SK Home Ad
Home ಸುದ್ದಿ ರಾಜ್ಯ ಹಬ್ಬದ ವಹಿವಾಟಿಗೆ ಧಕ್ಕೆ ತರಲು ರಾಹುಲ್ ಗಾಂಧಿ ಸಂಚು

ಹಬ್ಬದ ವಹಿವಾಟಿಗೆ ಧಕ್ಕೆ ತರಲು ರಾಹುಲ್ ಗಾಂಧಿ ಸಂಚು

0
35

ಹುಬ್ಬಳ್ಳಿ: ದೇಶದಲ್ಲಿ ಹಬ್ಬದ ಶುಭ ಮುಹೂರ್ತದ ವೇಳೆ ನಡೆಯುವ ವ್ಯಾಪಾರ-ವಹಿವಾಟಿಗೆ ರಾಹುಲ್ ಗಾಂಧಿ ರ್ಯಾಲಿ ಮೂಲಕ ಅಡ್ಡಿಪಡಿಸುವ ಷಡ್ಯಂತ್ರ ರೂಪಿಸಿದಂತಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ನವೆಂಬರ್ 1 ರಂದು ರ್ಯಾಲಿ ನಡೆಸುತ್ತಿರುವುದು ಬಹುತೇಕ ಹಬ್ಬದ ವ್ಯಾಪಾರಕ್ಕೆ ಅಡ್ಡಿಪಡಿಸಲು ಹೂಡಿರುವ ಸಂಚಾಗಿರಬಹುದು ಎಂದು ಹೇಳಿದರು.

ರಾಹುಲ್ ಗಾಂಧಿ ಭಾರತದ ಆರ್ಥಿಕತೆ, ವ್ಯಾಪಾರಿಗಳು ಹಾಗೂ ರೈತರ ಹಿತಾಸಕ್ತಿಗೆ ಯಾವತ್ತೂ ನೆರವಾಗಲು ಬಯಸುವುದಿಲ್ಲ. ಬದಲಿಗೆ ಅವರ ಆರ್ಥಿಕತೆಗೆ ಪೆಟ್ಟು ಕೊಡಲೇ ನೋಡುತ್ತಾರೆ. ಹಬ್ಬದ ಸಂಭ್ರಮದಲ್ಲಿ ದೇಶಾದ್ಯಂತ ವ್ಯಾಪಾರ-ವಹಿವಾಟು ಚುರುಕುಗೊಳ್ಳುತ್ತದೆ. ಶುಭ ಮುಹೂರ್ತದಲ್ಲಿ ಖರೀದಿ ಮಾಡುವ ಸಂಪ್ರದಾಯ ಭಾರತೀಯರಲ್ಲಿ ಮೊದಲಿನಿಂದಲೂ ರೂಢಿಯಲ್ಲಿದೆ. ಇಂತಹ ಸಮಯದಲ್ಲೇ ವ್ಯಾಪಾರ ಚಟುವಟಿಕೆಗೆ ಅಡ್ಡಿಪಡಿಸುವ ಉದ್ದೇಶದಿಂದ ಸಂಚು ರೂಪಿಸುತ್ತಿದ್ದಾರೆ ಎಂಬ ಅನುಮಾನವಿದೆ ಎಂದು ದೂರಿದರು.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅರಾಜಕತೆ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವೇ ಇಲ್ಲದಂತಾಗಿದ್ದು, ಜನರ ಜೀವಕ್ಕೆ ರಕ್ಷಣೆ, ಬೆಲೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ನಮ್ಮ ಭಾರತದಲ್ಲಿ ಡಾ. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನೀಡಿರುವ ಸ್ವಾತಂತ್ರ್ಯವನ್ನು ಬಳಸಿಕೊಂಡು ಕೆಲವರು ದೇಶದ ಪ್ರಜಾಪ್ರಭುತ್ವದ ವಿರುದ್ಧವೇ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಫಾರೂಕ್ ಅಬ್ದುಲ್ಲಾ ಹಾಗೂ ಅವರ ತಂದೆ ಶೇಖ್ ಅಬ್ದುಲ್ಲಾ ಹಿಂದಿನಿಂದಲೂ ಇಂತಹ ಹೇಳಿಕೆ ನೀಡುತ್ತಾ ಬಂದಿದ್ದಾರೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ನೀಡಿರುವ ಬಲಿಷ್ಠ ಸಂವಿಧಾನ ಹಾಗೂ ಭಾರತೀಯರ ಪ್ರಜಾಪ್ರಭುತ್ವದ ಮನೋಭಾವದಿಂದಾಗಿ ಅವರಿಗೆ ಇಂತಹ ಹೇಳಿಕೆ ನೀಡಲು ಸಾಧ್ಯವಾಗುತ್ತಿದೆ ಎಂದರು.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಜನರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹತ್ಯೆ ಹಾಗೂ ಅರಾಜಕತೆಯನ್ನು ಪಾಕಿಸ್ತಾನದ ಮಾಧ್ಯಮಗಳೇ ವರದಿ ಮಾಡುತ್ತಿವೆ. ಭಾರತದ ಕಾಶ್ಮೀರಕ್ಕೂ ಪಾಕ್ ಆಕ್ರಮಿತ ಕಾಶ್ಮೀರಕ್ಕೂ ಇರುವ ವ್ಯತ್ಯಾಸವನ್ನು ಅಲ್ಲಿನ ಜನರೇ ಸಾಮಾಜಿಕ ಜಾಲತಾಣಗಳ ಮೂಲಕ ನಿರೂಪಿಸುತ್ತಿದ್ದಾರೆ ಎಂದು ಹೇಳಿದರು.

ನಸೀರುದ್ದೀನ್ ಶಾ ಹೇಳಿಕೆಗೆ ತಿರುಗೇಟು: ಬಿಜೆಪಿ ವಿರುದ್ಧ ನಟ ನಸೀರುದ್ದೀನ್ ಶಾ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾರು ಸತ್ಯ ಹೇಳುತ್ತಿದ್ದಾರೆ, ಯಾರು ಸುಳ್ಳು ಹೇಳುತ್ತಿದ್ದಾರೆ ಎಂಬುದನ್ನು ದೇಶದ ಜನರು ಈಗಾಗಲೇ ಅರಿತಿದ್ದಾರೆ ಎಂದು ತಿರುಗೇಟು ನೀಡಿದರು.