ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದಲ್ಲಿ ಮಾಜಿ ಗ್ರಾಮ ಪಂಚಾಯತಿ ಸದಸ್ಯನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಕೊಲೆಯಾದ ವ್ಯಕ್ತಿಯನ್ನು ನಲ್ಲೂರು ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಅತಾವುಲ್ಲಾ (38) ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಹಣಕಾಸಿನ ವ್ಯವಹಾರ ಹಾಗೂ ಅನೈತಿಕ ಸಂಬಂಧದ ಹಿನ್ನೆಲೆ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಶುಕ್ರವಾರ ರಾತ್ರಿ ಸುಮಾರು 10.30ರ ವೇಳೆಗೆ ನಲ್ಲೂರಿನ ಕ್ಯಾಂಪ್ ಪ್ರದೇಶದಲ್ಲಿರುವ ಎಸ್‌ಎಲ್‌ವಿ ಬೇಕರಿ ಎದುರು ಘಟನೆ ನಡೆದಿದೆ. ಅತಾವುಲ್ಲಾ ಬೈಕ್ ಮೇಲೆ ನಿಂತಿದ್ದ ವೇಳೆ ಆರೋಪಿಗಳು ಹಿಂಬದಿಯಿಂದ ಮಚ್ಚಿನಿಂದ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ದಾಳಿಯ ಪರಿಣಾಮ ಅತಾವುಲ್ಲಾ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಿಂದ ಪ್ರದೇಶದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಶೇಖ್ ಜುಬಿವುಲ್ಲಾ ಹಾಗೂ ಶೇಖ್ ದಸ್ತಗಿರ್ ಎಂಬುವರನ್ನು ಆರೋಪಿಗಳೆಂದು ಗುರುತಿಸಲಾಗಿದ್ದು, ಅವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕಾಗೆಕೊಡಿಮಗ್ಗೆ ಗ್ರಾಮದ ನಿವಾಸಿಗಳಾಗಿದ್ದಾರೆ ಎನ್ನಲಾಗಿದೆ.
ಕೊಲೆ ನಡೆಸಿದ ಬಳಿಕ ಇಬ್ಬರು ಆರೋಪಿಗಳು ನೇರವಾಗಿ ಚನ್ನಗಿರಿ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿರುವುದು ಪ್ರಕರಣಕ್ಕೆ ಮತ್ತಷ್ಟು ಕುತೂಹಲ ಮೂಡಿಸಿದೆ.
ಸುದ್ದಿ ತಿಳಿಯುತ್ತಿದ್ದಂತೆ ಚನ್ನಗಿರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೊಲೆಗೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.
ಹಣಕಾಸಿನ ವ್ಯವಹಾರ ಮತ್ತು ವೈಯಕ್ತಿಕ ವೈಷಮ್ಯ ಎರಡೂ ಪ್ರಕರಣದ ಪ್ರಮುಖ ಕಾರಣಗಳಾಗಿರಬಹುದೆಂಬ ಶಂಕೆಯಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.























