SK Home Ad
Home ನಮ್ಮ ಜಿಲ್ಲೆ ₹13 ಕೋಟಿಯ ಕಾರ್‌ ವಿವಾದ: ಶಾಸಕಿ ಮೈಥಿಲಿ ಪರ ಧ್ವನಿ ಎತ್ತಿದ ಕಂಗನಾ ರಣಾವತ್!

₹13 ಕೋಟಿಯ ಕಾರ್‌ ವಿವಾದ: ಶಾಸಕಿ ಮೈಥಿಲಿ ಪರ ಧ್ವನಿ ಎತ್ತಿದ ಕಂಗನಾ ರಣಾವತ್!

0
24

ಬೆಂಗಳೂರು: ಖ್ಯಾತ ಗಾಯಕಿ ಹಾಗೂ ಬಿಹಾರದ ಯುವ ಶಾಸಕಿ ಮೈಥಿಲಿ ಠಾಕೂರ್ ಇತ್ತೀಚೆಗೆ ಮುಂಬೈನ ಪ್ರಸಿದ್ಧ ಲಾಲ್‌ಬಾಗ್‌ಚಾ ರಾಜ ಗಣೇಶ ಪಂಡಾಲ್‌ಗೆ ನೀಲಿ ಬಣ್ಣದ, ಅಂದಾಜು ₹13 ಕೋಟಿ ಮೌಲ್ಯದ ‘ರೋಲ್ಸ್ ರಾಯ್ಸ್ ಕಲ್ಲಿನನ್’ ಐಷಾರಾಮಿ ಎಸ್‌ಯುವಿ ಕಾರಿನಲ್ಲಿ ಆಗಮಿಸಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ, “ರಾಜಕೀಯಕ್ಕೆ ಬಂದ ಕೆಲವೇ ದಿನಗಳಲ್ಲಿ ಇಷ್ಟೊಂದು ದುಬಾರಿ ಕಾರು ಖರೀದಿಸಲು ಹೇಗೆ ಸಾಧ್ಯ?” ಎಂದು ನೆಟ್ಟಿಗರು ಪ್ರಶ್ನಿಸಿ ಟ್ರೋಲ್ ಮಾಡಲು ಪ್ರಾರಂಭಿಸಿದ್ದರು.

ಈ ಟೀಕೆಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್, ಮೈಥಿಲಿ ಪರವಾಗಿ ಬಹಿರಂಗ ಧ್ವನಿ ಎತ್ತಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ಕಂಗನಾ, “ರಾಜಕಾರಣಿಗಳು ಅಥವಾ ಜನಪ್ರತಿನಿಧಿಗಳು ಉತ್ತಮ ಜೀವನಶೈಲಿ ನಡೆಸುವುದನ್ನು ಕಂಡರೆ ಕೆಲವರಿಗೆ ಸಹಿಸಲು ಸಾಧ್ಯವಾಗುವುದಿಲ್ಲ. ಸಾರ್ವಜನಿಕ ಸೇವೆಯಲ್ಲಿದ್ದೇವೆ ಎಂದ ಮಾತ್ರಕ್ಕೆ ನಾವು ಐಷಾರಾಮಿ ಜೀವನವನ್ನು ತ್ಯಜಿಸಬೇಕೇ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಅಷ್ಟೇ ಅಲ್ಲದೇ.. ಕಂಗನಾ, “ನಮ್ಮ ಯುವ ಶಾಸಕಿ ಐಷಾರಾಮಿ ಕಾರು ಬಳಸಿದ್ದಕ್ಕಾಗಿ ಟ್ರೋಲ್ ಆಗುತ್ತಿರುವುದು ಬೇಸರ ತಂದಿದೆ. ನಾವು ನಿಸ್ವಾರ್ಥವಾಗಿ ಸಾರ್ವಜನಿಕ ಸೇವೆ ಮಾಡುತ್ತೇವೆ ನಿಜ. ಆದ್ರೆ ನಮಗೂ ನಮದೇ ಆದ ಸ್ವಂತ ವೃತ್ತಿ, ಗಳಿಕೆ ಮತ್ತು ಜನಪ್ರಿಯತೆ ಇದೆ. ಜನಪ್ರತಿನಿಧಿಗಳು ಸದಾ ಬಡವರಂತೆ, ದೀನರಂತೆ ಇರಬೇಕೆಂದು ಅಪೇಕ್ಷಿಸುವುದು ಸರಿಯಲ್ಲ. ನಮಗೆ ಸಾರ್ವಜನಿಕ ಹಣದ ಮೇಲೆ ಕಣ್ಣಿಲ್ಲ, ನಾವೂ ಚೆನ್ನಾಗಿ ಬಾಳುವ ಹಕ್ಕಿದೆ” ಎಂದು ವಿರೋಧಿಗಳಿಗೆ ಸಖತ್ ತಿರುಗೇಟು ನೀಡಿದ್ದಾರೆ.