ಧಾರವಾಡ: ಧಾರವಾಡ ಭಾರತೀಯ ತಂತ್ರಜ್ಞಾನ ಸಂಸ್ಥೆಯ 7ನೇ ಘಟಿಕೋತ್ಸವ ಜು. 18ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ಎಂದು ಐಐಟಿ ನಿರ್ದೇಶಕ ಡಾ. ವೆಂಕಪ್ಪಯ್ಯ ದೇಸಾಯಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಧಾರವಾಡ ಐಐಟಿಯ ದಶಮಾನೋತ್ಸವದ ನಿಮಿತ್ತ ಗೌರವ ಡಾಕ್ಟರೇಟ್ ಪದವಿಯನ್ನು ರಾಜ್ಯಸಭಾ ಸದಸ್ಯೆ, ಪದ್ಮಭೂಷಣ ಸುಧಾ ಮೂರ್ತಿ ಅವರಿಗೆ ಪ್ರದಾನ ಮಾಡಲಾಗುವುದು ಎಂದರು.
ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ದೆಹಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ ಪ್ರಾಧ್ಯಾಪಕ ಭೀಮ್ ಸಿಂಗ್, ಟಾಟಾ ಪವರ್ ರಿನ್ಯೂವೆಬಲ್ ಮೈಕ್ರೋಗ್ರಿಡ್ ಸಿಇಓ ಮನೋಜ ಗುಪ್ತಾ, ಪ್ಯಾನ್ ಐಐಟಿ ಪೂರ್ವ ಛಾತ್ರಗಣ ಅಧ್ಯಕ್ಷ ಪ್ರಭಾತ ಕುಮಾರ, ಧಾರವಾಡ ಭಾರತೀಯ ತಂತ್ರಜ್ಞಾನ ಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶರದ್ ಕುಮಾರ್ ಸರಾಫ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಘಟಿಕೋತ್ಸವದಲ್ಲಿ ಬಿಟೆಕ್ 207, ಬಿ.ಎಸ್ 13, ಎಮ್. ಟೆಕ್ 56, ಎಂ.ಎಸ್ 12, ಪಿ.ಎಚ್.ಡಿ 24 ಪಿಜಿ ಡಿಪ್ಲೊಮಾ 1 ಸೇರಿ ಒಟ್ಟು 313 ಐಐಟಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಸುಧಾಮೂರ್ತಿಯವರು ಹುಬ್ಬಳ್ಳಿಯ ಬಿ.ವಿ. ಭೂಮರಡ್ಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದ ನಂತರ ಬೆಂಗಳೂರಿನ ಐಐಎಸ್ಸಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಧಾರವಾಡ-ಹುಬ್ಬಳ್ಳಿಯ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿರುವ ಸುಧಾ ಮೂರ್ತಿಗೆ ತವರಿನಲ್ಲಿ ಗೌರವ ಡಾಕ್ಟರೇಟ್ ನೀಡುತ್ತಿರುವುದು ವಿಶೇಷ ಎಂದರು.






















