ಮುಂಬೈ: ಭಾರತೀಯ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ತಮ್ಮ ಎಡಗೈಗೆ ವಿಶೇಷ ಹಾಗೂ ಆಧ್ಯಾತ್ಮಿಕ ಅರ್ಥ ಹೊಂದಿರುವ ಹೊಸ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಪ್ರಸಿದ್ಧ ‘ಏಲಿಯನ್ಸ್ ಟ್ಯಾಟೂ’ ಸ್ಟುಡಿಯೋದಲ್ಲಿ ಈ ಟ್ಯಾಟೂ ವಿನ್ಯಾಸಗೊಳಿಸಲಾಗಿದ್ದು, ಸಂಪೂರ್ಣ ಪ್ರಕ್ರಿಯೆಗೆ ಮುಂಬೈ ಮತ್ತು ಬೆಂಗಳೂರು ಶಾಖೆಗಳಲ್ಲಿ ಸೇರಿ ಬರೋಬ್ಬರಿ 12 ಗಂಟೆಗಳ ಸಮಯ ತೆಗೆದುಕೊಂಡಿದೆ.
ಸ್ಟುಡಿಯೋದ ಸಂಸ್ಥಾಪಕ ಸನ್ನಿ ಭಾನುಶಾಲಿ ಹಾಗೂ ಅವರ ತಂಡದ ಕಲಾವಿದರು ಕೊಹ್ಲಿ ಅವರ ಹಳೆಯ ಟ್ಯಾಟೂವನ್ನು ಕವರ್ ಮಾಡಿ, ಅದರ ಜಾಗದಲ್ಲಿ ಹೊಸ ವಿನ್ಯಾಸವನ್ನು ರೂಪಿಸಿದ್ದಾರೆ. ಹೊಸ ಟ್ಯಾಟೂ ಕೇವಲ ಆಕರ್ಷಕ ವಿನ್ಯಾಸಕ್ಕೆ ಸೀಮಿತವಾಗಿರದೆ, ಆಧ್ಯಾತ್ಮಿಕತೆ ಹಾಗೂ ಸೃಷ್ಟಿಯ ತತ್ವಗಳನ್ನು ಪ್ರತಿಬಿಂಬಿಸುವ ರೀತಿಯಲ್ಲಿ ರೂಪಿಸಲಾಗಿದೆ.
ಈ ಟ್ಯಾಟೂದಲ್ಲಿ ‘ಸಾಕ್ರೆಡ್ ಜ್ಯಾಮಿಟ್ರಿ’ ಮತ್ತು ‘ಮೆಟಾಟ್ರೋನ್ ಕ್ಯೂಬ್’ ವಿನ್ಯಾಸಗಳನ್ನು ಬಳಸಲಾಗಿದೆ. ಇವು ಸಮತೋಲನ, ಏಕತೆ ಹಾಗೂ ಸೃಷ್ಟಿಯ ಮೂಲವನ್ನು ಸಂಕೇತಿಸುತ್ತವೆ ಎಂದು ಹೇಳಲಾಗಿದೆ.
ಟ್ಯಾಟೂ ವಿನ್ಯಾಸದ ನಿಖರತೆ ಮತ್ತು ವಿವರಗಳಿಗೆ ಹೆಚ್ಚಿನ ಗಮನ ನೀಡಲಾಗಿದ್ದು, ಇದನ್ನು ಪೂರ್ಣಗೊಳಿಸಲು ಕಲಾವಿದರ ತಂಡ ಸುಮಾರು 12 ಗಂಟೆಗಳ ಕಾಲ ಶ್ರಮಿಸಿದೆ. ಇದೀಗ ವಿರಾಟ್ ಕೊಹ್ಲಿ ಅವರ ಈ ಹೊಸ ಟ್ಯಾಟೂ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
-ಸಾರಿಕಾ ಪುಜಾರಿ



















