SK Home Ad
Home ಸಿನಿ ಮಿಲ್ಸ್ ದೊಡ್ಡ ಕನಸು, ವಿಭಿನ್ನ ಕಥೆ: ಗೋವಾ ಚಿತ್ರೋತ್ಸವದಲ್ಲಿ ಮಿಂಚಲಿರುವ ಕನ್ನಡದ ಕಿರುಚಿತ್ರ

ದೊಡ್ಡ ಕನಸು, ವಿಭಿನ್ನ ಕಥೆ: ಗೋವಾ ಚಿತ್ರೋತ್ಸವದಲ್ಲಿ ಮಿಂಚಲಿರುವ ಕನ್ನಡದ ಕಿರುಚಿತ್ರ

0
6

ಗೋವಾ: ಕನ್ನಡದ ಸ್ವತಂತ್ರ ಚಿತ್ರರಂಗಕ್ಕೆ ಮತ್ತೊಂದು ಹೆಮ್ಮೆಯ ಗರಿ ಸಿಕ್ಕಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಯುವ ನಿರ್ದೇಶಕ ಅಭಿಷೇಕ್ ಕೆ.ಎಚ್. ಅವರ ‘ಉಳಿದಿದ್ದು ಸಂಪಿಗೆ ಮಾತ್ರ’ ಕಿರುಚಿತ್ರವು 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಇಂಡಿಯನ್ ಪನೋರಮಾ ವಿಭಾಗದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ನಾನ್ ಫೀಚರ್ ಫಿಲ್ಮ್ ವಿಭಾಗದಲ್ಲಿ ಸ್ಥಾನ ಪಡೆದಿರುವ ಈ ಚಿತ್ರ ಇದೀಗ ರಾಷ್ಟ್ರಮಟ್ಟದಲ್ಲಿ ಕನ್ನಡದ ಗಮನ ಸೆಳೆದಿದೆ.

ಮೂರು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿರುವ ಸಾಗರ್ ಪುರಾಣಿಕ್ ಈ ಕಿರುಚಿತ್ರವನ್ನು ನಿರ್ಮಿಸಿದ್ದು, ಅಭಿಷೇಕ್ ಕೆ.ಎಚ್. ನಿರ್ದೇಶನದ ಹೊಣೆ ಹೊತ್ತಿದ್ದಾರೆ. ನವೆಂಬರ್ 20ರಿಂದ 28ರವರೆಗೆ ಗೋವಾದಲ್ಲಿ ನಡೆಯುತ್ತಿರುವ ಚಿತ್ರೋತ್ಸವದಲ್ಲಿ ದೇಶ-ವಿದೇಶಗಳ ಗಣ್ಯ ಚಿತ್ರಗಳ ನಡುವೆ ಕನ್ನಡದ ಈ ಕಿರುಚಿತ್ರವೂ ಪ್ರದರ್ಶನಗೊಳ್ಳಲಿದೆ.

ಎಂಜಿನಿಯರ್‌ನಿಂದ ಸಿನಿಮಾ ನಿರ್ದೇಶಕನ ತನಕ: ಶಿರಸಿಯ ಅಭಿಷೇಕ್ ಕೆ.ಎಚ್. ಅವರ ಸಿನಿಮಾ ಪಯಣವೇ ಹೊಸಬರಿಗೆ ಸ್ಫೂರ್ತಿದಾಯಕ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಹಿನ್ನೆಲೆಯಿಂದ ಬಂದಿರುವ ಅವರು, ವಾಣಿಜ್ಯ ಸಿನಿಮಾಗಳ ಸಿದ್ಧಸೂತ್ರಗಳಿಗಿಂತ ಭಿನ್ನವಾಗಿ ಮಣ್ಣಿನ ಸೊಗಡು, ಮಾನವೀಯ ಸಂಬಂಧ ಹಾಗೂ ಭಾವನಾತ್ಮಕ ಕಥನಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಸೀಮಿತ ಅವಕಾಶಗಳ ನಡುವೆಯೂ ತಮ್ಮ ಸೃಜನಶೀಲತೆಯಿಂದ ಗುರುತಿಸಿಕೊಂಡಿರುವ ಅಭಿಷೇಕ್, ಇದೀಗ ಇಂಡಿಯನ್ ಪನೋರಮಾ ಆಯ್ಕೆಯ ಮೂಲಕ ಮಹತ್ವದ ಸಾಧನೆ ಮಾಡಿದ್ದಾರೆ.

ಶಿರಸಿಯ ಕುಬೇರ ಅವರ ಪುತ್ರನಾಗಿರುವ ಅಭಿಷೇಕ್, ತಮ್ಮ ಊರಿನ ಪ್ರತಿಭೆಯನ್ನು ರಾಷ್ಟ್ರೀಯ ವೇದಿಕೆಯಲ್ಲಿ ಪರಿಚಯಿಸುವ ಅವಕಾಶ ಪಡೆದುಕೊಂಡಿದ್ದಾರೆ. ಎಂಜಿನಿಯರಿಂಗ್ ಕ್ಷೇತ್ರದಿಂದ ಚಿತ್ರರಂಗಕ್ಕೆ ಕಾಲಿಟ್ಟ ಅವರ ಈ ಸಾಧನೆ ಸ್ವತಂತ್ರ ಸಿನಿಮಾ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಿಸಿದೆ.

ದೀಪಕ್ ರೈ ಪಾಣಾಜೆ ಪ್ರಮುಖ ಪಾತ್ರದಲ್ಲಿ: ಕಿರುಚಿತ್ರದಲ್ಲಿ ತುಳು ಹಾಗೂ ಕನ್ನಡ ಚಿತ್ರರಂಗದ ಪರಿಚಿತ ನಟ ದೀಪಕ್ ರೈ ಪಾಣಾಜೆ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಚಿತ್ರದ ಮೂಲಕವೂ ಗಮನ ಸೆಳೆದಿರುವ ಅವರು, ತಮ್ಮ ಸಹಜ ಅಭಿನಯದ ಮೂಲಕ ಪಾತ್ರಕ್ಕೆ ಜೀವ ತುಂಬಿದ್ದಾರೆ. ರಿಚಿ ಹಾಗೂ ಕಾರ್ತಿಕ್ ಸೌಂದರಂ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

IFFIಯಲ್ಲಿ ಕನ್ನಡದ ಹಲವು ಚಿತ್ರಗಳ ಸದ್ದು: ಈ ಬಾರಿಯ 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡ ಚಿತ್ರಗಳಿಗೂ ಉತ್ತಮ ಪ್ರಾತಿನಿಧ್ಯ ದೊರೆತಿದೆ. ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ: ಎ ಲೆಜೆಂಡ್ – ಚಾಪ್ಟರ್ 1’, ಪಿ. ಶೇಷಾದ್ರಿ ನಿರ್ದೇಶನದ ‘ರೂಬಿ-ಕ್ಯೂಬ್’, ‘ದಿ ಹಗ್ ಆಫ್ ಎಂಪ್ಟಿನೆಸ್’ ಹಾಗೂ ‘ಉಳಿದಿದ್ದು ಸಂಪಿಗೆ ಮಾತ್ರ’ ಭಾರತೀಯ ಪನೋರಮಾ ವಿಭಾಗದಲ್ಲಿ ಸ್ಥಾನ ಪಡೆದಿವೆ. ಇದರೊಂದಿಗೆ ತುಳು ಭಾಷೆಯ ‘ಪಿಲಿ ಚನ್ನೆ’ ಚಿತ್ರವೂ ಆಯ್ಕೆಯಾಗಿರುವುದು ಕರಾವಳಿ ಭಾಗದ ಸಿನಿಮಾ ಪ್ರತಿಭೆಗಳಿಗೆ ಮತ್ತೊಂದು ಹೆಗ್ಗಳಿಕೆಯಾಗಿದೆ.