ರಾಜ್ಯದಲ್ಲಿ 1,600 ಪೊಲೀಸ್ ಕಾನ್ಸ್‌ಟೇಬಲ್ (ಸಿಎಆರ್/ಡಿಎಆರ್) ಹುದ್ದೆಗಳ ಭರ್ತಿಗೆ ಕೆಇಎ ಅಧಿಸೂಚನೆ ಪ್ರಕಟಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಜುಲೈ 22 ಕೊನೆಯ ದಿನವಾಗಿದೆ. ಸೆಪ್ಟೆಂಬರ್ 6ರಂದು ಲಿಖಿತ ಪರೀಕ್ಷೆ ನಡೆಯಲಿದೆ.
ಬೆಂಗಳೂರು: ರಾಜ್ಯದಲ್ಲಿ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿಯಾಗಿದೆ. ಒಟ್ಟು 1,600 ಪೊಲೀಸ್ ಕಾನ್ಸ್‌ಟೇಬಲ್ (ಸಿಎಆರ್/ಡಿಎಆರ್) ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಐಎಎಸ್ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜುಲೈ 22ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ. ಒಟ್ಟು 1,600 ಹುದ್ದೆಗಳ ಪೈಕಿ ಮಿಕ್ಕುಳಿದ ವೃಂದದಲ್ಲಿ 1,421 ಹುದ್ದೆಗಳು ಹಾಗೂ ಸ್ಥಳೀಯ ವೃಂದದಲ್ಲಿ 179 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಮಾಜಿ ಪ್ರೇಮಿಯ ಕಾಟ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ
ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ನೇಮಕಾತಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಯನ್ನು ಸೆಪ್ಟೆಂಬರ್ 6ರಂದು ನಡೆಸಲು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳಿಗೆ ಮತ್ತೊಂದು ಪ್ರಮುಖ ಮಾಹಿತಿ ಎಂದರೆ, ಲಿಖಿತ ಪರೀಕ್ಷೆಯಲ್ಲಿ ಋಣಾತ್ಮಕ ಮೌಲ್ಯಮಾಪನ (Negative Marking) ವ್ಯವಸ್ಥೆ ಜಾರಿಯಲ್ಲಿರುತ್ತದೆ. ಆದ್ದರಿಂದ ಅಭ್ಯರ್ಥಿಗಳು ಪ್ರಶ್ನೆಗಳಿಗೆ ಉತ್ತರಿಸುವಾಗ ಎಚ್ಚರಿಕೆ ವಹಿಸಬೇಕಾಗಿದೆ.
ನೇಮಕಾತಿ, ವಿದ್ಯಾರ್ಹತೆ, ವಯೋಮಿತಿ, ಮೀಸಲಾತಿ, ಪರೀಕ್ಷಾ ಪದ್ದತಿ ಹಾಗೂ ಇತರೆ ಮಾಹಿತಿಗಾಗಿ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ಕೆಇಎ ತಿಳಿಸಿದೆ. ರಾಜ್ಯದ ಸಾವಿರಾರು ಯುವಕರು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಕನಸು ಕಾಣುತ್ತಿರುವ ಹಿನ್ನೆಲೆಯಲ್ಲಿ ಈ ನೇಮಕಾತಿ ಪ್ರಕ್ರಿಯೆ ಸಾಕಷ್ಟು ಕುತೂಹಲ ಮೂಡಿಸಿದೆ.
ಅರ್ಜಿ ಸಲ್ಲಿಸಲು ಅಧಿಕೃತ ಲಿಂಕ್ ಬಳಸಿ: https://cetonline.karnataka.gov.in/KEACAR_DAR_2026/Account/Login






















