರ ವಿವಾದಗಳು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ ಎಂದು ಅವರು ಹೇಳಿದರು.

“ಭಾರತದ ಸಂವಿಧಾನದ ಮಾರ್ಗವನ್ನು ಅನುಸರಿಸಿ ನಾವು ಎಲ್ಲರೂ ಒಗ್ಗೂಡಿ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಬೇಕು. ಶಾಂತಿಯುತವಾಗಿ ಧ್ವನಿ ಎತ್ತಿದರೆ ಸರ್ಕಾರ ನಮ್ಮ ಮಾತು ಕೇಳಲೇಬೇಕು” ಎಂದು ದೀಪ್ಕೆ ತಮ್ಮ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಜೂನ್ 6ರಂದು ದೆಹಲಿಗೆ ಆಗಮನ : ತಾವು ಜೂನ್ 6ರಂದು ಬೆಳಿಗ್ಗೆ ದೆಹಲಿಗೆ ಆಗಮಿಸುವುದಾಗಿ ತಿಳಿಸಿರುವ ದೀಪ್ಕೆ, ತಮ್ಮ ಬೆಂಬಲಿಗರು ವಿಮಾನ ನಿಲ್ದಾಣದಲ್ಲೇ ಸೇರಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ. “ದೆಹಲಿಗೆ ಬಂದ ನಂತರ ನಾವು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆರಳಿ ಜಂತರ್ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಅನುಮತಿ ಕೋರುತ್ತೇವೆ” ಎಂದು ಅವರು ಹೇಳಿದ್ದಾರೆ.

ಪರೀಕ್ಷಾ ವಿವಾದಗಳಿಂದ ವಿದ್ಯಾರ್ಥಿಗಳ ಆಕ್ರೋಶ : ಕಳೆದ ಕೆಲವು ತಿಂಗಳುಗಳಿಂದ ದೇಶದಲ್ಲಿ ನಡೆದಿರುವ ಹಲವು ಪರೀಕ್ಷಾ ವಿವಾದಗಳು ಶಿಕ್ಷಣ ವ್ಯವಸ್ಥೆಯ ವಿಶ್ವಾಸಾರ್ಹತೆಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ, ಸಿಬಿಎಸ್‌ಇ ಅಂಕಗಳ ದೋಷಗಳು ಹಾಗೂ ಇತರೆ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗಾಗಿ ಹಲವು ವಿದ್ಯಾರ್ಥಿ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳ ಕೆಲವು ನಾಯಕರು ಕೂಡ ಆಗ್ರಹ ವ್ಯಕ್ತಪಡಿಸಿದ್ದಾರೆ.

‘ಜಿರಳೆ’ ಹೇಳಿಕೆಯಿಂದ ಹುಟ್ಟಿದ ಚಳುವಳಿ : ಕಾಕ್ರೋಚ್ ಜನತಾ ಪಕ್ಷದ ಹುಟ್ಟು ಕೂಡ ವಿಶಿಷ್ಟವಾಗಿದೆ. ನಿರುದ್ಯೋಗಿ ಯುವಕರ ಬಗ್ಗೆ ನ್ಯಾಯಾಧೀಶರೊಬ್ಬರು ಮಾಡಿದ ‘ಜಿರಳೆ’ (Cockroach) ಕುರಿತ ಹೇಳಿಕೆಯನ್ನು ವ್ಯಂಗ್ಯಾತ್ಮಕವಾಗಿ ಬಳಸಿಕೊಂಡು ಅಭಿಜೀತ್ ದೀಪ್ಕೆ ಈ ಚಳುವಳಿಯನ್ನು ಆರಂಭಿಸಿದ್ದರು. ಆರಂಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯಮಯ ಅಭಿಯಾನವಾಗಿ ಕಾಣಿಸಿಕೊಂಡಿದ್ದ ಈ ಚಳುವಳಿ, ಬಳಿಕ ಉದ್ಯೋಗ ಕೊರತೆ, ಪರೀಕ್ಷಾ ಅಕ್ರಮಗಳು ಮತ್ತು ಯುವಕರ ಭವಿಷ್ಯದ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ದೊಡ್ಡ ಮಟ್ಟದ ಜನಬೆಂಬಲ ಪಡೆಯಲು ಆರಂಭಿಸಿತು.

ಸಾಮಾಜಿಕ ಜಾಲತಾಣದಿಂದ ಜನಾಂದೋಲನದತ್ತ : ಕಾಕ್ರೋಚ್ ಜನತಾ ಪಕ್ಷವು ಮುಖ್ಯವಾಗಿ ಯುವಜನರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದೆ. ಸರ್ಕಾರದ ನೀತಿಗಳು, ಉದ್ಯೋಗಾವಕಾಶಗಳ ಕೊರತೆ ಮತ್ತು ಶಿಕ್ಷಣ ವ್ಯವಸ್ಥೆಯ ಸಮಸ್ಯೆಗಳ ಬಗ್ಗೆ ನಿರಂತರವಾಗಿ ಧ್ವನಿ ಎತ್ತುತ್ತಿರುವ ಈ ಸಂಘಟನೆ, ಇದೀಗ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ತನ್ನ ಹೋರಾಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಮುಂದಾಗಿದೆ.

ಜೂನ್ 6ರಂದು ನಡೆಯಲಿರುವ ಪ್ರತಿಭಟನೆಗೆ ಎಷ್ಟು ಪ್ರಮಾಣದ ಜನಬೆಂಬಲ ದೊರೆಯುತ್ತದೆ ಮತ್ತು ಕೇಂದ್ರ ಸರ್ಕಾರ ಅಥವಾ ಶಿಕ್ಷಣ ಸಚಿವಾಲಯದಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದರತ್ತ ಈಗ ಎಲ್ಲರ ಗಮನ ನೆಟ್ಟಿದೆ.