SK Home Ad
Home ಸುದ್ದಿ ರಾಜ್ಯ ಕಸ್ತೂರಿರಂಗನ್ ವರದಿ: ಸುಪ್ರೀಂನಲ್ಲಿ ರಾಜ್ಯದ ಅಭಿಪ್ರಾಯ ಮಂಡಿಸಲು ವಕೀಲರ ನೇಮಕ

ಕಸ್ತೂರಿರಂಗನ್ ವರದಿ: ಸುಪ್ರೀಂನಲ್ಲಿ ರಾಜ್ಯದ ಅಭಿಪ್ರಾಯ ಮಂಡಿಸಲು ವಕೀಲರ ನೇಮಕ

0
77

ಬೆಂಗಳೂರು: “ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್‌ನಲ್ಲಿ ರಾಜ್ಯದ ಸ್ಪಷ್ಟ ಅಭಿಪ್ರಾಯ ಮಂಡಿಸಲು ಹಿರಿಯ ವಕೀಲರನ್ನು ನೇಮಿಸಲಾಗುವುದು” ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಮಂಗಳವಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಸಿಎಂ ಉತ್ತರಿಸಿದರು.

“ನನಗಿರುವ ಮಾಹಿತಿಯ ಪ್ರಕಾರ, ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯು ಕಸ್ತೂರಿರಂಗನ್ ವರದಿ ಜಾರಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವನ್ನು ಅಂತಿಮ ಅಧಿಸೂಚನೆ ಹೊರಡಿಸುವ ತೀರ್ಮಾನ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ. ಅಧಿಸೂಚನೆ ಹೊರಡಿಸಿದ ನಂತರ ತನ್ನ ಗಮನಕ್ಕೆ ತರುವಂತೆ ಹೇಳಿದೆ. ಆದರೆ, ಮಂಡಳಿಯು ಪಶ್ಚಿಮಘಟ್ಟವನ್ನು ಹಂಚಿಕೊಂಡಿರುವ ರಾಜ್ಯದ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ” ಎಂದು ಹೇಳಿದರು.

“ಹಾಗಂತ ಕಸ್ತೂರಿ ರಂಗನ್ ಸಮಿತಿಯು ಮಾಡಿರುವ ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶಗಳ ಶಿಫಾರಸ್ಸನ್ನು ನಾವು ಅಗೌರವಿಸುತ್ತಿಲ್ಲ. ಬದಲಾಗಿ, ಅದನ್ನು ನಮ್ಮ ರಾಜ್ಯದ ಹಿತದೃಷ್ಟಿ ಇಟ್ಟುಕೊಂಡು ವೈಜ್ಞಾನಿಕ ಹಾದಿಯಲ್ಲಿ ಪರಿಷ್ಕರಿಸಿ ಎಂದು ಮನವಿ ಮಾಡುತ್ತಿದ್ದೇವೆ” ಎಂದರು.

“ಡ್ರೋಣ್ ಸರ್ವೇ ಮಾಡಿಸಿದರೆ ಎಲ್ಲವೂ ಹಸಿರು ಕಾಣುತ್ತದೆ ಎನ್ನುವ ವಿಚಾರ ಸದನದಲ್ಲಿ ಪ್ರತಿಧ್ವನಿಸಿದೆ. ಹಾಗಾಗಿ, ರೆವಿನ್ಯೂ ಇಲಾಖೆಯ ಮೂಲಕ ಸರ್ವೇ ಮಾಡಿಸಬೇಕಾಗುತ್ತದೆ” ಎಂದು ತಿಳಿಸಿದರು.