Home Advertisement
Home ಸಿನಿ ಮಿಲ್ಸ್ ದಿಢೀರ್ ಪ್ರತ್ಯಕ್ಷರಾದ ದರ್ಶನ್ ಮಾಜಿ ಮ್ಯಾನೇಜರ್; 8 ವರ್ಷಗಳ ಅಜ್ಞಾತವಾಸ ಅಂತ್ಯ! ನಾನು ಸತ್ತಿಲ್ಲ ಎಂದಿದ್ಯಾಕೆ...

ದಿಢೀರ್ ಪ್ರತ್ಯಕ್ಷರಾದ ದರ್ಶನ್ ಮಾಜಿ ಮ್ಯಾನೇಜರ್; 8 ವರ್ಷಗಳ ಅಜ್ಞಾತವಾಸ ಅಂತ್ಯ! ನಾನು ಸತ್ತಿಲ್ಲ ಎಂದಿದ್ಯಾಕೆ ಮಲ್ಲಿಕಾರ್ಜುನ್?

0
12

ಕಳೆದ ಎಂಟು ವರ್ಷಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಒಂದು ದೊಡ್ಡ ನಿಗೂಢವಾಗಿ ಉಳಿದಿದ್ದ ಹೆಸರು ಮಲ್ಲಿಕಾರ್ಜುನ್. 2018ರಲ್ಲಿ ‘ಪ್ರೇಮಬರಹ’ ಸಿನಿಮಾದ ವಿತರಣೆಯ ವೇಳೆ ನಡೆದ ಒಂದು ಕೋಟಿ ರೂಪಾಯಿ ಹಣಕಾಸು ವಂಚನೆಯ ಆರೋಪ ಕೇಳಿಬರುತ್ತಿದ್ದಂತೆಯೇ, ಯಾರಿಗೂ ತಿಳಿಸದೆ ಮಲ್ಲಿಕಾರ್ಜುನ್ ನಾಪತ್ತೆಯಾಗಿದ್ದರು. ದರ್ಶನ್ ಅವರ ಪರಮಾಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಇವರು, ಸತತ ಏಳು ವರ್ಷಗಳ ಕಾಲ ಅಜ್ಞಾತವಾಸದಲ್ಲಿದ್ದರು. ಇತ್ತೀಚೆಗೆ ನಟ ದರ್ಶನ್ ಸಂಬಂಧಿತ ಪ್ರಕರಣಗಳು ಸುದ್ದಿಯಾಗುತ್ತಿದ್ದಂತೆ, ಮಲ್ಲಿಕಾರ್ಜುನ್ ಅವರ ನಾಪತ್ತೆಯ ಹಿಂದೆ ಏನಾದರೂ ಸಂಚಿದೆಯೇ ಅಥವಾ ಅವರು ಬದುಕಿದ್ದಾರೆಯೇ ಎಂಬ ಅನುಮಾನಗಳು ವ್ಯಕ್ತವಾಗಿದ್ದವು. ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆಯಲು ಸ್ವತಃ ಮಲ್ಲಿಕಾರ್ಜುನ್ ಅವರೇ ಈಗ ಸಾರ್ವಜನಿಕವಾಗಿ ಪ್ರತ್ಯಕ್ಷವಾಗಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಮಲ್ಲಿಕಾರ್ಜುನ್ ಅತ್ಯಂತ ಭಾವುಕರಾಗಿ ತಮ್ಮ ಕಷ್ಟದ ದಿನಗಳನ್ನು ಬಿಚ್ಚಿಟ್ಟಿದ್ದಾರೆ. ತಾವು ಸತ್ತಿಲ್ಲ, ಬದಲಿಗೆ ಜೀವನದಲ್ಲಿ ಸೋತಿರುವ ವ್ಯಕ್ತಿ ಎಂದು ಹೇಳುತ್ತಾ, ಅಂದು ಪರಿಸ್ಥಿತಿಗೆ ಹೆದರಿ ನಾಪತ್ತೆಯಾಗಿದ್ದಾಗಿ ಒಪ್ಪಿಕೊಂಡಿದ್ದಾರೆ. ಸುಮಾರು 8 ಕೋಟಿ ರೂಪಾಯಿಗೂ ಅಧಿಕ ಸಾಲದ ಸುಳಿಗೆ ಸಿಲುಕಿದ್ದ ಅವರು, ತೆಲುಗು ಸಿನಿಮಾಗಳ ನಷ್ಟ ಹಾಗೂ ಹೋಟೆಲ್ ವ್ಯವಹಾರದ ವೈಫಲ್ಯದಿಂದ ಕಂಗೆಟ್ಟಿದ್ದರು. ಒಂದು ಹಂತದಲ್ಲಿ ಜೀವನವೇ ಬೇಡವೆನಿಸಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾಗ, ತಮ್ಮನ ಮದುವೆಯ ವಿಚಾರ ತಿಳಿದು ಆ ನಿರ್ಧಾರದಿಂದ ಹಿಂದೆ ಸರಿದಿದ್ದಾಗಿ ಕಣ್ಣೀರು ಹಾಕಿದ್ದಾರೆ. ತೂಗುದೀಪ ಪ್ರೊಡಕ್ಷನ್ಸ್ ಮತ್ತು ದಿನಕರ್ ತೂಗುದೀಪ ತನ್ನನ್ನು ಮಗನಂತೆ ನೋಡಿಕೊಂಡಿದ್ದರು ಹಾಗೂ ದರ್ಶನ್ ತನ್ನ ಸ್ವಂತ ಅಣ್ಣನಂತಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ತನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ಕೈಮುಗಿದಿರುವ ಮಲ್ಲಿಕಾರ್ಜುನ್, ತಾವು ಯಾವುದೇ ಉದ್ದೇಶಪೂರ್ವಕ ವಂಚನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರೆಸ್ ಮೀಟ್ ಮಾಡಲು ಹಣವಿಲ್ಲದ ಪರಿಸ್ಥಿತಿಯಲ್ಲಿದ್ದ ಅವರು, ಈಗಲಾದರೂ ತಮಗೆ ನೆಮ್ಮದಿಯಿಂದ ಬದುಕಲು ಒಂದು ಅವಕಾಶ ಮಾಡಿಕೊಡಿ ಎಂದು ಮಾಧ್ಯಮಗಳ ಮುಂದೆ ಮನವಿ ಮಾಡಿದ್ದಾರೆ. ವಿಧಿ ಆಟದಿಂದಾಗಿ ಎಲ್ಲವನ್ನೂ ಕಳೆದುಕೊಂಡು ಅಲೆದಾಡುತ್ತಿದ್ದ ಮಲ್ಲಿಕಾರ್ಜುನ್ ಅವರ ಈ ಪುನರಾಗಮನ, ಸದ್ಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.