
ನವೆಂಬರ್ 3: ಮನೆಯ ಜವಾಬ್ದಾರಿ ಹೊತ್ತು ಕುಟುಂಬದ ಬೆನ್ನೆಲುಬಾಗಿರುವ ಮಹಿಳೆಯರ ಪರಿಶ್ರಮ ಸ್ಮರಿಸುವ ದಿನದ ವಿಶೇಷ ವರದಿ – ಅಂತಾರಾಷ್ಟ್ರೀಯ ಸಂಸ್ಥೆಗಳು ಇದನ್ನು ಅಧಿಕೃತ ದಿನವನ್ನಾಗಿ ಘೋಷಿಸಿಲ್ಲ. ಆದರೂ ಸಾಮಾಜಿಕ ಮಾಧ್ಯಮ ಮತ್ತು ಅಂತರ್ಜಾಲದ ಮೂಲಕ ಈ ದಿನದ ಬಗ್ಗೆ ಜಾಗೃತಿ ಚಾಲ್ತಿಯಲ್ಲಿದೆ.
ಹುಬ್ಬಳ್ಳಿ : ಮನೆಯೆಂಬ ಪುಟ್ಟ ಜಗತ್ತನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರಿಂದ ಹಿಡಿದು ಕುಟುಂಬದ ಪ್ರತಿಯೊಬ್ಬ ಸದಸ್ಯರ ಅಗತ್ಯಗಳನ್ನು ಪೂರೈಸುವವರೆಗೆ ಗೃಹಿಣಿಯರ ಜವಾಬ್ದಾರಿ ಅಪಾರ. ಅಡುಗೆ, ಸ್ವಚ್ಛತೆ, ಮಕ್ಕಳ ಆರೈಕೆ, ಹಿರಿಯರ ಕಾಳಜಿ, ಮನೆಯ ಖರ್ಚಿನ ನಿರ್ವಹಣೆ, ದಿನನಿತ್ಯದ ಯೋಜನೆ ಹೀಗೆ ಹಲವು ಕೆಲಸಗಳನ್ನು ಯಾವುದೇ ನಿಗದಿತ ಕೆಲಸದ ಅವಧಿ ಅಥವಾ ಸಂಬಳವಿಲ್ಲದೆ ನಿರ್ವಹಿಸುವ ಗೃಹಿಣಿಯರ ಪರಿಶ್ರಮವನ್ನು ಗುರುತಿಸುವ ಉದ್ದೇಶದಿಂದ ಪ್ರತಿವರ್ಷ ನವೆಂಬರ್ 3ರಂದು ರಾಷ್ಟ್ರೀಯ ಗೃಹಿಣಿಯರ ದಿನವನ್ನು (National Housewife’s Day) ಗುರುತಿಸಲಾಗುತ್ತದೆ.
ಈ ದಿನವು ಮುಖ್ಯವಾಗಿ ಅಮೆರಿಕದಲ್ಲಿ ಪ್ರಚಲಿತದಲ್ಲಿರುವ ಅನೌಪಚಾರಿಕ ಆಚರಣೆಯಾಗಿದೆ. ವಿಶ್ವಸಂಸ್ಥೆ (UN) ಅಥವಾ ಇತರ ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆಗಳು ಇದನ್ನು ಅಧಿಕೃತ ದಿನವನ್ನಾಗಿ ಘೋಷಿಸಿಲ್ಲ. ಆದರೂ ಸಾಮಾಜಿಕ ಮಾಧ್ಯಮ ಮತ್ತು ಅಂತರ್ಜಾಲದ ಮೂಲಕ ಈ ದಿನದ ಬಗ್ಗೆ ಜಾಗೃತಿ ಹೆಚ್ಚಿದ್ದು, ವಿವಿಧ ದೇಶಗಳಲ್ಲಿಯೂ ಗೃಹಿಣಿಯರ ಕೊಡುಗೆಯನ್ನು ಸ್ಮರಿಸುವವರು ಇದ್ದಾರೆ.
ಇತಿಹಾಸ ಮತ್ತು ಹಿನ್ನೆಲೆ : ರಾಷ್ಟ್ರೀಯ ಗೃಹಿಣಿಯರ ದಿನದ ಆರಂಭ ಯಾವಾಗ, ಯಾರಿಂದ ಆಯಿತು ಎಂಬುದಕ್ಕೆ ನಿಖರವಾದ ಐತಿಹಾಸಿಕ ದಾಖಲೆಗಳಿಲ್ಲ. ಈ ದಿನದ ಆಚರಣೆ ಆರಂಭಿದ ಬಗ್ಗೆ ಸ್ಪಷ್ಟತೆ ಇಲ್ಲದೆ ಇದ್ದರು. ಜಾಗತಿಕವಾಗಿ ರಾಷ್ಟ್ರೀಯ ದಿನಗಳ ಮಾಹಿತಿ ಸಂಗ್ರಹಿಸುವ ಜಾಲತಾಣಗಳು ಸೇರದಂತೆ ನೆಟ್ಟಿಗರು ನವೆಂಬರ್ 3ರಂದು ರಾಷ್ಟ್ರೀಯ ಗೃಹಿಣಿಯರ ದಿನವನ್ನಾಗಿ ಆಚರಿಸುತ್ತಾರೆ. ಹೀಗಾಗಿ ಇದನ್ನು ಅಧಿಕೃತ ವಿಶ್ವಮಟ್ಟದ ಮಾನ್ಯತೆ ಪಡೆದ ದಿನವೆಂದು ಪರಿಗಣಿಸುವಂತಿಲ್ಲ.
ಆದರೆ ಈ ಆಚರಣೆಯ ಹಿಂದಿರುವ ಉದ್ದೇಶ ಬಹಳ ಮಹತ್ವದ್ದಾಗಿದೆ. ಹಿಂದೆ ಅನೇಕ ಕುಟುಂಬಗಳಲ್ಲಿ ಪುರುಷರು ಹೊರಗೆ ದುಡಿದು ಆದಾಯ ತರುತ್ತಿದ್ದರೆ, ಮಹಿಳೆಯರು ಮನೆಯ ನಿರ್ವಹಣೆ ಮತ್ತು ಮಕ್ಕಳ ಪಾಲನೆಯ ಜವಾಬ್ದಾರಿ ಹೊತ್ತುಕೊಳ್ಳುತ್ತಿದ್ದರು. ಕಾಲ ಬದಲಾದಂತೆ ಮಹಿಳೆಯರು ಶಿಕ್ಷಣ, ಉದ್ಯೋಗ, ಉದ್ಯಮ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಮುನ್ನಡೆಯುತ್ತಿದ್ದಾರೆ. ಆದರೂ ಅನೇಕ ಕುಟುಂಬಗಳಲ್ಲಿ ಮನೆಯ ಬಹುಪಾಲು ಜವಾಬ್ದಾರಿಗಳು ಮಹಿಳೆಯರ ಮೇಲೆಯೇ ಉಳಿದಿವೆ.
ಗೃಹಿಣಿಯ ಕೆಲಸ ಕೇವಲ ಮನೆಕೆಲಸವಲ್ಲ! : ಗೃಹಿಣಿಯ ದಿನ ಬೆಳಗಿನ ಜಾವದಿಂದಲೇ ಆರಂಭವಾಗುತ್ತದೆ. ಕುಟುಂಬದವರಿಗಾಗಿ ಅಡುಗೆ ಸಿದ್ಧಪಡಿಸುವುದು, ಮಕ್ಕಳನ್ನು ಶಾಲೆಗೆ ಕಳುಹಿಸುವುದು, ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು, ದಿನಸಿ ಖರೀದಿ, ಮನೆ ಖರ್ಚಿನ ಬಜೆಟ್ ನಿರ್ವಹಣೆ, ಮನೆ ಸ್ವಚ್ಛತೆ ಮತ್ತು ಕುಟುಂಬದ ಅಗತ್ಯಗಳಿಗೆ ಅನುಗುಣವಾಗಿ ದಿನಚರಿ ರೂಪಿಸುವುದು ಹೀಗೆ ಕೆಲಸಗಳ ಪಟ್ಟಿ ಮುಂದುವರಿಯುತ್ತಲೇ ಇರುತ್ತದೆ.
ಇದರ ಜೊತೆಗೆ ಕುಟುಂಬದ ಸದಸ್ಯರ ಭಾವನಾತ್ಮಕ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದು, ಮಕ್ಕಳ ಶಿಕ್ಷಣದ ಬಗ್ಗೆ ಗಮನಹರಿಸುವುದು, ಅನಾರೋಗ್ಯದ ಸಂದರ್ಭದಲ್ಲಿ ಆರೈಕೆ ಮಾಡುವುದು ಮತ್ತು ಅನಿರೀಕ್ಷಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದೂ ಅವರ ಜವಾಬ್ದಾರಿಯ ಭಾಗವಾಗಿದೆ. ಈ ಕೆಲಸಗಳಿಗೆ ನಿಗದಿತ ರಜೆ, ವಾರಾಂತ್ಯದ ವಿರಾಮ ಇರುವುದಿಲ್ಲ. ಆದ್ದರಿಂದ ಗೃಹಿಣಿಯರ ಪರಿಶ್ರಮವನ್ನು ಕೇವಲ ದಿನನಿತ್ಯದ ಮನೆಕೆಲಸ ಎಂದು ನೋಡುವ ಬದಲು, ಕುಟುಂಬದ ನಿರ್ವಹಣೆಗೆ ಅಗತ್ಯವಾದ ಮಹತ್ವದ ದುಡಿಮೆಯೆಂದು ಗುರುತಿಸಬೇಕಿದೆ.
‘ಗೃಹಿಣಿ’ ಅಲ್ಲ, ಕುಟುಂಬ ವ್ಯವಸ್ಥಾಪಕಿ! : ಇಂದಿನ ಕಾಲದಲ್ಲಿ ಅನೇಕ ಮಹಿಳೆಯರು ತಮ್ಮ ಕೆಲಸದ ವ್ಯಾಪ್ತಿ ಮತ್ತು ಜವಾಬ್ದಾರಿಯ ಗಂಭೀರತೆಯನ್ನು ಪ್ರತಿಬಿಂಬಿಸುವಂತೆ ‘ಕುಟುಂಬ ವ್ಯವಸ್ಥಾಪಕಿ’ (Family Manager) ಅಥವಾ ‘ಗೃಹ ಎಂಜಿನಿಯರ್’ (Domestic Engineer) ಎಂಬ ಪದಗಳನ್ನು ಬಳಸಲು ಇಷ್ಟಪಡುತ್ತಾರೆ. ಮನೆಯ ಆರ್ಥಿಕ ನಿರ್ವಹಣೆ, ಸಂಪನ್ಮೂಲಗಳ ಬಳಕೆ, ಸಮಯದ ಯೋಜನೆ, ಮಕ್ಕಳ ಬೆಳವಣಿಗೆ ಮತ್ತು ಕುಟುಂಬದ ಅಗತ್ಯಗಳನ್ನು ಸಮನ್ವಯಗೊಳಿಸುವ ಅವರ ಪಾತ್ರವನ್ನು ಈ ಪದಗಳು ಬಿಂಬಿಸುತ್ತವೆ.
ಇದೇ ವೇಳೆ, ಮನೆಯ ನಿರ್ವಹಣೆ ಮಹಿಳೆಯರೊಬ್ಬರ ಜವಾಬ್ದಾರಿಯಲ್ಲ ಎಂಬ ಅರಿವೂ ಬೆಳೆಯಬೇಕಿದೆ. ಕುಟುಂಬದ ಎಲ್ಲ ಸದಸ್ಯರು ಮನೆಕೆಲಸವನ್ನು ಹಂಚಿಕೊಳ್ಳುವುದು, ಮಹಿಳೆಯರ ವಿಶ್ರಾಂತಿ ಮತ್ತು ವೈಯಕ್ತಿಕ ಆಸಕ್ತಿಗಳಿಗೆ ಸಮಯ ನೀಡುವುದು ಹಾಗೂ ಅವರ ಆರ್ಥಿಕ ಭದ್ರತೆಯ ಬಗ್ಗೆ ಗಮನಹರಿಸುವುದು ಸಮಾನತೆಯ ಕುಟುಂಬ ವ್ಯವಸ್ಥೆಗೆ ಅಗತ್ಯವಾಗಿದೆ.
2026ರಲ್ಲಿ ಈ ದಿನದ ಮಹತ್ವ : 2026ರ ನವೆಂಬರ್ 3ರಂದು ರಾಷ್ಟ್ರೀಯ ಗೃಹಿಣಿಯರ ದಿನವನ್ನು ಸಾಮಾಜಿಕ ಮಾಧ್ಯಮಗಳಲ್ಲಿ #NationalHousewifesDay ಮತ್ತು #NationalHousewifeDay ಹ್ಯಾಶ್ಟ್ಯಾಗ್ಗಳ ಮೂಲಕ ಗುರುತಿಸಲಾಗುತ್ತಿದೆ. ಗೃಹಿಣಿಯರಿಗೆ ಧನ್ಯವಾದ ಹೇಳುವುದು ಮಾತ್ರವಲ್ಲದೆ, ಅವರ ದಿನನಿತ್ಯದ ಕೆಲಸದ ಹೊರೆ ಕಡಿಮೆ ಮಾಡುವಂತಹ ಕಾರ್ಯಗಳನ್ನು ಕೈಗೊಳ್ಳುವಂತೆ ಈ ದಿನ ಪ್ರೇರೇಪಿಸುತ್ತದೆ.
ಗೃಹಿಣಿಯರಿಗೆ ಒಂದು ದಿನ ವಿಶ್ರಾಂತಿ ನೀಡುವುದು, ಮನೆಯ ಕೆಲಸಗಳನ್ನು ಕುಟುಂಬದ ಇತರ ಸದಸ್ಯರು ಹಂಚಿಕೊಳ್ಳುವುದು, ಅವರ ಶಿಕ್ಷಣ ಅಥವಾ ಉದ್ಯೋಗದ ಆಸಕ್ತಿಗಳಿಗೆ ಪ್ರೋತ್ಸಾಹ ನೀಡುವುದು ಮತ್ತು ಮನೆಯ ಆರ್ಥಿಕ ನಿರ್ಧಾರಗಳಲ್ಲಿ ಸಮಾನ ಪಾಲುದಾರಿಕೆ ಕಲ್ಪಿಸುವುದು ಈ ದಿನದ ಆಶಯಕ್ಕೆ ಹೊಂದುವ ಕಾರ್ಯಗಳಾಗಿವೆ.
ಗೃಹಿಣಿಯರ ಪರಿಶ್ರಮಕ್ಕೆ ಗೌರವ ನೀಡುವುದು ಒಂದು ದಿನದ ಆಚರಣೆಗೆ ಸೀಮಿತವಾಗಬಾರದು. ಕುಟುಂಬದ ಸುಗಮ ನಿರ್ವಹಣೆಗೆ ಅವರು ನೀಡುವ ಕೊಡುಗೆಯನ್ನು ಪ್ರತಿದಿನವೂ ಗುರುತಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಮನೆಯ ಜವಾಬ್ದಾರಿಯನ್ನು ಹಂಚಿಕೊಳ್ಳುವ ಮೂಲಕ ಅವರ ಕೆಲಸಕ್ಕೆ ನಿಜವಾದ ಗೌರವ ನೀಡಿದಂತಾಗುತ್ತದೆ.





















