ಬೆಳಗಾವಿ: ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಗೋಕಾಕದ ನಿವಾಸ ಮತ್ತು ಅವರ ಆಪ್ತರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬುಧವಾರ ಏಕಕಾಲಕ್ಕೆ ದಾಳಿ ನಡೆಸಿ ಶೋಧ ಕೈಗೊಂಡಿದ್ದಾರೆ.
ಗೋಕಾಕದ `ಹಿಲ್ ಗಾರ್ಡನ್’ ನಿವಾಸ, ಬೆಳಗಾವಿ ನಗರದ ಲಕ್ಷ್ಮೀ ಟೇಕಡಿಯಲ್ಲಿರುವ ಸಚಿವರ ಆಪ್ತ ಡಾ. ಗಿರೀಶ್ ಸೋನವಾಳ್ಕರ್ ನಿವಾಸ ಹಾಗೂ ರಾಜು ಧರಗಶೆಟ್ಟಿ ಮತ್ತು ವಿಠ್ಠಲ ಪರಸಣ್ಣವರ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿದ್ದ ವೈ. ಮಂಜುನಾಥ್ ಅವರ ಬೆಳಗಾವಿ ನಿವಾಸದಲ್ಲೂ ಶೋಧ ನಡೆದಿದೆ.
ಕರ್ನಾಟಕ ಮತ್ತು ಗೋವಾ ಘಟಕಗಳ ಇ.ಡಿ ಅಧಿಕಾರಿಗಳು ಅರೆಸೇನಾ ಪಡೆಯ ಭದ್ರತೆಯೊಂದಿಗೆ ಬೆಳಿಗ್ಗೆಯೇ ಕಾರ್ಯಾಚರಣೆ ಆರಂಭಿಸಿದರು. ನಿವಾಸಗಳಲ್ಲಿದ್ದ ಹಣಕಾಸು ವ್ಯವಹಾರಗಳ ದಾಖಲೆ, ಬ್ಯಾಂಕ್ ಖಾತೆ ವಿವರ, ಆಸ್ತಿ ಪತ್ರಗಳು ಹಾಗೂ ಡಿಜಿಟಲ್ ಸಾಧನಗಳನ್ನು ಪರಿಶೀಲಿಸಲಾಯಿತು. ಬೆಳಗಾವಿ ಜಿಲ್ಲೆಯ ಏಳು, ಬೆಂಗಳೂರಿನ ಆರು ಸೇರಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಒಟ್ಟು 18 ಸ್ಥಳಗಳಲ್ಲಿ ಶೋಧ ನಡೆಯುತ್ತಿದೆ.
ಆಫ್ರಿಕಾ ಹೂಡಿಕೆಯತ್ತ ತನಿಖೆ?: ಜಾರಕಿಹೊಳಿ ಕುಟುಂಬದ ಸದಸ್ಯರು ಮತ್ತು ಸಂಬಂಧಿಕರು ಆಫ್ರಿಕಾ ಖಂಡದ ಗಣಿ ಉದ್ಯಮದಲ್ಲಿ ಹೂಡಿಕೆ ಮಾಡಿದ್ದಾರೆ ಎನ್ನಲಾದ ವ್ಯವಹಾರಗಳು ತನಿಖೆಯ ಕೇಂದ್ರಬಿಂದುವಾಗಿವೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ನಿಯಮಗಳ ಉಲ್ಲಂಘನೆ ಆಗಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ.
ಸುಮಾರು 3 ಕೋಟಿ ವಿದೇಶಿ ಹಣಕಾಸು ವ್ಯವಹಾರ ಹಾಗೂ ಆಫ್ರಿಕಾದ ಗಣಿ ಕಂಪನಿಯಲ್ಲಿ ಮಾಡಲಾಗಿದೆ ಎನ್ನಲಾದ ಹೂಡಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಇ.ಡಿ ಕಲೆಹಾಕುತ್ತಿದೆ ಎಂದು ಗೊತ್ತಾಗಿದೆ. ಆದರೆ, ಆರೋಪಗಳು ಮತ್ತು ಪತ್ತೆಯಾದ ದಾಖಲೆಗಳ ಕುರಿತು ಇ.ಡಿ ಇನ್ನೂ ಅಧಿಕೃತವಾಗಿ ಸಮಗ್ರ ಹೇಳಿಕೆ ಬಿಡುಗಡೆ ಮಾಡಿಲ್ಲ.
ಸತೀಶ್ ಜಾರಕಿಹೊಳಿ ಅವರ ಸಹೋದರಿಯ ಪತಿ ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿ ವೈ. ಮಂಜುನಾಥ್ ಅವರಿಗೆ ಸಂಬಂಧಿಸಿದ ಬೆಳಗಾವಿ, ಐನಾಪುರ, ಬೆಂಗಳೂರು ಮತ್ತು ಮೈಸೂರು ಸೇರಿದಂತೆ ಹಲವು ಸ್ಥಳಗಳ ಮೇಲೆ ಜೂನ್ 24ರಂದು ಇ.ಡಿ ದಾಳಿ ನಡೆಸಿತ್ತು. ಆ ಕಾರ್ಯಾಚರಣೆಯಲ್ಲಿ ನಗದು, ಚಿನ್ನಾಭರಣ ಹಾಗೂ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು ದೊರೆತಿವೆ ಎಂದು ಇ.ಡಿ ತಿಳಿಸಿತ್ತು. ಆದರೆ, ಬುಧವಾರದ ಶೋಧವು ಹಿಂದಿನ ಅಬಕಾರಿ ಪ್ರಕರಣದ ಮುಂದುವರಿದ ಭಾಗವಲ್ಲ; ವಿದೇಶಿ ಹೂಡಿಕೆ ಮತ್ತು `ಫೆಮಾ’ ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದ ಪ್ರತ್ಯೇಕ ತನಿಖೆ ಎಂದು ಮೂಲಗಳು ಹೇಳಿವೆ.



















