ದಾವಣಗೆರೆ: ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಹರಿಹರ ತಾಲೂಕಿನ ಕೊಕ್ಕನೂರು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಜಯಪ್ಪ (54) ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಸಹ ಶಿಕ್ಷಕರಾದ ಶ್ರೀಕಾಂತಚಾರಿ, ವೆಂಕಟೇಶ್, ರಂಜನಿ, ಚೇತನಾ ಹಾಗೂ ಮಹಾಂತೇಶ್‌ಗೌಳಿ, ಬಿಸಿಯೂಟ ಯೋಜನೆಯ ಅಡುಗೆ ಸಿಬ್ಬಂದಿಗಳಾದ ಸುಮಾ, ಚೆನ್ನಮ್ಮ, ರೂಪಾ ಮತ್ತು ವಿಜಯಮ್ಮ ಸೇರಿದಂತೆ ಒಟ್ಟು 10 ಜನರ ವಿರುದ್ಧ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾನಸಿಕ ಹಿಂಸೆ, ಕಿರುಕುಳ ಹಾಗೂ ಜಾತಿ ನಿಂದನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ಪತ್ನಿ ಅಂಜನಮ್ಮ ದೂರಿನಲ್ಲಿ ಏನಿದೆ?: ಮೃತ ಜಯಪ್ಪ ಅವರ ಪತ್ನಿ ಅಂಜನಮ್ಮ ನೀಡಿರುವ ದೂರಿನ ಪ್ರಕಾರ, ಕಳೆದ 10 ತಿಂಗಳಿಂದ ಕೊಕ್ಕನೂರು ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಜಯಪ್ಪ ಅವರಿಗೆ ಕೆಲ ಸಹೋದ್ಯೋಗಿಗಳು ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದರು. ತಾವು ಪರಿಶಿಷ್ಟ ಜಾತಿಗೆ ಸೇರಿದವರಾಗಿರುವ ಕಾರಣ ಜಾತಿ ನಿಂದನೆ ಮಾಡಲಾಗುತ್ತಿತ್ತು ಎಂದು ಜಯಪ್ಪ ಹಲವು ಬಾರಿ ತಮ್ಮ ನನಗೆ ತಿಳಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದೇ ಮಾನಸಿಕ ಹಿಂಸೆ ಮತ್ತು ಕಿರುಕುಳದಿಂದ ಮನನೊಂದು ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಂಜನಮ್ಮ ಆರೋಪಿಸಿದ್ದಾರೆ.
ತನಿಖೆ ಆರಂಭ: ಅಂಜನಮ್ಮ ನೀಡಿದ ದೂರಿನ ಆಧಾರದ ಮೇಲೆ ಮಲೆಬೆನ್ನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಪ್ರಕ್ರಿಯೆ ಮುಂದುವರಿದಿದೆ. ಪೊಲೀಸ್ ತನಿಖೆಯ ಬಳಿಕ ಪ್ರಕರಣದ ನಿಖರ ಕಾರಣಗಳು ಮತ್ತು ಆರೋಪಗಳ ಸತ್ಯಾಸತ್ಯತೆ ಬೆಳಕಿಗೆ ಬರಬೇಕಿದೆ.





















