ಕಾಲಿವುಡ್ ನಟ ಜಯಂ ರವಿ (ರವಿ ಮೋಹನ್), ಪತ್ನಿ ಆರತಿ ಮತ್ತು ಗಾಯಕಿ ಕೆನೀಶಾ ಫ್ರಾನ್ಸಿಸ್ ನಡುವಿನ ವೈವಾಹಿಕ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದ್ದು, ಇತ್ತೀಚೆಗೆ ಚೆನ್ನೈನಲ್ಲಿ ಭಾವುಕ ಪತ್ರಿಕಾಗೋಷ್ಠಿ ನಡೆಸಿದ ಜಯಂ ರವಿ, ತಮ್ಮ ವಿಚ್ಛೇದನ ಪ್ರಕ್ರಿಯೆ ಮುಗಿಯುವವರೆಗೂ ನಟನೆಯಿಂದ ದೂರವಿರುವುದಾಗಿ ಕಣ್ಣೀರಿಟ್ಟಿದ್ದಾರೆ. ಕಳೆದ ಎರಡು ವರ್ಷಗಳಿಂದ ತೀವ್ರ ಮಾನಸಿಕ ಹಿಂಸೆ ಹಾಗೂ ಸೈಬರ್ ಬೆದರಿಕೆ ಎದುರಿಸುತ್ತಿರುವುದಾಗಿ ಹೇಳಿ ಕಣ್ಣೀರಿಟ್ಟಿದ್ದರು. ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿ ಈಗ ಬೆಲೆ ತೆರುತ್ತಿರುವುದಾಗಿ ಹಾಗೂ ಮಕ್ಕಳನ್ನು ಭೇಟಿಯಾಗಲು ಪತ್ನಿ ಬಿಡುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಹೇಳಿಕೆಗೆ ತಿರುಗೇಟು: ರವಿ ಈ ಹೇಳಿಕೆಗೆ ಪತ್ನಿ ಆರತಿ ಸೋಷಿಯಲ್ ಮೀಡಿಯಾದಲ್ಲಿ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. “ಮಲಗಿರುವ ಸಿಂಹಿಣಿಯನ್ನು ಎಂದಿಗೂ ಎಬ್ಬಿಸಬೇಡಿ. ನನ್ನ ಮೌನವನ್ನು ದೌರ್ಬಲ್ಯ ಎಂದು ಭಾವಿಸಬೇಡಿ. ಅಗತ್ಯ ಬಿದ್ದರೆ ನನ್ನ ಮಕ್ಕಳು ಮತ್ತು ಗೌರವವನ್ನು ರಕ್ಷಿಸಲು ಸತ್ಯದೊಂದಿಗೆ ಇಡೀ ಜಗತ್ತಿನ ಎದುರು ಹೋರಾಡುತ್ತೇನೆ, ಕೊನೆಗೆ ಸತ್ಯವೇ ಗೆಲ್ಲುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ. ಆರತಿ ಈ ಪೋಸ್ಟ್‌ಗೆ ಹಿರಿಯ ನಟಿ ಖುಷ್ಬು ಸುಂದರ್ ಬೆಂಬಲ ಸೂಚಿಸಿದ್ದು, “ಮಕ್ಕಳ ವಿಷಯದಲ್ಲಿ ತಾಯಿಯೊಂದಿಗೆ ಆಟವಾಡಬೇಡಿ, ನಿನಗೆ ಹೆಚ್ಚಿನ ಶಕ್ತಿ ಸಿಗಲಿ” ಎಂದು ಕಾಮೆಂಟ್ ಮಾಡಿದ್ದಾರೆ. ರವಿ ಪತ್ರಿಕಾಗೋಷ್ಠಿಯಲ್ಲಿ ಪರೋಕ್ಷವಾಗಿ “ಮೂರು ಅಕ್ಷರದ ಇಡ್ಲಿ ನಟಿ” ಎಂದು ಯಾರನ್ನೋ ಉಲ್ಲೇಖಿಸಿದ್ದು, ಅದು ಖುಷ್ಬು ಅವರನ್ನೇ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್: ಇತ್ತ, ನಟ ರವಿ ಸಂಕಷ್ಟಕ್ಕೆ ಕಾರಣ ಎಂದು ಬಿಂಬಿತವಾಗಿದ್ದ ಗಾಯಕಿ ಹಾಗೂ ಚಿಕಿತ್ಸಕಿ ಕೆನೀಶಾ ಫ್ರಾನ್ಸಿಸ್ ಈ ವಿವಾದದಿಂದ ದೂರ ಸರಿಯುವುದಾಗಿ ಘೋಷಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. ಹಾಗೇ ಆನ್‌ಲೈನ್ ಬೆದರಿಕೆ, ಕುಶಲತೆ ಹಾಗೂ ನಿರಂತರ ನಕಾರಾತ್ಮಕತೆಯಿಂದ ಬೇಸತ್ತು ತಾವು ಚೆನ್ನೈ ತೊರೆಯುತ್ತಿರುವುದಾಗಿ ಮತ್ತು ಸೋಷಿಯಲ್ ಮೀಡಿಯಾ ಖಾತೆಗಳನ್ನು ಬಂದ್ ಮಾಡುತ್ತಿರುವುದಾಗಿ ಕೆನೀಶಾ ತಿಳಿಸಿದ್ದಾರೆ.

ʻಮನೆಮುರುಕಿಯಲ್ಲʼ: ತಾನು ಕೇವಲ ಒಬ್ಬ ಸ್ನೇಹಿತೆಯಾಗಿ ರವಿಗೆ ಮಾನಸಿಕ ಬೆಂಬಲ ನೀಡಿದ್ದಾಗಿ ಸ್ಪಷ್ಟಪಡಿಸಿರುವ ಕೆನೀಶಾ, ಯಾರದ್ದೋ ಸಂಸಾರವನ್ನು ತಾನು ಮುರಿದಿಲ್ಲ ಎಂದು ತಮಗಾಗುತ್ತಿರುವ ಮಾನಸಿಕ ಹಿಂಸೆಯ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. 2009 ರಲ್ಲಿ ವಿವಾಹವಾಗಿದ್ದ ಜಯಂ ರವಿ ಹಾಗೂ ಆರತಿ ಸದ್ಯ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಇಬ್ಬರು ಮಕ್ಕಳ ಭವಿಷ್ಯ ಹಾಗೂ ಸತ್ಯದ ಹೋರಾಟದ ನಡುವೆ ಈ ವಿವಾದ ಮತ್ತಷ್ಟು ಕಠಿಣ ಹಂತ ತಲುಪಿದೆ.























