Home Advertisement
Home ನಮ್ಮ ಜಿಲ್ಲೆ ವಿಜಯಪುರ ವಿಜಯಪುರ: ಭಾರಿ ಮಳೆಗೆ ಮನೆ ಮೇಲ್ಛಾವಣಿ ಕುಸಿತ; ದಂಪತಿ ಸೇರಿ ಇಬ್ಬರು ಮಕ್ಕಳ ದಾರುಣ ಅಂತ್ಯ!

ವಿಜಯಪುರ: ಭಾರಿ ಮಳೆಗೆ ಮನೆ ಮೇಲ್ಛಾವಣಿ ಕುಸಿತ; ದಂಪತಿ ಸೇರಿ ಇಬ್ಬರು ಮಕ್ಕಳ ದಾರುಣ ಅಂತ್ಯ!

0
44

ವಿಜಯಪುರ: ಅಕಾಲಿಕ ಭಾರಿ ಮಳೆಯಿಂದಾಗಿ ಒಂದು ಕುಟುಂಬ ಅತೀ ದೂಡ್ಡ ನಷ್ಟಕ್ಕೆ ಬಲಿಯಾಗಿದೆ. ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಮೋರಟಗಿ ಗ್ರಾಮದಲ್ಲಿ ಗುರುವಾರ ರಾತ್ರಿ ಸಂಭವಿಸಿದ ಭೀಕರ ದುರಂತದಲ್ಲಿ, ಮನೆಯ ಮೇಲ್ಛಾವಣಿ ಕುಸಿದು ದಂಪತಿ ಹಾಗೂ ಇಬ್ಬರು ಪುಟ್ಟ ಹೆಣ್ಣುಮಕ್ಕಳು ಜೀವಂತ ಸಮಾಧಿಯಾಗಿದ್ದಾರೆ. ಸತತವಾಗಿ ಸುರಿಯುತ್ತಿರುವ ಗಾಳಿ-ಮಳೆಯ ಆರ್ಭಟಕ್ಕೆ ಹಳೆಯ ಮನೆಯೊಂದು ತುತ್ತಾಗಿದೆ, ಇಡೀ ಕುಟುಂಬವನ್ನೇ ಬಲಿಪಡೆದಿದೆ.

ಮೃತರ ವಿವರ: ಈ ಘಟನೆಯಲ್ಲಿ ನಲುಗಿದ ಜೀವಗಳನ್ನು ಪತ್ತೆ ಹಚ್ಚಲಾಗಿದೆ. ಮೃತ ಗುರುನಾಥ ಬಡಿಗೇರ (35), ಪತ್ನಿ ಜ್ಯೋತಿ ಬಡಿಗೇರ (28) ಹಾಗೂ ಮಕ್ಕಳಾದ ಕಾಳಮ್ಮ ಬಡಿಗೇರ (13) ಮತ್ತು ಕೀರ್ತಿ ಬಡಿಗೇರ (09) ಎಂದು ಗುರುತಿಸಲಾಗಿದೆ.

ಘಟನೆಯ ಹಿನ್ನೆಲೆ: ಮೃತ ಗುರುನಾಥ ತಮ್ಮ ಸ್ವಂತ ಮನೆಯನ್ನು ದುರಸ್ತಿಗೊಳಿಸುತ್ತಿದ್ದರು. ಈ ಕಾರಣಕ್ಕಾಗಿ ಕಳೆದ ಕೆಲವು ದಿನಗಳಿಂದ ಗ್ರಾಮದ ಹಳೆಯ ಮನೆಯೊಂದರಲ್ಲಿ ಬಾಡಿಗೆಗೆ ವಾಸವಿದ್ದರು. ಗುರುವಾರ ರಾತ್ರಿ ವಿಪರೀತ ಗಾಳಿ ಮತ್ತು ಮಳೆ ಸುರಿಯುತ್ತಿದ್ದ ವೇಳೆ, ಹಳೆಯ ಮನೆಯ ಮೇಲ್ಛಾವಣಿ ಏಕಾಏಕಿ ಕುಸಿದು ಬಿದ್ದಿದೆ. ಗಾಢ ನಿದ್ರೆಯಲ್ಲಿದ್ದ ಕುಟುಂಬದ ಸದಸ್ಯರು ಹೊರಬರಲಾಗದೆ ಅವಶೇಷಗಳಡಿ ಸಿಲುಕಿ ಪ್ರಾಣ ಬಿಟ್ಟಿದ್ದಾರೆ.

ಕಾರ್ಯಾಚರಣೆ: ವಿಷಯ ತಿಳಿಯುತ್ತಿದ್ದಂತೆಯೇ ಸಿಂದಗಿ ಪೊಲೀಸ್ ಠಾಣಾಧಿಕಾರಿಗಳು ಹಾಗೂ ಅಗ್ನಿಶಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದರು. ಅವಶೇಷಗಳ ಅಡಿಯಿಂದ ನಾಲ್ವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಸದ್ಯ ಸ್ಥಳದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಮೋರಟಗಿ ಗ್ರಾಮದಲ್ಲಿ ಮೌನ ಆವರಿಸಿದೆ.

ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಈ ದಾರುಣ ಘಟನೆಯು ಜಿಲ್ಲೆಯ ಜನತೆಯನ್ನು ಕಂಗೆಡಿಸಿದೆ.