ಕರ್ನಾಟಕದ ಪ್ರತಿಭೆಗೆ ವಿಶ್ವದ ಮೆಚ್ಚುಗೆ: ಮೊದಲ ಭಾರತೀಯ ನಿರ್ದೇಶಕಿಗೆ ಅಪರೂಪದ ಗೌರವ, ಅನೂಯಾ ಸ್ವಾಮಿ ‘ಪಂಕಜಾ’ಗೆ ಅಂತರರಾಷ್ಟ್ರೀಯ ಗೌರವ ರೇನ್‌ಡಾನ್ಸ್‌ನಲ್ಲಿ ‘ಪಂಕಜಾ’ಗೆ ಶ್ರೇಷ್ಠ ಕಿರುಚಿತ್ರ ಪ್ರಶಸ್ತಿ.
ಬೆಂಗಳೂರು: ಕರ್ನಾಟಕದ ಸಿನಿರಂಗಕ್ಕೆ ಮತ್ತೊಂದು ಹೆಮ್ಮೆಯ ಕ್ಷಣ ಸಿಕ್ಕಿದ್ದು, ಲಂಡನ್‌ನಲ್ಲಿ ನಡೆದ 34ನೇ ರೇನ್‌ಡಾನ್ಸ್ ಚಲನಚಿತ್ರೋತ್ಸವ (Raindance Film Festival)ದಲ್ಲಿ ಕನ್ನಡದ ‘ಪಂಕಜಾ’ ಕಿರುಚಿತ್ರ ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ (Best Live Action Short Film) ಪ್ರಶಸ್ತಿಯನ್ನು ಗೆದ್ದಿದೆ. ಈ ಸಾಧನೆಯ ಮೂಲಕ ಕರ್ನಾಟಕದ ಪ್ರತಿಭೆ ಮತ್ತೊಮ್ಮೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಮೆರೆಯುವಂತಾಗಿದೆ.
ಈ ಕಿರುಚಿತ್ರವನ್ನು ನಿರ್ದೇಶಿಸಿರುವ ಅನೂಯಾ ಸ್ವಾಮಿ ಅವರು ಈ ವಿಭಾಗದಲ್ಲಿ ರೇನ್‌ಡಾನ್ಸ್ ಚಲನಚಿತ್ರೋತ್ಸವದ ಅತ್ಯುನ್ನತ ಗೌರವ ಪಡೆದ ಮೊದಲ ಭಾರತೀಯ ಚಲನಚಿತ್ರ ನಿರ್ಮಾಪಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊತೆಗೆ, ಈ ಪ್ರಶಸ್ತಿಯೊಂದಿಗೆ ‘ಪಂಕಜಾ’ ಚಿತ್ರವು ಪ್ರತಿಷ್ಠಿತ ಅಕಾಡೆಮಿ ಪ್ರಶಸ್ತಿ (ಆಸ್ಕರ್) ಪರಿಗಣನೆಗೆ ಅರ್ಹತೆ ಪಡೆಯುವ ಮಹತ್ವದ ಮೈಲಿಗಲ್ಲನ್ನೂ ತಲುಪಿದೆ.
ಇದನ್ನೂ ಓದಿ: ಗಣೇಶ್ 2 ದಶಕದ ಸಂಭ್ರಮ: ‘ಬೃಂದಾವಿಹಾರಿ’ ರಿಲೀಸ್ ಡೇಟ್ ಫಿಕ್ಸ್!
ಈ ಸಾಧನೆಗೆ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದು, ಕರ್ನಾಟಕದ ಕಥೆಗಾರರ ಸೃಜನಶೀಲತೆ, ಪ್ರತಿಭೆ ಮತ್ತು ಜಾಗತಿಕ ಮಟ್ಟದ ಸಾಮರ್ಥ್ಯಕ್ಕೆ ಇದು ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ. ಅನೂಯಾ ಸ್ವಾಮಿ ಹಾಗೂ ಚಿತ್ರತಂಡ ಮುಂದಿನ ದಿನಗಳಲ್ಲಿ ಇನ್ನಷ್ಟು ಅಂತರರಾಷ್ಟ್ರೀಯ ಯಶಸ್ಸುಗಳನ್ನು ಗಳಿಸಲಿ ಎಂದು ಅವರು ಶುಭ ಹಾರೈಸಿದ್ದಾರೆ.
ರೇನ್‌ಡಾನ್ಸ್ ಚಲನಚಿತ್ರೋತ್ಸವವು ವಿಶ್ವದ ಅತ್ಯಂತ ಪ್ರತಿಷ್ಠಿತ ಸ್ವತಂತ್ರ (Independent) ಚಲನಚಿತ್ರೋತ್ಸವಗಳಲ್ಲಿ ಒಂದಾಗಿ ಪರಿಗಣಿಸಲ್ಪಡುತ್ತದೆ. ಇಲ್ಲಿ ಪ್ರಶಸ್ತಿ ಗಳಿಸುವುದು ಜಾಗತಿಕ ಮಟ್ಟದಲ್ಲಿ ಚಲನಚಿತ್ರ ನಿರ್ಮಾಪಕರಿಗೆ ಮಹತ್ವದ ಗುರುತಾಗಿದ್ದು, ಆಸ್ಕರ್ ಸ್ಪರ್ಧೆಗೆ ಅರ್ಹತೆ ಪಡೆಯುವ ಅವಕಾಶವನ್ನೂ ಒದಗಿಸುತ್ತದೆ.
ಇದನ್ನೂ ಓದಿ: 30 ವರ್ಷಗಳ ಬಳಿಕ ‘ಅಮೇರಿಕಾ ಅಮೇರಿಕಾ’ ಹೆಸರಿನಲ್ಲಿ ಹೊಸ ಸಿನಿಮಾ
‘ಪಂಕಜಾ’ ಚಿತ್ರದ ಈ ಐತಿಹಾಸಿಕ ಸಾಧನೆ ಕನ್ನಡ ಚಿತ್ರರಂಗಕ್ಕೆ ಹೊಸ ಗೌರವವನ್ನು ತಂದುಕೊಟ್ಟಿದ್ದು, ಕರ್ನಾಟಕದ ಕಥೆಗಳು ಮತ್ತು ಪ್ರತಿಭೆಗಳು ವಿಶ್ವಮಟ್ಟದಲ್ಲಿ ಮತ್ತಷ್ಟು ಗಮನ ಸೆಳೆಯುತ್ತಿರುವುದಕ್ಕೆ ಇದು ಮತ್ತೊಂದು ನಿದರ್ಶನವಾಗಿದೆ. ಚಿತ್ರತಂಡದ ಈ ಯಶಸ್ಸು ಕನ್ನಡ ಸಿನಿಪ್ರೇಮಿಗಳಲ್ಲೂ ಸಂತಸ ಮೂಡಿಸಿದ್ದು, ಭವಿಷ್ಯದಲ್ಲಿ ಇನ್ನಷ್ಟು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆಲ್ಲುವ ವಿಶ್ವಾಸವನ್ನು ಹೆಚ್ಚಿಸಿದೆ.






















