ಸಚಿವರ ಸ್ವಾಗತದ ಸಂಭ್ರಮದ ನಡುವೆ ರೈತನ ಕಣ್ಣೀರು! : ತೆಂಗಿನಕಾಯಿ ಮಾರಿ ತಂದಿದ್ದ 1 ಲಕ್ಷ ಕಳವು – ‘ನನ್ನ ಬೆವರಿನ ಹಣ ವಾಪಸ್ ಕೊಡಿ’ ಎಂದು ಕಣ್ಣೀರಿಟ್ಟ ರೈತ
ದಾವಣಗೆರೆ: ನೂತನ ಸಚಿವ ಕೆ.ಎಸ್. ಬಸವಂತಪ್ಪ ಅವರನ್ನು ಸ್ವಾಗತಿಸಿ, ಅಭಿನಂದನೆ ಸಲ್ಲಿಸುವ ಸಂಭ್ರಮದಲ್ಲಿ ಭಾಗಿಯಾಗಲು ಬಂದಿದ್ದ ರೈತನೊಬ್ಬರಿಗೆ ಕೆಲವೇ ನಿಮಿಷಗಳಲ್ಲಿ ಸಂತಸದ ವಾತಾವರಣ ಆಘಾತವಾಗಿ ಮಾರ್ಪಟ್ಟಿದೆ. ತೆಂಗಿನಕಾಯಿ ಮಾರಿ ಕಷ್ಟಪಟ್ಟು ಸಂಪಾದಿಸಿ ತಂದಿದ್ದ ₹1 ಲಕ್ಷ ಹಣವನ್ನು ಜನಜಂಗುಳಿಯ ನಡುವೆ ಕಳ್ಳರು ಕದ್ದೊಯ್ದಿರುವ ಘಟನೆ ತಾಲೂಕಿನ ಗಡಿ ಭಾಗದ ನೀರ್ಥಡಿ ಕ್ರಾಸ್ ಬಳಿ ಶನಿವಾರ ನಡೆದಿದೆ.
ತಾಲೂಕಿನ ನೀರ್ಥಡಿ ಗ್ರಾಮದ ಸಂತೋಷ್ ಹಣ ಕಳೆದುಕೊಂಡ ರೈತ. ಬೆಳ್ಳಂಬೆಳಗ್ಗೆ ದಾವಣಗೆರೆ ತೆಂಗಿನಕಾಯಿ ಮಾರುಕಟ್ಟೆಗೆ ತೆರಳಿದ್ದ ಸಂತೋಷ್, ತಾವು ಬೆಳೆಸಿದ್ದ ತೆಂಗಿನಕಾಯಿಗಳನ್ನು ಮಾರಾಟ ಮಾಡಿದ್ದರು. ಅದರಿಂದ ಬಂದಿದ್ದ ಸುಮಾರು ₹1 ಲಕ್ಷ ಹಣವನ್ನು ಜೇಬಿನಲ್ಲಿ ಇಟ್ಟುಕೊಂಡಿದ್ದರು.
ತೆಂಗಿನಕಾಯಿ ಮಾರಾಟ ಮುಗಿಸಿದ ಬಳಿಕ ನೂತನ ಸಚಿವ ಕೆ.ಎಸ್. ಬಸವಂತಪ್ಪ ಅವರನ್ನು ಅಭಿನಂದಿಸಿ, ನಂತರ ಗ್ರಾಮಕ್ಕೆ ಮರಳುವ ಉದ್ದೇಶದಿಂದ ನೀರ್ಥಡಿ ಕ್ರಾಸ್‌ಗೆ ಬಂದಿದ್ದರು.
ಜನಜಂಗುಳಿಯಲ್ಲಿ ರೈತನಿಗೆ ಕನ್ನ : ಸಚಿವರ ಸ್ವಾಗತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನೀರ್ಥಡಿ ಕ್ರಾಸ್ ಸುತ್ತಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಸಂತೋಷ್ ಕೂಡ ಉತ್ಸಾಹದಿಂದ ಜನರೊಂದಿಗೆ ಸೇರಿಕೊಂಡು ಸಚಿವರನ್ನು ಭೇಟಿಯಾಗಿ ಕೈಕುಲುಕಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಜನಸಂದಣಿಯನ್ನೇ ದುರುಪಯೋಗಪಡಿಸಿಕೊಂಡ ಕಳ್ಳರು ಸಂತೋಷ್ ಅವರ ಜೇಬಿನಲ್ಲಿದ್ದ ಹಣವನ್ನು ಕಳವು ಮಾಡಿದ್ದಾರೆ ಎನ್ನಲಾಗಿದೆ. ಹಣ ಕಳುವಾಗುತ್ತಿರುವುದು ಸಂತೋಷ್ ಅವರಿಗೆ ತಕ್ಷಣಕ್ಕೆ ತಿಳಿದಿರಲಿಲ್ಲ.
ಸಚಿವರನ್ನು ಅಭಿನಂದಿಸಿದ ಬಳಿಕ ಜನಸಂದಣಿಯಿಂದ ಹೊರಬಂದು ಜೇಬಿನೊಳಗೆ ಕೈ ಹಾಕಿದಾಗ ₹1 ಲಕ್ಷ ಹಣ ನಾಪತ್ತೆಯಾಗಿರುವುದು ಗೊತ್ತಾಗಿದೆ. ಕ್ಷಣಮಾತ್ರದಲ್ಲಿ ಸಚಿವರನ್ನು ಭೇಟಿಯಾದ ಸಂಭ್ರಮ ಅವರ ಪಾಲಿಗೆ ಆಘಾತವಾಗಿ ಬದಲಾಗಿದೆ.
‘ಅದು ನನ್ನ ಬೆವರಿನ ಹಣ… ವಾಪಸ್ ಕೊಡಿ’ : ಹಣ ಕಳೆದುಕೊಂಡ ಬಳಿಕ ರೈತ ಸಂತೋಷ್ ಕಣ್ಣೀರಿಡುತ್ತಾ ತನ್ನ ಅಳಲು ತೋಡಿಕೊಂಡಿದ್ದಾರೆ. “ಯಾರಾದರೂ ನನ್ನ ಹಣ ತೆಗೆದುಕೊಂಡಿದ್ದರೆ ದಯವಿಟ್ಟು ವಾಪಸ್ ಕೊಡಿ. ಅದು ನಾನು ಕಷ್ಟಪಟ್ಟು ದುಡಿದ ಬೆವರಿನ ಹಣ. ಬರಗಾಲದಲ್ಲೂ ಸಾಲಸೂಲ ಮಾಡಿ ತೆಂಗಿನ ಗಿಡಗಳನ್ನು ಬೆಳೆಸಿದ್ದೆ. ಆ ಗಿಡಗಳ ಫಸಲು ಮಾರಿ ಬಂದ ಹಣವದು. ಮನೆಯ ಖರ್ಚು ಹಾಗೂ ಸಾಲ ತೀರಿಸುವ ನಿರೀಕ್ಷೆಯಲ್ಲಿ ಹಣ ತಂದಿದ್ದೆ. ದಯವಿಟ್ಟು ಯಾರಾದರೂ ತೆಗೆದುಕೊಂಡಿದ್ದರೆ ವಾಪಸ್ ಕೊಡಿ,” ಎಂದು ಅವರು ಮನವಿ ಮಾಡಿದ್ದಾರೆ.
ಕೆಲವೇ ನಿಮಿಷಗಳಲ್ಲಿ ಸಂಭ್ರಮ ಕಣ್ಣೀರಾಯ್ತು : ಒಂದೆಡೆ ತಮ್ಮ ಕ್ಷೇತ್ರದ ಶಾಸಕರು ಸಚಿವರಾಗಿದ್ದಕ್ಕೆ ಸಂತಸಗೊಂಡಿದ್ದ ಸಂತೋಷ್, ಅವರನ್ನು ಅಭಿನಂದಿಸಿ ಖುಷಿಪಡಲು ಬಂದಿದ್ದರು. ಮತ್ತೊಂದೆಡೆ, ತಾವು ಕಷ್ಟಪಟ್ಟು ಬೆಳೆಸಿದ ತೆಂಗಿನಕಾಯಿಗಳ ಫಸಲು ಮಾರಾಟದಿಂದ ಬಂದಿದ್ದ ಹಣವೇ ಕಳೆದುಹೋಗಿರುವುದು ಅವರಿಗೆ ದೊಡ್ಡ ಆಘಾತ ನೀಡಿದೆ. ಮನೆಯ ಖರ್ಚು ಹಾಗೂ ಸಾಲ ತೀರಿಸುವ ಉದ್ದೇಶದಿಂದ ತಂದಿದ್ದ ಹಣ ಕಳವಾಗಿರುವುದರಿಂದ ರೈತನ ಕುಟುಂಬಕ್ಕೂ ಸಂಕಷ್ಟ ಎದುರಾಗಿದೆ.
ತನಿಖೆಗೆ ಒತ್ತಾಯ : ರೈತನ ಬೆವರಿನ ಹಣವನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸಿರುವ ಘಟನೆಯ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಸಚಿವರ ಸ್ವಾಗತ ಕಾರ್ಯಕ್ರಮದಲ್ಲಿ ಹೆಚ್ಚಿನ ಜನರು ಸೇರಿದ್ದ ಹಿನ್ನೆಲೆಯಲ್ಲಿ ಕಳ್ಳರು ಜನಸಂದಣಿಯ ಲಾಭ ಪಡೆದಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿ, ಸಿಸಿಟಿವಿ ದೃಶ್ಯಾವಳಿ ಹಾಗೂ ಕಾರ್ಯಕ್ರಮದ ವೇಳೆ ಹಾಜರಿದ್ದ ಜನರ ಮಾಹಿತಿಯನ್ನು ಪರಿಶೀಲಿಸಿ ಕಳ್ಳರನ್ನು ಪತ್ತೆಹಚ್ಚಬೇಕು. ರೈತನ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಮರಳಿ ದೊರಕಿಸಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.





















