BBK13: ‘ಬಿಗ್ ಬಾಸ್ ಕನ್ನಡ 13’ರ ಆರಂಭಕ್ಕೂ ಮುನ್ನ ನಡೆದ ‘ಅಗ್ನಿಪರೀಕ್ಷೆ’ಯಲ್ಲಿ ವೀಕ್ಷಕರಿಂದ ಹೆಚ್ಚು ಮತಗಳನ್ನು ಪಡೆದು ಜನಸಾಮಾನ್ಯರ ಕೋಟಾದಡಿ ಕಿರಣ್ ಶಾಸ್ತ್ರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಬಾಗಲಕೋಟೆ ಮೂಲದ ಕಿರಣ್, ತುಮಕೂರಿನ ಶ್ರೀ ಸಿದ್ದಗಂಗಾ ಮಠದಲ್ಲಿ ವ್ಯಾಸಂಗ ಮಾಡಿದ್ದಾರೆ. ಧಾರ್ಮಿಕ ವಿಚಾರಗಳಲ್ಲಿ ಅಪಾರ ಜ್ಞಾನ ಹೊಂದಿರುವ ಕಿರಣ್, ಮುಖ ನೋಡಿ ಭವಿಷ್ಯ ಹೇಳುವ ಕಲೆಯಲ್ಲೂ ಪ್ರವೀಣರು. ಆಟದಲ್ಲಿ ನಿಂಬೆ ಹಣ್ಣನ್ನು ಸದಾ ಬಳಸುತ್ತಿದ್ದರಿಂದ ‘ನಿಂಬೆಕಾಯಿ ಶಾಸ್ತ್ರಿ’ ಎಂಬ ಹೆಸರೂ ಅಗ್ನಿಪರೀಕ್ಷೆಯಿಂದ ಬಂದಿದೆ.
ವೇದಿಕೆ ಮೇಲೆ ಬಂದ ಕಿರಣ್ ಶಾಸ್ತ್ರಿಗೆ ನಿರೂಪಕ ಕಿಚ್ಚ ಸುದೀಪ್ ಸಹ-ಸ್ಪರ್ಧಿಗಳ ಮುಖ ನೋಡಿ ಭವಿಷ್ಯ ಹೇಳುವ ಟಾಸ್ಕ್ ನೀಡಿದರು. ಈ ವೇಳೆ ಸ್ಪರ್ಧಿ ಪ್ರಥಮಾ ಪ್ರಸಾದ್ ಅವರಿಗೆ ‘ಆಂಟಿ’ ಎಂದು ಕಿರಣ್ ಸಂಭೋದಿಸಿದ್ದು ಮಾತಿನ ಚಕಮಕಿಗೆ ಕಾರಣವಾಯಿತು. “ನಾನಿಲ್ಲಿ ಯಾರಿಗೂ ಅಮ್ಮ, ಅಕ್ಕ ಅಥವಾ ಆಂಟಿ ಆಗಲು ಬಂದಿಲ್ಲ. ನಾವೆಲ್ಲರೂ ಸಹ-ಸ್ಪರ್ಧಿಗಳು. ನನ್ನ ಹೆಸರು ಪ್ರಥಮಾ, ಹೀಗಾಗಿ ಆಂಟಿ ಎಂದು ಕರೆಯಬೇಡಿ” ಎಂದು ಪ್ರಥಮಾ ಖಾರವಾಗಿ ಪ್ರತಿಕ್ರಿಯಿಸಿದರು. ತಕ್ಷಣ ಕಿರಣ್, “ನೀವು ಅಮ್ಮನಂತೆ ಕಂಡಿದ್ದಕ್ಕೆ ಹಾಗೆಂದೆ” ಎಂದು ಸ್ಪಷ್ಟನೆ ನೀಡಿದಾಗ, “ಹಾಗಿದ್ದರೆ ಅಮ್ಮ ಎಂದೇ ಕರೆಯಿರಿ, ಆಂಟಿ ಬೇಡ” ಎಂದು ಪ್ರಥಮಾ ಹೇಳಿದರು.
ಬಳಿಕ ಭವಿಷ್ಯ ಹೇಳುತ್ತಾ, “ನೀವು ನಾಲ್ಕೈದು ಜನರಿಗೆ ಒಳಿತನ್ನು ಮಾಡಿದವರು, ಆದ್ರೆ ಕೋಪವೇ ನಿಮಗಿರುವ ಮುಳುವು” ಎಂದು ಕಿರಣ್ ತಿಳಿಸಿದರು. ಈ ವೇಳೆ ಪ್ರಥಮಾ ತಮ್ಮನ್ನು ‘ಒಂಟಿ ಸಲಗ’ ಎಂದು ಕರೆದುಕೊಂಡಾಗ, “ನೀವು ನೋಡಲೂ ಆನೆಯಂತೆಯೇ ಇದ್ದೀರ ಬಿಡಿ” ಎಂದು ಕಿರಣ್ ಕಾಮೆಂಟ್ ಮಾಡಿದರು. ಇದರಿಂದ ಮತ್ತಷ್ಟು ಕೆರಳಿದ ಪ್ರಥಮಾ, “ಇನ್ನೊಬ್ಬರ ದೇಹದ ಬಗ್ಗೆ (ಬಾಡಿ ಶೇಮಿಂಗ್) ಮಾತನಾಡಬೇಡಿ, ವ್ಯಂಗ್ಯ ಮಾಡುವುದನ್ನು ಬಿಟ್ಟು ಗೌರವ ಕೊಡುವುದನ್ನು ಕಲಿಯಿರಿ” ಎಂದು ಕಿರಣ್ ಶಾಸ್ತ್ರಿಗೆ ನೇರ ವಾರ್ನಿಂಗ್ ನೀಡಿದರು. ಗಗನ್ ಚಿನ್ನಪ್ಪ ಕೂಡ ಪ್ರಥಮಾ ಬೆಂಬಲಕ್ಕೆ ನಿಂತರು.
ಸದ್ಯಕ್ಕೆ ಬಿಗ್ ಬಾಸ್ ಟೇಕ್ ಆಫ್ ಆಗಿದ್ದು, ಇನ್ನೂಮುಂದೆ ಸ್ಪರ್ಧಿಗಳು ಯಾವ ರೀತಿ ಆಟವಾಡುತ್ತಾರೆ ಎಂದು ಕಾದುನೋಡಬೇಕಿದೆ.






















