ಪಣಜಿ: ಗೋವಾದ ಪರ್ವರಿಯ ನಿಯೋ ಮೆಜೆಸ್ಟಿಕ್ ಕ್ಯಾಸಿನೊದಲ್ಲಿ ನಕಲಿ ಗೇಮಿಂಗ್ ಚಿಪ್ಗಳನ್ನು ಬಳಸಿ ಜೂಜಾಟವಾಡಿ 6.25 ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಮೂಲದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಹುಕ್ಕೇರಿ ಮೂಲದ ಅಯೂಬ್ ಚೌಧರಿ (49) ಹಾಗೂ ಬೆಳಗಾವಿಯ ಖಡೆ ಬಜಾರ್ ನಿವಾಸಿ ಜಾವೇದ್ ಅನ್ವರ್ ಉಚ್ಗಾಂವ್ಕರ್ (45) ಬಂಧಿತ ಆರೋಪಿಗಳು. ಆರೋಪಿಗಳು ಕ್ಯಾಸಿನೊದಲ್ಲಿ ತಲಾ 25 ನಕಲಿ ಗೇಮಿಂಗ್ ಚಿಪ್ಗಳನ್ನು ಬಳಸಿ ವಂಚನೆ ನಡೆಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ನ. 21ರ ರಾತ್ರಿ 9.30ರಿಂದ ನ. 22ರ ಸಂಜೆ 6 ಗಂಟೆಯ ನಡುವಿನ ಅವಧಿಯಲ್ಲಿ ಈ ವಂಚನೆ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಗೋಲ್ಡನ್ ಪೀಸ್ ಹೋಟೆಲ್ಸ್ ಆ್ಯಂಡ್ ರೆಸಾರ್ಟ್ಸ್ ಪ್ರೈ.ಲಿ. ಸಂಸ್ಥೆಯ ಅಧಿಕಾರಿ ರಿಗ್ವೇದ್ ಅಮೋಂಕರ್ ಅವರು ಪರ್ವರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಐವರು ಗ್ರಾಹಕರ ಗುಂಪೊಂದು ಸತತ ಮೂರು ದಿನಗಳಿಂದ ನಕಲಿ ಗೇಮಿಂಗ್ ಚಿಪ್ಗಳನ್ನು ಬಳಸಿ ಜೂಜಾಟವಾಡುತ್ತಿರುವುದನ್ನು ಕ್ಯಾಸಿನೊ ಸಿಬ್ಬಂದಿ ಗಮನಿಸಿದ್ದರು. ನ. 24ರ ಸಂಜೆ 6 ಗಂಟೆ ಸುಮಾರಿಗೆ ನಕಲಿ ಚಿಪ್ಗಳ ಮೂಲಕ ಜೂಜಾಟದಲ್ಲಿ ತೊಡಗಿದ್ದ ಗುಂಪನ್ನು ಸಿಬ್ಬಂದಿ ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ವೇಳೆ ಗುಂಪಿನಲ್ಲಿದ್ದ ಒಬ್ಬಾತ ಪರಾರಿಯಾಗಿದ್ದಾನೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಪೊಲೀಸರು ನಡೆಸಿದ ವಿಚಾರಣೆಯಲ್ಲಿ ಅಯೂಬ್ ಚೌಧರಿ ಮತ್ತು ಜಾವೇದ್ ಉಚ್ಗಾಂವ್ಕರ್ ವಂಚನೆಯಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಉಳಿದ ಮೂವರನ್ನೂ ಕ್ಯಾಸಿನೊದಲ್ಲೇ ಪತ್ತೆ ಹಚ್ಚಲಾಗಿದೆ. ಪರಾರಿಯಾಗಿದ್ದ ಸಹಚರನಿಗಾಗಿ ಶೋಧ ನಡೆಸಿದ ಪೊಲೀಸರು, ತಡರಾತ್ರಿ ಪಣಜಿಯ ಸ್ಥಳವೊಂದರಲ್ಲಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಕಲಿ ಗೇಮಿಂಗ್ ಚಿಪ್ಗಳನ್ನು ವಶಪಡಿಸಿಕೊಂಡಿದ್ದು, ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಾಪುಸಾ ನ್ಯಾಯಾಲಯವು ಆರೋಪಿ ಅಯೂಬ್ ಚೌಧರಿಯನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಮತ್ತೊಬ್ಬ ಆರೋಪಿ ಜಾವೇದ್ನನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ತುಕಾರಾಂ ಚವಾಣ್ ಅವರ ಮಾರ್ಗದರ್ಶನದಲ್ಲಿ ಸಬ್ಇನ್ಸ್ಪೆಕ್ಟರ್ ಸಂಕೇತ್ ಟಾಲ್ಕರ್ ತನಿಖೆ ಮುಂದುವರಿಸಿದ್ದಾರೆ.




















