SK Home Ad
Home ಸುದ್ದಿ ರಾಜ್ಯ ದೃಢ ಕರ್ನಾಟಕದ ಸಂಕಲ್ಪ: 100 ದಿನಗಳ ಸೇವೆ ಕುರಿತು ಡಿ.ಕೆ. ಶಿವಕುಮಾರ್ ವಿಶೇಷ ಪತ್ರ

ದೃಢ ಕರ್ನಾಟಕದ ಸಂಕಲ್ಪ: 100 ದಿನಗಳ ಸೇವೆ ಕುರಿತು ಡಿ.ಕೆ. ಶಿವಕುಮಾರ್ ವಿಶೇಷ ಪತ್ರ

0
48
100 ದಿನಗಳ ಸೇವೆ ಪೂರ್ಣ: ‘ನಿಮ್ಮ ಮನೆಯ ಮಗನಾಗಿ ಸದಾ ಸೇವೆಗೆ ಸಿದ್ಧ’ ಎಂದ ಡಿಕೆಶಿ

ಬೆಂಗಳೂರು: ರಾಜ್ಯದಲ್ಲಿ ತಮ್ಮ ಸಾರ್ವಜನಿಕ ಸೇವೆಯ 100 ದಿನಗಳ ಅವಧಿಯನ್ನು ಸ್ಮರಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ನಾಡಿನ ಜನರನ್ನುದ್ದೇಶಿಸಿ ವಿಶೇಷ ಪತ್ರ ಹಂಚಿಕೊಂಡಿದ್ದಾರೆ. ಈ ಅವಧಿಯಲ್ಲಿ ಕರ್ನಾಟಕವನ್ನು ಮತ್ತಷ್ಟು ದೃಢ ಹಾಗೂ ಸಾಮಾಜಿಕ-ಆರ್ಥಿಕವಾಗಿ ಸಶಕ್ತ ರಾಜ್ಯವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಹಲವು ಮಹತ್ವದ ಯೋಜನೆಗಳು ಮತ್ತು ಕ್ರಮಗಳಿಗೆ ಒತ್ತು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ತಮ್ಮ ಪತ್ರದಲ್ಲಿ, “ಪ್ರಜಾಸೇವಕನಾಗಿ ನಿಮ್ಮ ಸೇವೆ ಮಾಡಲು ನನಗೆ ಅವಕಾಶ ದೊರೆತು ಇಂದಿಗೆ ನೂರು ದಿನಗಳು. ನಾಡಿನ ಪ್ರತಿಯೊಬ್ಬರ ಬದುಕಿನಲ್ಲಿ ಹೊಸ ಬದಲಾವಣೆ ತರಲು ನನಗೆ ಹೆಚ್ಚಿನ ಜವಾಬ್ದಾರಿ ನೀಡಿದ ದಿನಗಳು” ಎಂದು ಡಿ.ಕೆ. ಶಿವಕುಮಾರ್ ಉಲ್ಲೇಖಿಸಿದ್ದಾರೆ.

ದೃಢ ಕರ್ನಾಟಕದ ಕನಸನ್ನು ನನಸು ಮಾಡುವ ಉದ್ದೇಶದಿಂದ ಈ 100 ದಿನಗಳ ಅವಧಿಯಲ್ಲಿ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಜನರ ಸಂಕಷ್ಟಗಳನ್ನು ಆಲಿಸುವುದು, ಅವರ ಬೇಡಿಕೆಗಳಿಗೆ ಸ್ಪಂದಿಸುವುದು ಮತ್ತು ಅಭಿವೃದ್ಧಿಯ ಪ್ರಯೋಜನಗಳನ್ನು ಜನರಿಗೆ ತಲುಪಿಸುವುದು ತಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.

“ನಿಮ್ಮ ಸಂಕಷ್ಟಗಳನ್ನು ಆಲಿಸಲು, ನಿಮ್ಮ ಬೇಡಿಕೆಗಳಿಗೆ ಸ್ಪಂದಿಸಲು ನನ್ನ ‘ಹಸ್ತ’ ಸದಾ ಮುಂದಿರಲಿದೆ” ಎಂದು ಹೇಳಿರುವ ಅವರು, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಶಕ್ತ ಕರ್ನಾಟಕ ನಿರ್ಮಾಣವೇ ತಮ್ಮ ಸಂಕಲ್ಪವಾಗಿದೆ ಎಂದು ತಿಳಿಸಿದ್ದಾರೆ.

100 ದಿನಗಳ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಉದ್ಯೋಗ ಸೃಷ್ಟಿ ಮತ್ತು ವಸತಿ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಹೊಸ ಕ್ರಮಗಳನ್ನೂ ಘೋಷಿಸಲಾಗಿದೆ. ಹಿಂದುಳಿದ ಜಿಲ್ಲೆಗಳಲ್ಲಿ ಹೊಸ ಉದ್ಯೋಗ ಸೃಷ್ಟಿಗೆ ಪ್ರೋತ್ಸಾಹಧನ ನೀಡುವ ಯೋಜನೆ ಹಾಗೂ ಪ್ರತಿ ಜಿಲ್ಲೆಯಲ್ಲಿ 50 ಸಾವಿರ ಉಚಿತ ನಿವೇಶನಗಳನ್ನು ಒದಗಿಸುವ ಘೋಷಣೆ ಪ್ರಮುಖವಾಗಿವೆ.

ಇದರೊಂದಿಗೆ ಸರ್ಕಾರಿ ಇಲಾಖೆಗಳ ಸಮಸ್ಯೆಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಒದಗಿಸಲು ಸ್ಟಾರ್ಟ್‌ಅಪ್‌ಗಳಿಗೆ ನೇರವಾಗಿ ತಮ್ಮ ಪರಿಹಾರಗಳನ್ನು ಪ್ರಸ್ತುತಪಡಿಸುವ ಅವಕಾಶ ನೀಡುವ ‘ಗವರ್ನಮೆಂಟ್-ಫಸ್ಟ್’ ಉಪಕ್ರಮವನ್ನೂ ಸರ್ಕಾರ ಪರಿಚಯಿಸಿದೆ.

ಕರುನಾಡಿನ ಜನತೆಯ ಋಣ ತೀರಿಸುವುದು ಹಾಗೂ ಅವರ ಜೀವನಮಟ್ಟವನ್ನು ಸುಧಾರಿಸುವುದು ತಮ್ಮ ಗುರಿಯಾಗಿದೆ ಎಂದು ಹೇಳಿರುವ ಡಿ.ಕೆ. ಶಿವಕುಮಾರ್, “ನಿಮ್ಮ ಮನೆಯ ಮಗನಾಗಿ ಸದಾ ನಿಮ್ಮ ಸೇವೆಗೆ ಸಿದ್ಧನಿದ್ದೇನೆ” ಎಂದು ಪತ್ರದ ಮೂಲಕ ಭರವಸೆ ನೀಡಿದ್ದಾರೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.