SK Home Ad
Home ಸಿನಿ ಮಿಲ್ಸ್ BBK13: ಸಾಧನೆ, ಮದುವೆ ಹಾಗೂ ಜೈಲು ಪಯಣ: ಕಿಚ್ಚ ಸುದೀಪ್ ಮುಂದೆ ಕಷ್ಟದ ಕಥೆ ಬಿಚ್ಚಿಟ್ಟ...

BBK13: ಸಾಧನೆ, ಮದುವೆ ಹಾಗೂ ಜೈಲು ಪಯಣ: ಕಿಚ್ಚ ಸುದೀಪ್ ಮುಂದೆ ಕಷ್ಟದ ಕಥೆ ಬಿಚ್ಚಿಟ್ಟ ‘ಜೋಡಿ ಹಕ್ಕಿ’ ನಟ

0
14

BBK13: ಕನ್ನಡ ಕಿರುತೆರೆಯ ಜನಪ್ರಿಯ ನಟ, ‘ಜೋಡಿ ಹಕ್ಕಿ’ ಧಾರಾವಾಹಿ ಖ್ಯಾತಿಯ ತಾಂಡವ್ ರಾಮ್ ಬಿಗ್ ಬಾಸ್ ಸೀಸನ್‌ 13ಕ್ಕೆ ಎಂಟ್ರಿಕೊಟ್ಟಿದ್ದಾರೆ. ತಾಂಡವ್‌ ಬಿಗ್‌ ಬಾಸ್‌ ವೇದಿಕೆಗೆ ಬರುವುದಕ್ಕೂ ಮುನ್ನ ಅವರ ಲೈಫ್‌ಸ್ಟೈಲ್‌ ಹೇಗಿತ್ತು ಗೊತ್ತಾ? ಮತ್ತು ಇಷ್ಟು ಕಾಲ ತಾಂಡವ್‌ ಜೀವನದಲ್ಲಿ ನಡೆದ ಆ ಒಂದು ಕಹಿ ಸತ್ಯ ಇದೀಗ ಮತ್ತೇ ಬೆಳಕಿಗೆ ಬಂದಿದೆ.

ಹೌದು.. ತಾಂಡವ್‌ ತಮ್ಮ ಜೀವನದ ಏಳು-ಬೀಳುಗಳು ಮತ್ತು ಜೈಲಿಗೆ ಹೋದ ವಿವಾದದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಕೇವಲ ನಟನಾಗಿ ಪಾತ್ರಗಳಲ್ಲಿ ಜೀವಿಸಿದಲ್ಲಾ, ಅವರ ಬದುಕು ಅಷ್ಟೇ ಕಠಿಣವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಹಾಗಿದ್ರೆ ಏನ್‌ ಆಗಿತ್ತು ನಟನ ಲೈಫ್‌ಲ್ಲಿ? ಇಲ್ಲಿದೆ ಡಿಟೇಲ್ಸ್…

ಜೈಲು ಶಿಕ್ಷೆ ಹಾಗೂ ವಿವಾದಕ್ಕೆ ಸ್ಪಷ್ಟನೆ: 2024ರಲ್ಲಿ ಸಿನಿಮಾ ಒಂದರ ವಿವಾದಕ್ಕೆ ಸಂಬಂಧಿಸಿದಂತೆ ನಿರ್ದೇಶಕರೊಬ್ಬರ ಮೇಲೆ ಗುಂಡು ಹಾರಿಸಿದ ಆರೋಪ ಎದುರಿಸಿದ್ದ ತಾಂಡವ್ ರಾಮ್, ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು. ಈ ಕುರಿತು ಬಿಗ್ ಬಾಸ್ ವಿಟಿಯಲ್ಲಿ ಪರೋಕ್ಷವಾಗಿ ಪ್ರತಿಕ್ರಿಯಿಸಿದ ನಟ, “ಮನುಷ್ಯ ಮಾಡಿಕೊಂಡ ಕಾನೂನಿನಲ್ಲಿ ಅಪರಾಧಿ ನಿರಪರಾಧಿಯಾಗಬಹುದು, ನಿರಪರಾಧಿ ಅಪರಾಧಿಯಾಗಬಹುದು. ಆದ್ರೆ ದೇವರ ಲೆಕ್ಕದಲ್ಲಿ ಅಪರಾಧಿ ಅಪರಾಧಿಯೇ. ಈ ಎಲ್ಲ ಪ್ರಶ್ನೆಗಳಿಗೂ ಸೂಕ್ತ ಸಮಯದಲ್ಲಿ ಉತ್ತರ ನೀಡಿ, ವಿವಾದಕ್ಕೆ ತೆರೆ ಎಳೆಯುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.

ಕ್ರೀಡಾಪಟುವಿನಿಂದ ನಟನೆಯತ್ತ ಪಯಣ: 36 ವರ್ಷದ ತಾಂಡವ್ ರಾಮ್ ಮೂಲತಃ ಹಾಸನದವರು. ನಟನೆಯ ಜತೆಗೆ ಕುಸ್ತಿಪಟು ಹಾಗೂ ಬಾಡಿ ಬಿಲ್ಡರ್ ಆಗಿರುವ ತಾಂಡವ್ 3 ಬಾರಿ ‘ಮಿಸ್ಟರ್ ಸೌತ್’ ಪ್ರಶಸ್ತಿ ಗೆದ್ದು, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಿಂಚಿದ್ದಾರೆ. ಮಧ್ಯಮ ವರ್ಗದ ಕುಟುಂಬದಿಂದ ಬಂದ ನಟ, ಪಿ‍ಯುಸಿ ಓದುತ್ತಿರುವಾಗಲೇ ತಂದೆಯನ್ನು ಕಳೆದುಕೊಂಡರು. ಸಿನಿಮಾ ಕನಸು ಹೊತ್ತು ಬೆಂಗಳೂರಿಗೆ ಬಂದು, ಮೈಸೂರಿನಲ್ಲಿ ನಾಟಕಗಳನ್ನು ಮಾಡುತ್ತಾ, ನಂತರ ಕಿರುತೆರೆ ಪ್ರವೇಶಿಸಿ ಸಫಲರಾದರು.

ಮದುವೆ ಹಾಗೂ ಸಾಧನೆಯ ಗುರಿ: ಕಾರ್ಯಕ್ರಮದಲ್ಲಿ ನಿರೂಪಕ ಕಿಚ್ಚ ಸುದೀಪ್, ತಾಂಡವ್‌ಗೆ ಮದುವೆ ವಿಚಾರವನ್ನು ಪ್ರಸ್ತಾಪಿಸಿ ಕಾಲೆಳೆದರು. ಜೀವನದಲ್ಲಿ ಏನಾದರೂ ಸಾಧನೆ ಮಾಡಿದ ಮೇಲೆಯೇ ಮದುವೆಯಾಗಬೇಕೆಂಬ ಆಸೆಯಿಂದ ಮದುವೆಯನ್ನು ಮುಂದೂಡುತ್ತಾ ಬಂದಿರುವುದಾಗಿ ತಾಂಡವ್ ಹೇಳಿದಾಗ, “ಸಾಧನೆ ಆಯ್ತಾ, ಮದುವೆ ಆಯ್ತಾ?” ಎಂದು ಸುದೀಪ್ ಪ್ರಶ್ನಿಸಿದರು. ಅದಕ್ಕೆ ನಗುತ್ತಲೇ ಉತ್ತರ ನೀಡಿದ ತಾಂಡವ್, “ಇನ್ನೂ ಇಲ್ಲ, ಸಾಧನೆಗಾಗಿ ಕಾಯುತ್ತಿದ್ದರೆ ವಯಸ್ಸು ನಮಗಾಗಿ ಕಾಯುವುದಿಲ್ಲ” ಎಂದು ಒಪ್ಪಿಕೊಂಡರು.

ಒಟ್ಟಾರೆ.. ಜನರ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳದಿರುವುದೇ ತಮ್ಮ ದೊಡ್ಡ ಪ್ಲಸ್ ಪಾಯಿಂಟ್ ಎಂದಿರುವ ತಾಂಡವ್, ಬಿಗ್ ಬಾಸ್ ಮನೆಯಲ್ಲಿ ಸಿಗುವ ಪ್ರತಿಯೊಂದು ಕ್ಷಣವನ್ನೂ ಅರ್ಥಪೂರ್ಣವಾಗಿ ಜೀವಿಸಲು ಬಯಸುವುದಾಗಿ ತಿಳಿಸಿದ್ದಾರೆ.