Home Advertisement
Home ಆರೋಗ್ಯ Health Tips: ಹೈ ಬಿಪಿ ಸಮಸ್ಯೆಯೇ?; ನಿಮ್ಮ ಜೀವನಶೈಲಿಯಲ್ಲಿ ಈ ಬದಲಾವಣೆಗಳನ್ನು ಇಂದೇ ರೂಢಿಸಿಕೊಳ್ಳಿ!

Health Tips: ಹೈ ಬಿಪಿ ಸಮಸ್ಯೆಯೇ?; ನಿಮ್ಮ ಜೀವನಶೈಲಿಯಲ್ಲಿ ಈ ಬದಲಾವಣೆಗಳನ್ನು ಇಂದೇ ರೂಢಿಸಿಕೊಳ್ಳಿ!

0
58

Health Tips: ಈಚೀನ ಒತ್ತಡದ ಜೀವನದಲ್ಲಿ ಅಧಿಕ ರಕ್ತದೊತ್ತಡ (High BP) ಎಂಬುದು ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಆದ್ರೆ ಸರಿಯಾದ ಆಹಾರ ಪದ್ಧತಿ ಮತ್ತು ಶಿಸ್ತುಬದ್ಧ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಇದನ್ನು ಸುಲಭವಾಗಿ ನಿಯಂತ್ರಣದಲ್ಲಿ ಇಡಬಹುದು. ಬಿಪಿ ಕಡಿಮೆ ಮಾಡಲು ಮುಖ್ಯವಾಗಿ ‘ಡ್ಯಾಶ್’ (DASH – Dietary Approaches to Stop Hypertension) ಈ ಆಹಾರ ಪದ್ಧತಿಯನ್ನು ವೈದ್ಯರು ಶಿಫಾರಸು ಮಾಡುತ್ತಾರೆ.

ಈ ಆಹಾರಗಳನ್ನು ಸೇವಿಸುವ ಮುನ್ನ ಎಚ್ಚರ: ಬಿಪಿ ಇರುವವರು ಮೊದಲು ಮಾಡಬೇಕಾದ ಬದಲಾವಣೆ ಎಂದರೆ ಉಪ್ಪಿನ ಬಳಕೆಯನ್ನು ಕಡಿಮೆ ಮಾಡುವುದು. ದಿನಕ್ಕೆ 5 ಗ್ರಾಂ ಗಿಂತ ಹೆಚ್ಚು ಉಪ್ಪು ಬಳಸಬಾರದು. ಸಂಸ್ಕರಿಸಿದ ಆಹಾರ, ಉಪ್ಪಿನಕಾಯಿ, ಹಪ್ಪಳ ಮತ್ತು ಬೇಕರಿ ತಿಂಡಿಗಳಿಂದ ದೂರವಿರುವುದು ಒಳ್ಳೆಯದು. ಬದಲಾಗಿ ಎಂತಹ ಆಹಾರಗಳನ್ನು ಸೇವಿಸುವುದು ಸೂಕ್ತ, ಇಲ್ಲಿದೆ ಡಿಟೇಲ್ಸ್..‌

ಇವುಗಳನ್ನು ಹೆಚ್ಚು ತಿನ್ನಬೇಕು: ಆಹಾರದಲ್ಲಿ ಪೊಟ್ಯಾಸಿಯಮ್ ಹೆಚ್ಚಿರುವ ಬಾಳೆಹಣ್ಣು, ಪಾಲಕ್ ಸೊಪ್ಪು, ಮತ್ತು ಸಿಟ್ರಸ್ ಹಣ್ಣುಗಳನ್ನು ಸೇರಿಸಿಕೊಳ್ಳಬೇಕು. ಇವು ರಕ್ತನಾಳಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತವೆ. ದಿನನಿತ್ಯದ ಊಟದಲ್ಲಿ ನಾರಿನಂಶವಿರುವ ಧಾನ್ಯಗಳು, ಹಸಿರು ತರಕಾರಿ ಮತ್ತು ಮೊಳಕೆ ಬರಿಸಿದ ಕಾಳುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ ಇಂತಹವುಗಳಿಗೆ ಹೆಚ್ಚು ಆದ್ಯತೆ ನೀಡಬೇಕು.

ಜೀವನಶೈಲಿಯ ಬದಲಾವಣೆಗಳು: ಕೇವಲ ಆಹಾರವಷ್ಟೇ ಅಲ್ಲದೆ, ದೈಹಿಕ ಚಟುವಟಿಕೆಯೂ ಅಷ್ಟೇ ಮುಖ್ಯ. ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ವೇಗದ ನಡಿಗೆ, ಯೋಗ ಅಥವಾ ಸೈಕ್ಲಿಂಗ್ ಮಾಡುವುದರಿಂದ ರಕ್ತ ಪರಿಚಲನೆ ಸುಗಮವಾಗುತ್ತದೆ. ಧೂಮಪಾನ ಮತ್ತು ಮದ್ಯಪಾನ ರಕ್ತದೊತ್ತಡವನ್ನು ದಿಢೀರನೆ ಹೆಚ್ಚಿಸುವುದರಿಂದ ಇವುಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ಉತ್ತಮ. ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಿಪಿ ಕಡಿಮೆ ಮಾಡಲು ಇರುವ ಮೊದಲ ಹೆಜ್ಜೆ.

ಮನಸ್ಸಿನ ಶಾಂತಿ ಮತ್ತು ನಿದ್ರೆ: ಮಾನಸಿಕ ಒತ್ತಡವು ಬಿಪಿ ಹೆಚ್ಚಾಗಲು ಪ್ರಮುಖ ಕಾರಣ. ಹೀಗಾಗಿ ಪ್ರಾಣಾಯಾಮ, ಧ್ಯಾನದಂತಹ ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ದಿನಕ್ಕೆ ಕನಿಷ್ಠ 7-8 ಗಂಟೆಗಳ ಕಾಲ ಗಾಢವಾದ ನಿದ್ರೆ ಅತ್ಯಗತ್ಯ. ನಿಯಮಿತವಾಗಿ ವೈದ್ಯರನ್ನು ಭೇಟಿ ಮಾಡಿ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳುವುದು ಮತ್ತು ವೈದ್ಯರು ಸೂಚಿಸಿದ ಮಾತ್ರೆಗಳನ್ನು ಮರೆಯದೆ ಸೇವಿಸುವುದು ಈ ಕಾಯಿಲೆಯನ್ನು ದೂರವಿಡಲು ಸಹಕಾರಿ. ಈ ಸರಳ ಬದಲಾವಣೆಗಳು ನಿಮ್ಮನ್ನು ದೀರ್ಘಕಾಲದವರೆಗೆ ಆರೋಗ್ಯವಾಗಿರಿಸುತ್ತವೆ.