SK Home Ad
Home ಸುದ್ದಿ ರಾಜ್ಯ ಉದ್ಯಾನವನ ತಿದ್ದುಪಡಿ ವಿಧೇಯಕ ವಿಚಾರದಲ್ಲಿ ಯೂಟರ್ನ್‌: ಸರ್ಕಾರದಿಂದ ಮಹತ್ವದ ತೀರ್ಮಾನ

ಉದ್ಯಾನವನ ತಿದ್ದುಪಡಿ ವಿಧೇಯಕ ವಿಚಾರದಲ್ಲಿ ಯೂಟರ್ನ್‌: ಸರ್ಕಾರದಿಂದ ಮಹತ್ವದ ತೀರ್ಮಾನ

0
39

ಬೆಂಗಳೂರು: ತೀವ್ರ ಸಾರ್ವಜನಿಕ ವಿರೋಧಕ್ಕೆ ಮಣಿದ ರಾಜ್ಯ ಸರ್ಕಾರ, ವಿವಾದಕ್ಕೆ ಕಾರಣವಾಗಿದ್ದ ‘ಕರ್ನಾಟಕ ಉದ್ಯಾನವನಗಳ (ಸಂರಕ್ಷಣೆ) ತಿದ್ದುಪಡಿ ವಿಧೇಯಕ’ವನ್ನು ವಾಪಸ್ ಪಡೆಯಲು ನಿರ್ಧರಿಸಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಉದ್ಯಾನವನಗಳ ಜಾಗವನ್ನು ಇತರೆ ಉದ್ದೇಶಗಳಿಗೆ ಬಳಸಿಕೊಳ್ಳಲು ಅವಕಾಶ ಕಲ್ಪಿಸುವ ಅಂಶಗಳುಳ್ಳ ತಿದ್ದುಪಡಿ ವಿಧೇಯಕಕ್ಕೆ ಸಾರ್ವಜನಿಕರು ಹಾಗೂ ಪರಿಸರ ಹೋರಾಟಗಾರರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಹಸಿರು ಪ್ರದೇಶಗಳ ಸಂರಕ್ಷಣೆಗೆ ಧಕ್ಕೆಯಾಗಲಿದೆ ಎಂಬ ಆತಂಕವೂ ವ್ಯಾಪಕವಾಗಿ ವ್ಯಕ್ತವಾಗಿತ್ತು.

ಶೇ. 5ರಷ್ಟು ಉದ್ಯಾನವನದ ಜಾಗ ಹಸ್ತಾಂತರಕ್ಕೆ ಅವಕಾಶ: ತಿದ್ದುಪಡಿ ವಿಧೇಯಕದಲ್ಲಿ ಉದ್ಯಾನವನಗಳ ಒಟ್ಟು ಜಾಗದ ಶೇ. 5ರಷ್ಟು ಪ್ರದೇಶವನ್ನು ಸರ್ಕಾರಿ ಇಲಾಖೆಗಳು, ಶಾಸನಬದ್ಧ ಸಂಸ್ಥೆಗಳು ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಉಡುಗೊರೆ, ವಿನಿಮಯ, ಅಡಮಾನ, ಮಾರಾಟ ಅಥವಾ ಲೀಸ್ ಮೂಲಕ ಹಸ್ತಾಂತರಿಸಲು ಅವಕಾಶ ಕಲ್ಪಿಸಲಾಗಿತ್ತು.

ಈ ವಿಧೇಯಕವು ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಅಂಗೀಕಾರಗೊಂಡು ರಾಜ್ಯಪಾಲರ ಅಂಕಿತಕ್ಕಾಗಿ ಕಳುಹಿಸಲಾಗಿತ್ತು. ಆದರೆ, ವಿಧೇಯಕದ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ಅದನ್ನು ಹಿಂಪಡೆಯಲು ಮುಂದಾಗಿದೆ.

ಸಾರ್ವಜನಿಕ ಭಾವನೆಗೆ ಗೌರವ-ಪರಮೇಶ್ವರ್: ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, “ಸಾರ್ವಜನಿಕರ ಹಿತಾಸಕ್ತಿ ಮತ್ತು ಭಾವನೆಗಳನ್ನು ಗೌರವಿಸಿ ಉದ್ಯಾನವನಗಳ ಸಂರಕ್ಷಣೆ ತಿದ್ದುಪಡಿ ವಿಧೇಯಕವನ್ನು ವಾಪಸ್ ಪಡೆಯಲು ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನಿಸಲಾಗಿದೆ” ಎಂದು ತಿಳಿಸಿದರು.

ಸರ್ಕಾರದ ಈ ನಿರ್ಧಾರದಿಂದ ಉದ್ಯಾನವನಗಳ ಜಾಗವನ್ನು ಇತರೆ ಉದ್ದೇಶಗಳಿಗೆ ಬಳಸಿಕೊಳ್ಳುವ ಸಾಧ್ಯತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ನಾಗರಿಕರು ಹಾಗೂ ಪರಿಸರಾಸಕ್ತರಿಗೆ ಇದೀಗ ತುಸು ನೆಮ್ಮದಿ ಸಿಕ್ಕಂತಾಗಿದೆ.

ವಿಧೇಯಕವನ್ನು ಹಿಂಪಡೆಯುವ ನಿರ್ಧಾರವು ಸರ್ಕಾರದ ಮೇಲೆ ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿದ್ದ ಒತ್ತಡಕ್ಕೆ ತೆರೆ ಎಳೆದಿದ್ದು, ನಗರಗಳ ಹಸಿರು ಪ್ರದೇಶಗಳ ಸಂರಕ್ಷಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.