ಡಿಜಿಟಲ್ ಬಂಧನ ಹಗರಣದ ವಿರುದ್ಧ ಸಿಬಿಐ ‘ಆಪರೇಷನ್ ಚಕ್ರ-VI’ ಅಡಿಯಲ್ಲಿ 16 ರಾಜ್ಯಗಳಲ್ಲಿ 80ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದ್ದು, ಇಬ್ಬರನ್ನು ಬಂಧಿಸಿದೆ. ಸುಪ್ರೀಂ ಕೋರ್ಟ್ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಬಳಸಿ ವಂಚನೆ ನಡೆಸಲಾಗುತ್ತಿತ್ತು.
ನವದೆಹಲಿ: ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಡಿಜಿಟಲ್ ಬಂಧನ (ಡಿಜಿಟಲ್ ಅರೆಸ್ಟ್) ಹಗರಣಗಳ ವಿರುದ್ಧ ಕೇಂದ್ರ ತನಿಖಾ ದಳ (ಸಿಬಿಐ) ಭಾರೀ ಕಾರ್ಯಾಚರಣೆ ಕೈಗೊಂಡಿದ್ದು, ‘ಆಪರೇಷನ್ ಚಕ್ರ-VI’ ಅಡಿಯಲ್ಲಿ 16 ರಾಜ್ಯಗಳಲ್ಲಿ 80ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದೆ.
ಸಿಬಿಐ ನೀಡಿರುವ ಮಾಹಿತಿ ಪ್ರಕಾರ, ಡಿಜಿಟಲ್ ಬಂಧನ ಹಗರಣಗಳಿಗೆ ಬೆಂಬಲವಾಗಿದ್ದ ಸೈಬರ್ ಅಪರಾಧ ಮೂಲಸೌಕರ್ಯವನ್ನು ಧ್ವಂಸಗೊಳಿಸುವ ಉದ್ದೇಶದಿಂದ 60 ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳು ಪಂಜಾಬ್, ಗುಜರಾತ್, ದೆಹಲಿ, ಮಹಾರಾಷ್ಟ್ರ, ಹರಿಯಾಣ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಅಸ್ಸಾಂ, ಪಶ್ಚಿಮ ಬಂಗಾಳ, ಮಣಿಪುರ, ಕರ್ನಾಟಕ ಮತ್ತು ಒಡಿಶಾ ಸೇರಿದಂತೆ 16 ರಾಜ್ಯಗಳಲ್ಲಿ ಸಂಘಟಿತ ಶೋಧ ಕಾರ್ಯಾಚರಣೆ ನಡೆಸಿವೆ.
ಇದನ್ನೂ ಓದಿ: ವೆನೆಜುವೆಲಾ: ಭೂಕಂಪದ ಅಟ್ಟಹಾಸ – 7.5 ಕಂಪನಕ್ಕೆ ದೇಶವೇ ತಲ್ಲಣ!
ತನಿಖೆಯ ವೇಳೆ 200ಕ್ಕೂ ಹೆಚ್ಚು ಡಿಜಿಟಲ್ ಬಂಧನ ಪ್ರಕರಣಗಳೊಂದಿಗೆ ಸಂಪರ್ಕ ಹೊಂದಿರುವ ಕಾರ್ಯಾಚರಣೆ ಜಾಲ ಪತ್ತೆಯಾಗಿದ್ದು, ಶೆಲ್ ಕಂಪನಿಗಳ ಮೂಲಕ ಅಕ್ರಮ ಹಣ ವರ್ಗಾವಣೆ ನಡೆಸಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ. ಈ ಸಂಬಂಧ ಚೆನ್ನೈ ಮತ್ತು ಕೋಲ್ಕತ್ತಾದಿಂದ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳು ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ನಿರ್ವಹಿಸುವ ಮೂಲಕ ಸುಮಾರು ₹2 ಕೋಟಿ ಶಂಕಿತ ಅಪರಾಧ ಆದಾಯವನ್ನು ವರ್ಗಾಯಿಸಿರುವ ಆರೋಪ ಎದುರಿಸುತ್ತಿದ್ದಾರೆ.
ಸುಪ್ರೀಂ ಕೋರ್ಟ್‌ನ ಹೋಲುವ ನಕಲಿ ವೆಬ್‌ಸೈಟ್ : ಇದಲ್ಲದೆ, ಭಾರತದ ಸುಪ್ರೀಂ ಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಲುವ ನಕಲಿ ವೆಬ್‌ಸೈಟ್‌ವೊಂದನ್ನು ಸಿಬಿಐ ಪತ್ತೆಹಚ್ಚಿದೆ. ಡಿಜಿಟಲ್ ಬಂಧನದ ಹೆಸರಿನಲ್ಲಿ ಸಾರ್ವಜನಿಕರನ್ನು ವಂಚಿಸಲು ಈ ನಕಲಿ ಡೊಮೇನ್ ಬಳಸಲಾಗುತ್ತಿತ್ತು ಎಂದು ತನಿಖೆ ತಿಳಿಸಿದೆ. ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯಿಂದ ಬಂದ ದೂರಿನ ಆಧಾರದ ಮೇಲೆ ಸಿಬಿಐ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿತ್ತು.
ಇದನ್ನೂ ಓದಿ: ಜಿಂದಾಲ್ ಏರ್‌ಪೋರ್ಟ್‌ಗೆ ಬಂದಿಳಿದ ಕರ್ನಾಟಕ, ಆಂಧ್ರ ಮುಖ್ಯಮಂತ್ರಿಗಳು!
ತನಿಖೆಯ ವೇಳೆ ಅಪರಾಧಿಗಳು ನ್ಯಾಯಾಲಯಗಳು ಮತ್ತು ಕಾನೂನು ಜಾರಿ ಸಂಸ್ಥೆಗಳ ಆದೇಶಗಳನ್ನು ಹೋಲುವ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜನರನ್ನು ನಂಬಿಸುವ ಪ್ರಯತ್ನ ನಡೆಸಿರುವುದು ಪತ್ತೆಯಾಗಿದೆ. ದಾಳಿಯ ಸಂದರ್ಭದಲ್ಲಿ ಹಲವು ಡಿಜಿಟಲ್ ಸಾಧನಗಳು, ಮೊಬೈಲ್ ಫೋನ್‌ಗಳು, ಬ್ಯಾಂಕ್ ದಾಖಲೆಗಳು ಮತ್ತು ಇತರ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಳ್ಳಲಾದ ವಸ್ತುಗಳನ್ನು ಸದ್ಯ ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಈ ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ಸೈಬರ್ ವಂಚನಾ ಜಾಲದ ಹಿಂದಿರುವ ಇತರ ಆರೋಪಿಗಳನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.




















