SK Home Ad
Home ಸಿನಿ ಮಿಲ್ಸ್ ‘ಟಾಕ್ಸಿಕ್‌’ಗೆ ಭರ್ಜರಿ ಬೇಡಿಕೆ: ಬಿಡುಗಡೆಗೂ ಮುನ್ನವೇ ₹30 ಕೋಟಿ ಮುಂಗಡ ಗಳಿಕೆ

‘ಟಾಕ್ಸಿಕ್‌’ಗೆ ಭರ್ಜರಿ ಬೇಡಿಕೆ: ಬಿಡುಗಡೆಗೂ ಮುನ್ನವೇ ₹30 ಕೋಟಿ ಮುಂಗಡ ಗಳಿಕೆ

0
90

ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್‌’ ಸಿನಿಮಾದ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಚಿತ್ರತಂಡಕ್ಕೆ ಮುಂಗಡ ಟಿಕೆಟ್‌ ಬುಕಿಂಗ್‌ನಲ್ಲೇ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬುಕಿಂಗ್‌ ಆರಂಭವಾದ ಮೊದಲ ಎರಡು ದಿನಗಳಲ್ಲೇ ದೇಶಾದ್ಯಂತ ₹30 ಕೋಟಿಗೂ ಅಧಿಕ ಮೊತ್ತದ ಟಿಕೆಟ್‌ಗಳು ಮಾರಾಟವಾಗಿವೆ.

ಆಗಸ್ಟ್‌ 21ರಂದು ಬೆಳಗ್ಗೆ 6 ಗಂಟೆಯಿಂದ ‘ಟಾಕ್ಸಿಕ್‌’ ಚಿತ್ರದ ಮುಂಗಡ ಟಿಕೆಟ್‌ ಬುಕಿಂಗ್‌ ಆರಂಭಗೊಂಡಿತ್ತು. ಈವರೆಗೆ ವಿವಿಧ ಭಾಷೆಗಳಲ್ಲಿ 4.5 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿದ್ದು, ದೇಶಾದ್ಯಂತ 12,609ಕ್ಕೂ ಹೆಚ್ಚು ಪ್ರದರ್ಶನಗಳಿಗೆ ಮುಂಗಡ ಬುಕ್ಕಿಂಗ್‌ ನಡೆದಿದೆ ಎಂದು ಸ್ಯಾಕ್ನಿಲ್ಕ್‌ ವರದಿ ತಿಳಿಸಿದೆ.

ಬುಕಿಂಗ್‌ನಲ್ಲಿ ಕನ್ನಡ ಆವೃತ್ತಿಗೆ ಭರ್ಜರಿ ಬೇಡಿಕೆ ಕಂಡುಬಂದಿದೆ. ಕನ್ನಡದಲ್ಲಿ ₹9.6 ಕೋಟಿ ಹಾಗೂ ಹಿಂದಿ ಆವೃತ್ತಿಯಲ್ಲಿ ₹7.72 ಕೋಟಿ ಮುಂಗಡ ಆದಾಯ ದಾಖಲಾಗಿದೆ. 2ಡಿ ಮಾತ್ರವಲ್ಲದೆ ಐಮ್ಯಾಕ್ಸ್‌ ಮತ್ತು 4DX ಸೇರಿದಂತೆ ಪ್ರೀಮಿಯಂ ಪ್ರದರ್ಶನಗಳ ಟಿಕೆಟ್‌ಗಳಿಗೂ ಉತ್ತಮ ಬೇಡಿಕೆ ವ್ಯಕ್ತವಾಗಿದೆ.

ಕರ್ನಾಟಕವೇ ಮುಂಚೂಣಿಯಲ್ಲಿ: ‘ಟಾಕ್ಸಿಕ್‌’ ಮುಂಗಡ ಬುಕಿಂಗ್‌ನಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ 1,744 ಪ್ರದರ್ಶನಗಳು ಈಗಾಗಲೇ ಭರ್ತಿಯಾಗಿದ್ದು, ₹10.69 ಕೋಟಿಗೂ ಅಧಿಕ ಮೊತ್ತದ ಟಿಕೆಟ್‌ಗಳು ಮುಂಗಡವಾಗಿ ಮಾರಾಟವಾಗಿವೆ. ಗುಜರಾತ್‌ನಲ್ಲಿ 2,319 ಹಾಗೂ ಮಹಾರಾಷ್ಟ್ರದಲ್ಲಿ 2,189 ಪ್ರದರ್ಶನಗಳು ಬುಕ್‌ ಆಗಿವೆ.

ಇನ್ನು ಪಶ್ಚಿಮ ಬಂಗಾಳದಲ್ಲಿ ₹89.51 ಲಕ್ಷ, ದೆಹಲಿಯಲ್ಲಿ ₹87.92 ಲಕ್ಷ ಹಾಗೂ ಉತ್ತರ ಪ್ರದೇಶದಲ್ಲಿ ₹80.29 ಲಕ್ಷ ಮೊತ್ತದ ಮುಂಗಡ ಬುಕಿಂಗ್‌ ನಡೆದಿದೆ.

ಆಗಸ್ಟ್‌ 26ರಂದು ತೆರೆಗೆ: ಗೀತು ಮೋಹನ್‌ದಾಸ್‌ ನಿರ್ದೇಶನದ ‘ಟಾಕ್ಸಿಕ್‌’ ಚಿತ್ರದಲ್ಲಿ ಯಶ್‌ ಜತೆಗೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್‌ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಇಂಗ್ಲಿಷ್‌ ಭಾಷೆಗಳಲ್ಲಿ ಚಿತ್ರ ಏಕಕಾಲದಲ್ಲಿ ತೆರೆಗೆ ಬರಲಿದೆ. ಬಿಡುಗಡೆಗೂ ಮುನ್ನವೇ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡುತ್ತಿರುವ ‘ಟಾಕ್ಸಿಕ್‌’, ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಬಳಿಕ ಯಾವ ಮಟ್ಟದ ದಾಖಲೆ ಬರೆಯಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.