ಬೆಂಗಳೂರಿಗೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದ ಒಂದೇ ಕುಟುಂಬದ ನಾಲ್ವರು ನಾಪತ್ತೆ; ದಾವಣಗೆರೆಯಲ್ಲಿ ಆತಂಕ
ದಾವಣಗೆರೆ: ಬೆಂಗಳೂರಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ್ದ ಒಂದೇ ಕುಟುಂಬದ ನಾಲ್ವರು ನಾಪತ್ತೆಯಾಗಿರುವ ಘಟನೆ ದಾವಣಗೆರೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ದಾವಣಗೆರೆ ಹೊರವಲಯದ ಬನಶಂಕರಿ ಬಡಾವಣೆಯ ನಿವಾಸಿಗಳಾದ ರಮೇಶ್‌ಕುಮಾರ್ (38), ಅವರ ಪತ್ನಿ ಜಯಶೀಲಾ (36), ಪುತ್ರ ಹಿತೇಶ್ (9) ಹಾಗೂ ಪುತ್ರಿ ಪ್ರೇರಣಾ (3) ಕಾಣೆಯಾಗಿದ್ದಾರೆ.
ಆಗಸ್ಟ್ 14ರಂದು ಬೆಂಗಳೂರಿಗೆ ತೆರಳಿ ಬರುವುದಾಗಿ ರಮೇಶ್‌ಕುಮಾರ್ ಅವರು ತಮ್ಮ ಪೋಷಕರಿಗೆ ತಿಳಿಸಿದ್ದರು ಎನ್ನಲಾಗಿದೆ. ವ್ಯವಹಾರದ ನಿಮಿತ್ತ ಬೆಂಗಳೂರಿಗೆ ತೆರಳುತ್ತಿದ್ದು, ರಜೆ ಇರುವ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಮಕ್ಕಳನ್ನೂ ತಮ್ಮೊಂದಿಗೆ ಕರೆದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.
ಆದರೆ, ನಾಲ್ವರು ಬೆಂಗಳೂರಿಗೆ ತೆರಳಿದ್ದಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಮನೆಯಿಂದ ಹೊರಟು ಐದು ದಿನಗಳು ಕಳೆದರೂ ಕುಟುಂಬದ ಸದಸ್ಯರ ಕುರಿತು ಯಾವುದೇ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಸಂಬಂಧಿಕರು ಹಾಗೂ ಕುಟುಂಬದವರು ಆತಂಕಕ್ಕೊಳಗಾಗಿದ್ದಾರೆ.
ಷೇರು ಹೂಡಿಕೆ ವ್ಯವಹಾರ ನಡೆಸುತ್ತಿದ್ದ ರಮೇಶ್‌ಕುಮಾರ್ : ಮೂಲತಃ ದಾವಣಗೆರೆ ತಾಲೂಕಿನ ಶ್ಯಾಗಲೆ ಗ್ರಾಮದವರಾದ ರಮೇಶ್‌ಕುಮಾರ್ ಷೇರು ಹೂಡಿಕೆ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ. ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇತ್ತೀಚಿನ ದಿನಗಳಲ್ಲಿ ಷೇರು ಹೂಡಿಕೆಯಲ್ಲಿ ಅವರು ಸಾಕಷ್ಟು ನಷ್ಟ ಅನುಭವಿಸಿದ್ದರು ಎಂಬ ಮಾಹಿತಿಯೂ ಕುಟುಂಬದ ಮೂಲಗಳಿಂದ ತಿಳಿದುಬಂದಿದೆ. ನಾಲ್ವರು ನಾಪತ್ತೆಯಾಗಿರುವ ಘಟನೆಗೆ ಈ ಬೆಳವಣಿಗೆಗೂ ಯಾವುದಾದರೂ ಸಂಬಂಧವಿದೆಯೇ ಎಂಬುದು ತನಿಖೆಯಿಂದಷ್ಟೇ ತಿಳಿಯಬೇಕಿದೆ.
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ : ರಮೇಶ್‌ಕುಮಾರ್, ಜಯಶೀಲಾ ಹಾಗೂ ಇಬ್ಬರು ಮಕ್ಕಳು ಮನೆಯಿಂದ ಹೊರಗೆ ತೆರಳುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ, ಕುಟುಂಬದವರು ಬಳಸುತ್ತಿದ್ದ ಕಾರು ಹಾಗೂ ದ್ವಿಚಕ್ರ ವಾಹನಗಳು ಮನೆಯಲ್ಲೇ ಇರುವುದರಿಂದ ಅವರ ನಾಪತ್ತೆ ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.
ನಾಲ್ವರು ಯಾವ ವಾಹನದಲ್ಲಿ ತೆರಳಿದರು, ಎಲ್ಲಿಗೆ ಹೋಗಿದ್ದಾರೆ ಹಾಗೂ ಬಳಿಕ ಅವರ ಮೊಬೈಲ್ ಫೋನ್‌ಗಳ ಸಂಪರ್ಕದ ಸ್ಥಿತಿ ಏನಾಗಿದೆ ಎಂಬುದರ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಕುಟುಂಬಸ್ಥರಲ್ಲಿ ಹೆಚ್ಚಿದ ಆತಂಕ : ಮನೆಯಿಂದ ತೆರಳಿ ಐದು ದಿನಗಳು ಕಳೆದರೂ ನಾಲ್ವರು ಎಲ್ಲಿದ್ದಾರೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ದೊರೆಯದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಸಂಬಂಧಿಕರು ಹಾಗೂ ಪರಿಚಿತರ ಬಳಿಯೂ ವಿಚಾರಣೆ ನಡೆಸಲಾಗಿದ್ದು, ಯಾವುದೇ ಸುಳಿವು ಸಿಕ್ಕಿಲ್ಲ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿ, ನಾಪತ್ತೆಯಾಗಿರುವ ರಮೇಶ್‌ಕುಮಾರ್, ಜಯಶೀಲಾ, ಹಿತೇಶ್ ಹಾಗೂ ಪ್ರೇರಣಾ ಅವರನ್ನು ಶೀಘ್ರವಾಗಿ ಪತ್ತೆಹಚ್ಚುವಂತೆ ಮನವಿ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದು, ಸಿಸಿಟಿವಿ ದೃಶ್ಯಗಳು, ಮೊಬೈಲ್ ಫೋನ್‌ಗಳ ಮಾಹಿತಿ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಕುಟುಂಬದ ನಾಲ್ವರು ಎಲ್ಲಿಗೆ ತೆರಳಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ತನಿಖೆ ಮುಂದುವರಿದಿದ್ದು, ಕುಟುಂಬದವರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.





















