Home Advertisement
Home ನಮ್ಮ ಜಿಲ್ಲೆ ದಾವಣಗೆರೆ ವೈದ್ಯಕೀಯ ತಪಾಸಣೆ ಬಳಿಕ ಮಠಕ್ಕೆ ನಿರ್ಗಮಿಸಿದ ಸ್ವಾಮೀಜಿ

ವೈದ್ಯಕೀಯ ತಪಾಸಣೆ ಬಳಿಕ ಮಠಕ್ಕೆ ನಿರ್ಗಮಿಸಿದ ಸ್ವಾಮೀಜಿ

0
74

ದಾವಣಗೆರೆ: ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಪದಚ್ಯುತಿ ಜಗದ್ಗುರು ಶ್ರೀವಚನಾನಂದ ಸ್ವಾಮೀಜಿ ಗುರುವಾರ ವಿಚಾರಣೆಗೊಳಪಡಿಸಿದ ಬಳಿಕ ವೈದ್ಯಕೀಯ ತಪಾಸಣೆಗೊಳಪಡಿಸಲಾಯಿತು.

ಗುರುಪೀಠದಲ್ಲಿ ಶಿಕ್ಷಣ ಪಡೆಯುತ್ತಿದ್ದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಪದಚ್ಯುತಿ ಪೀಠಾಧಿಪತಿ ಶ್ರೀವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಬಾಲಕನ ತಾಯಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದರು. ಲಕ್ಷ್ಮೇಶ್ವರ ಪೊಲೀಸರು ಈ ಪ್ರಕರಣವನ್ನು ಹರಿಹರ ಗ್ರಾಮಾಂತರ ಪೊಲೀಸ್ ಠಾಣಗೆ ವರ್ಗಾಯಿಸಿದ್ದರು.

ಈ ಕುರಿತು ಪೊಲೀಸರು ಬುಧವಾರ ಸಂಜೆ ಪೀಠಕ್ಕೆ ಆಗಮಿಸಿ ಗುರುವಾರ (ಮೇ 14) ವಿಚಾರಣೆಗೆ ಬರಬೇಕೆಂದು ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಚನಾನಂದ ಶ್ರೀಗಳು ಇಂದು ಬೆಳಗ್ಗೆ 8.30ರ ಸುಮಾರಿನಲ್ಲಿ ಠಾಣೆಗೆ ತೆರಳಿ ವಿಚಾರಣೆಗೆ ಸಹಕರಿಸಿದರು. ಸುಮಾರು ಐದು ಗಂಟೆಗಳ ಕಾಲ ಪೊಲೀಸರು ಕೇಳಿದ 50ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತರಿಸಿದರು.

ವಿಚಾರಣೆ ಮುಗಿಸಿದ ನಂತರ ಪೊಲೀಸರು ಠಾಣೆಯಿಂದ ನೇರವಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ವೈದ್ಯಕೀಯ ತಪಾಸಣೆ ಮುಗಿದ ಬಳಿಕ ನೇರವಾಗಿ ಮಠಕ್ಕೆ ತೆರಳಿದರು. ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಲೆಕ್ಕಕೊಡಿ ಚಳವಳಿ ಸಮಿತಿ ಅಧ್ಯಕ್ಷ ಪರಮೇಶ್ವರಗೌಡ್ರು ಮತ್ತು ಸಮಾಜದ ಮುಖಂಡರು ಹಾಜರಿದ್ದರು.

ಕಾನೂನಿಗೆ ಗೌರವ, ಸತ್ಯಕ್ಕೆ ಜಯ ಸಿಗುತ್ತದೆ: ‘ನಾನು ಕಾನೂನಿಗೆ ಸದಾ ಗೌರವ ನೀಡಿದ್ದೇನೆ. ಪೊಲೀಸರು ನೀಡಿದ ಸೂಚನೆಯಂತೆ ವಿಚಾರಣೆಗೆ ಹಾಜರಾಗಿ ಸಂಪೂರ್ಣ ಸಹಕಾರ ನೀಡಿದ್ದೇನೆ. ಸತ್ಯಕ್ಕೆ ಯಾವಾಗಲೂ ಜಯ ಸಿಗುತ್ತದೆ ಎಂಬ ನಂಬಿಕೆ ನನಗಿದೆ’ ಎಂದು ವಚನಾನಂದ ಸ್ವಾಮೀಜಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಅಗತ್ಯ ಮಾದರಿ ಸಂಗ್ರಹ: ವೈದ್ಯಕೀಯ ಪರೀಕ್ಷೆ ನಡೆಸಿ, ಉಗುರು ಹಾಗೂ ಕೂದಲು ಸೇರಿದಂತೆ ಅಗತ್ಯ ಮಾದರಿಗಳನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ‘ಶ್ರೀಗಳು ದೈಹಿಕವಾಗಿ ಸದೃಢರಾಗಿದ್ದಾರೆ. ವರದಿ 15 ದಿನಗಳೊಳಗೆ ಪೊಲೀಸರಿಗೆ ಸಲ್ಲಿಸಲಾಗುತ್ತದೆ’ ಎಂದು ಹರಿಹರ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ರಾಘವೇಂದ್ರ ದುರುಗೋಜಿ ತಿಳಿಸಿದರು.