SK Home Ad
Home ನಮ್ಮ ಜಿಲ್ಲೆ ದಾವಣಗೆರೆ ರೈತರ ಹಿತರಕ್ಷಣೆಗಾಗಿ ಸೆ.1ರಂದು ದಾವಣಗೆರೆ ಬಂದ್: ರೇಣುಕಾಚಾರ್ಯ

ರೈತರ ಹಿತರಕ್ಷಣೆಗಾಗಿ ಸೆ.1ರಂದು ದಾವಣಗೆರೆ ಬಂದ್: ರೇಣುಕಾಚಾರ್ಯ

0
57

ಭದ್ರಾ ಜಲಾಶಯಕ್ಕೆ ನೀರು, ನೀರಾವರಿ ಯೋಜನೆ ಜಾರಿಗೆ ಆಗ್ರಹ; ಸೆ.1ರಂದು ದಾವಣಗೆರೆ ಬಂದ್ – ಬಂದ್‌ಗೂ ಮುನ್ನ ಬೃಹತ್ ಬೈಕ್ ರ‍್ಯಾಲಿ

ದಾವಣಗೆರೆ: ಜಿಲ್ಲೆಯ ರೈತರ ಹಿತರಕ್ಷಣೆ, ಭದ್ರಾ ಜಲಾಶಯಕ್ಕೆ ಅಗತ್ಯ ಪ್ರಮಾಣದ ನೀರು ಒದಗಿಸುವುದು ಹಾಗೂ ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಸೆಪ್ಟೆಂಬರ್ 1ರಂದು ಮಂಗಳವಾರ ದಾವಣಗೆರೆ ಬಂದ್ ಆಚರಿಸಲು ನಿರ್ಧರಿಸಲಾಗಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿಳಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಸಿಗೆ ಬೆಳೆಗೆ ಅಗತ್ಯವಿರುವ ನೀರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಅಪ್ಪರ್ ಭದ್ರಾ ಯೋಜನೆಗೆ ನೀರು ನೀಡುವ ವಿಚಾರದಲ್ಲಿ ರೈತರ ನಡುವೆ ಯಾವುದೇ ಗೊಂದಲವಿಲ್ಲ. ರೈತರ ಹಿತದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಿದೆ ಎಂದು ಹೇಳಿದರು.

17.40 ಟಿಎಂಸಿ ನೀರು ಲಿಫ್ಟ್ ಮಾಡಲು ಬಾಕಿ ಅನುದಾನ ಬಿಡುಗಡೆಗೆ ಒತ್ತಾಯ : ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ 17.40 ಟಿಎಂಸಿ ನೀರನ್ನು ಲಿಫ್ಟ್ ಮಾಡುವ ಕಾಮಗಾರಿಗೆ ಸಂಬಂಧಿಸಿದಂತೆ ₹30 ಕೋಟಿ ಬಾಕಿ ಅನುದಾನ ಬಿಡುಗಡೆಯಾಗಬೇಕಿದೆ ಎಂದು ರೇಣುಕಾಚಾರ್ಯ ತಿಳಿಸಿದರು. ರಾಜ್ಯ ಸರ್ಕಾರ ಕೂಡಲೇ ಬಾಕಿ ಅನುದಾನ ಬಿಡುಗಡೆ ಮಾಡಿ, ತುಂಗಾದಿಂದ ಭದ್ರಾ ಜಲಾಶಯಕ್ಕೆ ನೀರು ಒದಗಿಸುವ ವ್ಯವಸ್ಥೆ ಮಾಡಬೇಕು. ರೈತರ ಕೃಷಿ ಚಟುವಟಿಕೆಗಳಿಗೆ ನೀರಿನ ಕೊರತೆ ಎದುರಾಗದಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಭದ್ರಾದಲ್ಲಿ 35 ಟಿಎಂಸಿ ನೀರು ಕಾಯ್ದಿರಿಸಲು ಆಗ್ರಹ : ಭದ್ರಾ ಜಲಾಶಯದಲ್ಲಿ 35 ಟಿಎಂಸಿ ನೀರನ್ನು ಕಾಯ್ದಿರಿಸಬೇಕು. ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ನೀರನ್ನು ಸಮರ್ಪಕವಾಗಿ ಹರಿಸುವ ಮೂಲಕ ಬೆಳೆಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ರೇಣುಕಾಚಾರ್ಯ ಒತ್ತಾಯಿಸಿದರು.

ಭದ್ರಾ ಹಾಗೂ ವಿವಿಧ ಕೃಷಿ ನೀರಾವರಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರ ಜೊತೆಗೆ ಅಡಿಕೆ ಬೆಳೆಗಾರರು ಸೇರಿದಂತೆ ಜಿಲ್ಲೆಯ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಅವರು ಹೇಳಿದರು.

ಬಂದ್‌ಗೂ ಮುನ್ನ ಬೃಹತ್ ಬೈಕ್ ರ‍್ಯಾಲಿ : ಬಂದ್‌ಗೆ ಮುನ್ನ ಸೋಮವಾರ ಬೃಹತ್ ಬೈಕ್ ರ‍್ಯಾಲಿ ಆಯೋಜಿಸಲಾಗುವುದು ಎಂದು ಮಾಜಿ ಸಚಿವರು ತಿಳಿಸಿದರು. ಬಂದ್‌ನಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪೊಲೀಸ್ ಇಲಾಖೆ, ಶಾಲಾ-ಕಾಲೇಜುಗಳು, ಬಸ್ ಮಾಲೀಕರು ಹಾಗೂ ಇತರರಿಗೆ ಮುಂಚಿತವಾಗಿ ಮಾಹಿತಿ ನೀಡಿ ಸಹಕಾರ ಪಡೆಯುವ ಉದ್ದೇಶದಿಂದ ಬಂದ್ ಅನ್ನು ಮಂಗಳವಾರಕ್ಕೆ ನಿಗದಿಪಡಿಸಲಾಗಿದೆ ಎಂದು ಹೇಳಿದರು.

ರೈತರ ನ್ಯಾಯಯುತ ಬೇಡಿಕೆಗಳಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಜಿಲ್ಲೆಯ ಎಲ್ಲ ವರ್ಗದ ಜನರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಎಲ್ಲ ವರ್ಗದ ಜನರಿಗೆ ಬೆಂಬಲ ನೀಡುವಂತೆ ಮನವಿ : ಅಡಿಕೆ ಬೆಳೆಗಾರರು, ರೈತರು, ವರ್ತಕರು, ವಿವಿಧ ಸಂಘ-ಸಂಸ್ಥೆಗಳು ಸೇರಿದಂತೆ ದಾವಣಗೆರೆ ಜಿಲ್ಲೆಯ ಎಲ್ಲ ವರ್ಗದ ಜನರು ಬಂದ್‌ಗೆ ಸಂಪೂರ್ಣ ಬೆಂಬಲ ನೀಡಬೇಕು ಎಂದು ರೇಣುಕಾಚಾರ್ಯ ಕರೆ ನೀಡಿದರು.

ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯ ನೀರು ಒದಗಿಸುವುದು, ಭದ್ರಾ ಜಲಾಶಯದ ನೀರಿನ ಸಮರ್ಪಕ ಬಳಕೆ ಹಾಗೂ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂಬ ಸಂದೇಶವನ್ನು ಬಂದ್ ಮೂಲಕ ಸರ್ಕಾರಕ್ಕೆ ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಬಸವರಾಜ ನಾಯ್ಕ್, ರೈತ ಒಕ್ಕೂಟದ ಅಧ್ಯಕ್ಷ ಕೊಳ್ಳೇನಹಳ್ಳಿ ಸತೀಶ್ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.