Home Advertisement
Home ನಮ್ಮ ಜಿಲ್ಲೆ ದಾವಣಗೆರೆ ದಾವಣಗೆರೆಯಲ್ಲಿ ಭೂಮಾಪಕರ ಬೃಹತ್ ಪ್ರತಿಭಟನೆ: ಜಯದೇವ ವೃತ್ತ ಸ್ತಬ್ಧ

ದಾವಣಗೆರೆಯಲ್ಲಿ ಭೂಮಾಪಕರ ಬೃಹತ್ ಪ್ರತಿಭಟನೆ: ಜಯದೇವ ವೃತ್ತ ಸ್ತಬ್ಧ

0
187

ದಾವಣಗೆರೆ: ʻಗದ್ದೆಯಿಂದ ನ್ಯಾಯದ ಗಡಿಯವರೆಗೆ’ ಎಂಬ ಘೋಷವಾಕ್ಯದೊಂದಿಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ಸರ್ಕಾರಿ ಪರವಾನಿಗೆ ಭೂಮಾಪಕರ ಸಂಘದ ಆಶ್ರಯದಲ್ಲಿ ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಪರವಾನಿಗೆ ಭೂಮಾಪಕರು ಭಾಗವಹಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

​ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ನಂತರ ನಗರದ ಪ್ರಮುಖ ರಸ್ತೆಗಳ ಮೂಲಕ ಜಯದೇವ ವೃತ್ತದವರೆಗೆ ಬೃಹತ್ ಮೆರವಣಿಗೆ ನಡೆಸಿದರು. ಜಯದೇವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದ ಹಿನ್ನೆಲೆಯಲ್ಲಿ ಕೆಲಕಾಲ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

​ಪ್ರಮುಖ ಬೇಡಿಕೆಗಳು:
ಪರವಾನಿಗೆ ಭೂಮಾಪಕರ ಸೇವೆಯನ್ನು ತಕ್ಷಣವೇ ಕಾಯಂಗೊಳಿಸಬೇಕು.
‘ಸಮಾನ ಕೆಲಸಕ್ಕೆ ಸಮಾನ ವೇತನ’ ತತ್ವದಡಿ ಗೌರವಧನ ನಿಗದಿಪಡಿಸಬೇಕು.
​ಪರವಾನಗಿ ಹೆಸರಿನಲ್ಲಿ ನಡೆಯುತ್ತಿರುವ ಜೀತ ಪದ್ಧತಿಯಿಂದ ಮುಕ್ತಿ ನೀಡಬೇಕು.

​ರೈತರ ಬೆಂಬಲ: ಭೂಮಾಪಕರ ಈ ಹೋರಾಟಕ್ಕೆ ವಿವಿಧ ರೈತ ಸಂಘಟನೆಗಳು ತೀವ್ರ ಬೆಂಬಲ ವ್ಯಕ್ತಪಡಿಸಿವೆ. ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ರೈತ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ್, “ಭೂಮಾಪಕರ ನ್ಯಾಯಯುತ ಹೋರಾಟಕ್ಕೆ ರಾಜ್ಯದ 30 ಸಾವಿರಕ್ಕೂ ಹೆಚ್ಚು ರೈತರು ಬೆಂಬಲವಾಗಿ ನಿಲ್ಲಲಿದ್ದಾರೆ. ಸರ್ಕಾರ ವಿಳಂಬ ಮಾಡದೆ ಇವರ ಸಮಸ್ಯೆಗಳನ್ನು ಬಗೆಹರಿಸಬೇಕು,” ಎಂದು ಆಗ್ರಹಿಸಿದರು.

​ಹೋರಾಟದಲ್ಲಿ ಭಾಗವಹಿಸಿದ್ದ ಯಾದನಂದ ಸ್ವಾಮೀಜಿ ಮಾತನಾಡಿ, “ಭೂಮಾಪಕರು ಸರ್ಕಾರದ ಪ್ರಮುಖ ಅಂಗವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು,” ಎಂದು ಒತ್ತಾಯಿಸಿದರು.