SK Home Ad
Home ಸಿನಿ ಮಿಲ್ಸ್ ಬಿಗ್ ಬಾಸ್ 13: ಕ್ಯಾಪ್ಟನ್ ಪಟ್ಟಕ್ಕೆ ಆಸಿಯಾ ಫೇವರ್; ಸೌಂದರ್ಯ ಶೆಟ್ಟಿ ನಡೆ ವಿರುದ್ಧ ಮನೆಯವರ...

ಬಿಗ್ ಬಾಸ್ 13: ಕ್ಯಾಪ್ಟನ್ ಪಟ್ಟಕ್ಕೆ ಆಸಿಯಾ ಫೇವರ್; ಸೌಂದರ್ಯ ಶೆಟ್ಟಿ ನಡೆ ವಿರುದ್ಧ ಮನೆಯವರ ಮಾತು ಜೋರಾಗಿದೆ!

0
13

BBK13: ‘ಬಿಗ್ ಬಾಸ್ ಕನ್ನಡ ಸೀಸನ್-13’ರ ಹತ್ತನೇ ವಾರದಲ್ಲಿ ಮನೆಯ ಕ್ಯಾಪ್ಟನ್ ಯಾರಾಗಬೇಕು ಎಂಬ ವಿಚಾರಕ್ಕೆ ದೊಡ್ಮನೆಯಲ್ಲಿ ಚರ್ಚೆ ಜೋರಾಗಿದೆ. ಗಾನವಿ ಗೌಡ ಹಾಗೂ ಸೌಂದರ್ಯ ಶೆಟ್ಟಿ ಬದಲು ಆಸಿಯಾ ಫಿರ್ದೋಸ್ ಕ್ಯಾಪ್ಟನ್ ಆಗಬೇಕು ಎಂಬ ಒಲವು ಹಲವರಲ್ಲಿ ವ್ಯಕ್ತವಾಗಿದೆ. ಈ ನಡುವೆ ಗಗನ್ ಚಿನ್ನಪ್ಪ, ತಾಂಡವ್ ರಾಮ್, ಕಿರಣ್ ಶಾಸ್ತ್ರಿ ಹಾಗೂ ಜಗದೀಶ್ ಅವರ ಚರ್ಚೆಯ ವಿಡಿಯೋವನ್ನು ವೀಕ್ಷಕರು ‘ಕಿತಾಪತಿ ಗಂಡಸರು’ ಎಂದು ಕರೆದಿದ್ದಾರೆ. ಹಿಂದಿನ ಸೀಸನ್‌ನಲ್ಲಿ ಗಿಲ್ಲಿನಟ ಬಳಸಿದ್ದ ‘ಕಿತಾಪತಿ ಹೆಂಗಸರು’ ಪದದಂತೆ ಈ ಹೆಸರು ಕೂಡ ಗಮನ ಸೆಳೆದಿದೆ.

ಕ್ಯಾಪ್ಟನ್ಸಿ ಚರ್ಚೆಯಲ್ಲಿ ಜಗದೀಶ್ ಅವರು ಆಸಿಯಾ ಪರ ನಿಂತರೆ, ಗಾನವಿ ಮತ್ತು ಸೌಂದರ್ಯ ವಿರುದ್ಧ ಮಾತುಗಳನ್ನಾಡಿದರು. ಈ ವೇಳೆ ಗಗನ್ ಚಿನ್ನಪ್ಪ ಅವರು ಸೌಂದರ್ಯ ಅವರನ್ನು ನಂಬಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಸೌಂದರ್ಯ ಮತ್ತು ಗಾನವಿ ನಡುವಿನ ಜಗಳದ ನಡುವೆಯೇ ಆಸಿಯಾ ಕ್ಯಾಪ್ಟನ್ಸಿ ಟಾಸ್ಕ್‌ನ ಫೈನಲ್ ಹಂತ ತಲುಪಿದ್ದು, ಪುರುಷ ಸ್ಪರ್ಧಿಗಳ ಬೆಂಬಲ ಸಿಕ್ಕರೆ ಅವರಿಗೆ ಕಿರೀಟ ಒಲಿಯುವ ಸಾಧ್ಯತೆ ಇದೆ. ಇದೇ ವೇಳೆ ಮಂಜ ಅವರು ಟಾಸ್ಕ್‌ಗಳಲ್ಲಿ ಆಸಕ್ತಿ ತೋರಿಸುತ್ತಿಲ್ಲ ಎಂದು ಗಗನ್ ಬೇಸರ ವ್ಯಕ್ತಪಡಿಸಿದರು.

ಮತ್ತೊಂದೆಡೆ, ಈ ವಾರದ ನಾಮಿನೇಷನ್‌ನಿಂದ ಗಗನ್ ಚಿನ್ನಪ್ಪ, ಗಾನವಿ ಗೌಡ, ಆಸಿಯಾ ಫಿರ್ದೋಸ್ ಹಾಗೂ ಪ್ರಶಾಂತ್ ಸೇಫ್ ಆಗಿದ್ದಾರೆ. ತಾಂಡವ್ ರಾಮ್, ಕಿರಣ್ ಶಾಸ್ತ್ರಿ, ಯಶಸ್ ಕೃಷ್ಣ, ಸೌಂದರ್ಯ ಶೆಟ್ಟಿ, ಜಗದೀಶ್, ಧನುಷ್ ಮತ್ತು ಮಂಜ ನಾಮಿನೇಟ್ ಆಗಿದ್ದು, ಮಂಜ ನಿಜವಾದ ಸ್ಪರ್ಧಿಯಲ್ಲ ಎಂಬ ವಿಷಯ ಮನೆಯವರಿಗೆ ಇನ್ನೂ ತಿಳಿದಿಲ್ಲ.

ಇದೇ ವೇಳೆ ಸೌಂದರ್ಯ ಶೆಟ್ಟಿ ಅವರ ಆಟದ ಶೈಲಿ ಮತ್ತು ಪ್ರೋಮೋ ಕಟ್‌ಗಳ ಬಗ್ಗೆ ಮನೆಯೊಳಗೆ ಗಂಭೀರ ಚರ್ಚೆ ನಡೆಯಿತು. ಹಿಂದಿನ ರಿಯಾಲಿಟಿ ಶೋ ಅನುಭವದಿಂದಾಗಿ ಪ್ರೋಮೋ ಹೇಗೆ ಮೂಡಿಬರುತ್ತದೆ ಎಂಬುದನ್ನು ಅರಿತು ಸೌಂದರ್ಯ ಆಟವಾಡುತ್ತಿದ್ದಾರೆ ಎಂದು ಗಗನ್, ಪ್ರಶಾಂತ್, ಜಗದೀಶ್, ತಾಂಡವ್ ಮತ್ತು ಕಿರಣ್ ಆರೋಪಿಸಿದರು. ನಾಮಿನೇಷನ್ ವೇಳೆ ಸಗಣಿ ಹಾಕುವಾಗ ಬಕೆಟ್ ತಾಗಿದ ವಿಚಾರವನ್ನು ದೊಡ್ಡದು ಮಾಡಲಾಗಿದೆ ಎಂದೂ ಸ್ಪರ್ಧಿಗಳು ಅಸಮಾಧಾನ ಹೊರಹಾಕಿದರು.

ಆಸಿಯಾ ಮತ್ತು ಧನುಷ್ ಕೂಡ ಈ ಘಟನೆ ಬಗ್ಗೆ ಮಾತನಾಡಿಕೊಂಡರು. ಸೌಂದರ್ಯ ತಮ್ಮ ಮಾತಿನಿಂದ ಪರಿಸ್ಥಿತಿಯನ್ನು ತಿರುಚಿಕೊಳ್ಳುತ್ತಾರೆ ಎಂಬ ಅಭಿಪ್ರಾಯವನ್ನು ಆಸಿಯಾ ವ್ಯಕ್ತಪಡಿಸಿದರು. ಒಟ್ಟಾರೆಯಾಗಿ 11ನೇ ವಾರದಲ್ಲಿ ಸೌಂದರ್ಯ ಶೆಟ್ಟಿ ವಿರುದ್ಧ ಮನೆಯೊಳಗೆ ಅಸಮಾಧಾನ ಹೆಚ್ಚಾಗುತ್ತಿರುವುದು ಕಂಡುಬಂದಿದೆ.