SK Home Ad
Home ಸುದ್ದಿ Samyukta Karnataka News Live: ರವಿಚಂದ್ರನ್, ರಿಶ್ವಿನ್, ರಾಶಿಕಾ ಶೆಟ್ಟಿ ಅಭಿನಯದ ‘ಪ್ಯಾರ್’ ಟೀಸರ್ ಔಟ್

Samyukta Karnataka News Live: ರವಿಚಂದ್ರನ್, ರಿಶ್ವಿನ್, ರಾಶಿಕಾ ಶೆಟ್ಟಿ ಅಭಿನಯದ ‘ಪ್ಯಾರ್’ ಟೀಸರ್ ಔಟ್

0
364

ತಂದೆ-ಮಗಳ ಪ್ರೀತಿಯ ಕಥೆ – ‘ಪ್ಯಾರ್’ ಚಿತ್ರದ ಆಕರ್ಷಕ ಟೀಸರ್ ರಿಲೀಸ್ : ಕನ್ನಡದ ಬಹುನಿರೀಕ್ಷಿತ ಚಿತ್ರ ‘ಪ್ಯಾರ್’ (Pyaar) ಚಿತ್ರದ ಅಧಿಕೃತ ಟೀಸರ್ ಇಂದು ಬಿಡುಗಡೆಯಾಗಿದ್ದು, ತಂದೆ-ಮಗಳ ನಡುವಿನ ಅಪಾರ ಪ್ರೀತಿ, ಕೌಟುಂಬಿಕ ಭಾವನೆಗಳ ಜೊತೆಗೆ ಆ್ಯಕ್ಷನ್ ಹಾಗೂ ಸಂಘರ್ಷದ ಝಲಕ್ ಮೂಲಕ ಮಗಳ ಮೇಲಿನ ತಂದೆಯ ಪ್ರೀತಿಯನ್ನು ಮನಮುಟ್ಟುವ ರೀತಿಯಲ್ಲಿ ಕಟ್ಟಿಕೊಟ್ಟಿವೆ. ಮಗಳ ಬಗ್ಗೆ ಹೆಮ್ಮೆಪಡುವ ತಂದೆಯ ಪಾತ್ರದಲ್ಲಿ ಹಿರಿಯ ನಟ ವಿ. ರವಿಚಂದ್ರನ್ ಅವರು ಕಾಣಿಸಿಕೊಂಡಿದ್ದು ಅವರ ಸಂಭಾಷಣೆ ಟೀಸರ್‌ನಲ್ಲಿ ವಿಶೇಷ ಗಮನ ಸೆಳೆಯುತ್ತದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ನೇಪಾಳ ಜಲಪ್ರಳಯ, ಭೂಕುಸಿತ ದುರಂತಕ್ಕೆ ಶೃಂಗೇರಿ ಶಾರದಾಪೀಠ ತೀವ್ರ ಕಳವಳ : ನೇಪಾಳದಲ್ಲಿ ಸಂಭವಿಸಿರುವ ಜಲಪ್ರಳಯ ಹಾಗೂ ಭೂಕುಸಿತದಿಂದ ಉಂಟಾಗಿರುವ ಭೀಕರ ದುರಂತಕ್ಕೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಶ್ರೀ ಶಾರದಾಪೀಠ ತೀವ್ರ ಕಳವಳ ವ್ಯಕ್ತಪಡಿಸಿದೆ. ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಸಂತ್ರಸ್ತರಿಗೆ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಕಿರಿಯ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ತೀರ್ಥ ಮಹಾಸ್ವಾಮಿಗಳು ಪ್ರಾರ್ಥಿಸಿದರು. ಶೃಂಗೇರಿಯ ಶ್ರೀ ಶಾರದಾ ಪರಮೇಶ್ವರಿ ಹಾಗೂ ಶ್ರೀ ಚಂದ್ರಮೌಳೀಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದ ಶ್ರೀಗಳು, ನೇಪಾಳದಲ್ಲಿ ಸಂಭವಿಸಿರುವ ಮಹಾ ವಿಪತ್ತಿನಿಂದ ಜನಜೀವನ ಶೀಘ್ರ ಸಹಜ ಸ್ಥಿತಿಗೆ ಮರಳಲಿ ಎಂದು ಹಾರೈಸಿದರು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

‘ಫಾಸ್ಟ್ & ಫ್ಯೂರಿಯಸ್ – ಹಾಲಿವುಡ್ ಡ್ರಿಫ್ಟ್’ ರೋಲರ್ ಕೋಸ್ಟರ್‌ಗೆ ಅಧಿಕೃತ ದಿನಾಂಕ ಫಿಕ್ಸ್ : ‘ಫಾಸ್ಟ್ & ಫ್ಯೂರಿಯಸ್’ ಅಭಿಮಾನಿಗಳು ಬಹುನಿರೀಕ್ಷೆಯಿಂದ ಕಾಯುತ್ತಿದ್ದ ‘ಫಾಸ್ಟ್ & ಫ್ಯೂರಿಯಸ್: ಹಾಲಿವುಡ್ ಡ್ರಿಫ್ಟ್’ ಹೈ-ಸ್ಪೀಡ್ ರೋಲರ್ ಕೋಸ್ಟರ್‌ಗೆ ಕೊನೆಗೂ ಅಧಿಕೃತ ಉದ್ಘಾಟನಾ ದಿನಾಂಕ ಘೋಷಣೆಯಾಗಿದೆ. 2026ರ ಸೆಪ್ಟೆಂಬರ್ 16ರಂದು ಯೂನಿವರ್ಸಲ್ ಸ್ಟುಡಿಯೋಸ್ ಹಾಲಿವುಡ್‌ನಲ್ಲಿ ಈ ಹೊಸ ಆಕರ್ಷಣೆ ಸಾರ್ವಜನಿಕರಿಗೆ ಅಧಿಕೃತವಾಗಿ ತೆರೆಯಲಿದೆ. ‘ಹಾಲಿವುಡ್ ಡ್ರಿಫ್ಟ್’ ಯೂನಿವರ್ಸಲ್ ಸ್ಟುಡಿಯೋಸ್ ಹಾಲಿವುಡ್‌ನ ಮೊದಲ ಹೊರಾಂಗಣ ಹೈ-ಸ್ಪೀಡ್ ರೋಲರ್ ಕೋಸ್ಟರ್ ಆಗಿದ್ದು, ಇದನ್ನು ಯೂನಿವರ್ಸಲ್ ಡೆಸ್ಟಿನೇಷನ್ಸ್ & ಎಕ್ಸ್‌ಪೀರಿಯನ್ಸಸ್‌ನ ಪೋರ್ಟ್‌ಫೋಲಿಯೊದಲ್ಲೇ ವೇಗದ ಕೋಸ್ಟರ್ ಎಂದು ಸಂಸ್ಥೆ ಹೇಳಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

NEET Protest – ವಿದ್ಯಾರ್ಥಿಗಳ ವಿರುದ್ಧದ FIR ರದ್ದು, ಸುಪ್ರೀಂ ಕೋರ್ಟ್ ಮಹತ್ವದ ಆದೇಶ : ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರ ಆರೋಪದಡಿ ಪ್ರತಿಭಟನಕಾರರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗಳನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯಾ ಬಾಗ್ನಿ ಮತ್ತು ವಿ.ಮೋಹನಾ ಅವರನ್ನೊಳಗೊಂಡ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದೆ. ಇಂತಹ ಎಫ್‌ಐಆರ್‌ಗಳ ತನಿಖೆ ಮುಂದುವರಿಸಬಾರದು. ಅವುಗಳನ್ನು ಸಂಪೂರ್ಣ ಮುಕ್ತಾಯಗೊಳಿಸಲಾಗಿದೆ ಎಂದು ಪರಿಗಣಿಸಿ ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

‘ರಾಮುಲು–ರೆಡ್ಡಿ ರಿಜೆಕ್ಟೆಡ್ ಪೀಸ್‌ಗಳು’: ಬಿಜೆಪಿ ‘ಬಳ್ಳಾರಿ ಚಲೋ’ ಪಾದಯಾತ್ರೆ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರು ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರೆಡ್ಡಿ ಅವರನ್ನು ‘ಚಲಾವಣೆ ಇಲ್ಲದ ನಾಣ್ಯ’ ಎಂದು ವ್ಯಂಗ್ಯವಾಡಿದ ಅವರು, ‘ದಿ ಗ್ರೇಟ್ ಬಳ್ಳಾರಿ ಉಸ್ತುವಾರಿ ಸಚಿವರಾಗಿದ್ದ ನೀವು ರಿಜೆಕ್ಟ್ ಪೀಸ್‌ಗಳು’ ಎಂದು ಟೀಕಿಸಿದ್ದಾರೆ. ‘ದಿ ಗ್ರೇಟ್ ಜನಾರ್ದನ ರೆಡ್ಡಿ ಅಣ್ಣ ಎಂದು ಕರೆಯಬೇಕಾ? ಗಣಿಧಣಿ, ಲೂಟಿ ಅಣ್ಣ ಎಂದು ಕರೆಯಬೇಕಾ?’ ಎಂದು ಪ್ರಶ್ನಿಸಿದ ನಾಗೇಂದ್ರ, ‘ನಾನು ಬಳ್ಳಾರಿಯ ತಮ್ಮ, ಬಳ್ಳಾರಿ ಮನೆಯ ಮಗ’ ಎಂದು ಘಂಟಾಘೋಷವಾಗಿ ಹೇಳಿದರು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಪದವಿ, ಪಿಯುಸಿ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ 4,000 ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಸಿದ್ಧತೆ! : ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಪದವಿ ಹಾಗೂ ಪಿಯುಸಿ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿಹಿಸುದ್ದಿ ನೀಡಿದೆ. ಪದವಿ ಮತ್ತು ಪಿಯುಸಿ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗಾಗಿ ಒಟ್ಟು 4,000 ಕ್ಕೂ ಅಧಿಕ ತಾಂತ್ರಿಕೇತರ ಹಾಗೂ ತಾಂತ್ರಿಕ ಹುದ್ದೆಗಳ ನೇಮಕಾತಿಗೆ ಈ ತಿಂಗಳಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ, ಐಎಎಸ್ ತಿಳಿಸಿದ್ದಾರೆ. ಈ ಹುದ್ದೆಗಳಿಗೆ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಲಿಖಿತ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಕೆಇಎ ತಿಳಿಸಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ರೈತರಿಗೆ ಮಧ್ಯಂತರ ಪರಿಹಾರ 18 ಕೋಟಿ ರೂ. ಶೀಘ್ರ ಮಂಜೂರು : ಖಾರಿಫ್ ಋತುಮಾನದಲ್ಲಿ‌ ಮಳೆ ಕೊರತೆ ಕಾರಣ ಪ್ರಸಕ್ತ 2026-27ನೇ ಸಾಲಿನ ಬೆಳೆ ವಿಮೆ ಯೋಜನೆಯಡಿ ಅಲ್ಪಾವಧಿ ಬೆಳೆಗಳಾದ ಹೆಸರು, ಉದ್ದು ಹಾಗೂ ಸೋಯಾಬೀನ್ ಬೆಳೆಗಳಿಗೆ ಬೆಳೆ ವಿಮೆ ಮದ್ಯಂತರ ಪರಿಹಾರಕ್ಕಾಗಿ 18 ಕೋಟಿ ರೂ. (Mid Season Adversity) ಸರ್ಕಾರಕ್ಕೆ ಕಲಬುರಗಿ ಜಿಲ್ಲಾಡಳಿತದಿಂದ ವರದಿ ಸಲ್ಲಿಸಿದ್ದು, ಶೀಘ್ರದಲ್ಲಿಯೆ ಪರಿಹಾರ ಮಂಜೂರಾಗಲಿದೆ ಎಂದು ರಾಜ್ಯದ ಗೃಹ, ಐ.ಟಿ-ಬಿ.ಟಿ, ಇ‌-ಆಡಳಿತ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಸಿಎಂ ಡಿಕೆಶಿ ಗದಗ ಜಿಲ್ಲಾ ಪ್ರವಾಸ – ಜನಪ್ರತಿನಿಧಿಗಳಿಂದ ಸ್ವಾಗತ : ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಗದಗ ಜಿಲ್ಲೆಗೆ ಆಗಮಿಸಿದರು. ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಹೆಲಿಪ್ಯಾಡ್‌ಗೆ ಬಂದಿಳಿದ ಮುಖ್ಯಮಂತ್ರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ಗಣ್ಯರು ಸ್ವಾಗತಿಸಿದರು. ಹೆಲಿಪ್ಯಾಡ್‌ನಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಗೌರವ ವಂದನೆ ಸಲ್ಲಿಸಲಾಯಿತು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ರೈತರ ಬಗ್ಗೆ ನನ್ನದೇ ಆದ ಆಲೋಚನೆ ಇದೆ – ಬರದ ಬಗ್ಗೆ ಸದನದಲ್ಲಿ ಚರ್ಚೆಯಾಗಲಿಲ್ಲ – ಡಿಕೆಶಿ : ಬರ ಘೋಷಣೆ ವಿಚಾರದಲ್ಲಿ ಅಸಮಾಧಾನವಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ, ಬರ ಘೋಷಣೆಯನ್ನು ರಾಜಕೀಯವಾಗಿ ನಿರ್ಧರಿಸಲು ಸಾಧ್ಯವಿಲ್ಲ. ಅದಕ್ಕೆ ನಿಗದಿತ ಪ್ರಕ್ರಿಯೆ ಮತ್ತು ಪದ್ಧತಿ ಇದೆ ಎಂದು ಸ್ಪಷ್ಟಪಡಿಸಿದರು. ತಮ್ಮ ಕ್ಷೇತ್ರವಾದ ಕನಕಪುರದಲ್ಲಿಯೂ ಬರ ಪರಿಸ್ಥಿತಿ ಇದ್ದರೂ ಅಧಿಕೃತವಾಗಿ ಬರ ಘೋಷಣೆಯಾಗಿಲ್ಲ ಎಂದು ಹುಬ್ಬಳ್ಳಿಯಲ್ಲಿ ಹೇಳಿದರು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ಮ್ಯಾರಥಾನ್‌ ಓಡಿದ ತಾಯಿಯ ವಿಡಿಯೋ ವೈರಲ್ : ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹಣ ಸಂಗ್ರಹಿಸುವ ಉದ್ದೇಶದಿಂದ 47 ವರ್ಷದ ತಾಯಿ ರಮಾಬಾಯಿ ರಣವೀರ್ ಅವರು ಯಾವುದೇ ವಿಶೇಷ ತರಬೇತಿ, ಕ್ರೀಡಾ ಶೂ ಅಥವಾ ಸಿದ್ಧತೆ ಇಲ್ಲದೆ ಮ್ಯಾರಥಾನ್‌ನಲ್ಲಿ ಭಾಗವಹಿಸಿ ಗೆಲುವು ಸಾಧಿಸಿರುವ ಘಟನೆ ಗಮನ ಸೆಳೆದಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬಂದ್ ಬಿಸಿಯ ನಡುವೆಯೂ ‘ಟಾಕ್ಸಿಕ್’ ವೀಕ್ಷಣೆಗೆ ವಿದ್ಯಾರ್ಥಿಗಳ ದಂಡು: ಭದ್ರಾ ಮೇಲ್ದಂಡೆ ಯೋಜನೆಗೆ ಭದ್ರಾ ಜಲಾಶಯದಿಂದ ಮೂರು ಟಿಎಂಸಿ ಅಡಿ ನೀರು ಹರಿಸುವುದು ಹಾಗೂ ಗುಟ್ಕಾ ನಿಷೇಧವನ್ನು ವಿರೋಧಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಮಂಗಳವಾರ ದಾವಣಗೆರೆ ಬಂದ್‌ಗೆ ಕರೆ ನೀಡಿದ್ದರೂ, ನಗರದ ಚಿತ್ರಮಂದಿರಗಳಲ್ಲಿ ಬೆಳಗಿನ ಪ್ರದರ್ಶನಕ್ಕೆ ಬಂದ್ ಬಿಸಿ ತಟ್ಟದಿರುವುದು ಕಂಡುಬಂತು. ಬಂದ್ ಹಿನ್ನೆಲೆಯಲ್ಲಿ ಕೆಲ ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದರೆ, ಸರ್ಕಾರಿ ಶಾಲಾ-ಕಾಲೇಜುಗಳು ಹಾಗೂ ಬಹುತೇಕ ಖಾಸಗಿ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ರಜೆ ಇದ್ದ ಹಿನ್ನೆಲೆಯಲ್ಲಿ ಕೆಲವು ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಿನಿಮಾ ವೀಕ್ಷಣೆಗೆ ಚಿತ್ರಮಂದಿರಗಳತ್ತ ಮುಖ ಮಾಡಿರುವುದು ಕಂಡುಬಂತು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಸವಣಾಲು ಗ್ರಾಮದಲ್ಲಿ ಮತ್ತೊಂದು ಚಿರತೆ ಸೆರೆ – ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ : ಮನೆಯ ಅಂಗಳದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆಯೊಂದು ಸೆರೆಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದ ಹನ್ಯಾಡಿ ಪಲ್ಕೆ ಪ್ರದೇಶದಲ್ಲಿ ಸೆಪ್ಟೆಂಬರ್ 1ರ ಬೆಳಗ್ಗೆ ನಡೆದಿದೆ. ಹನ್ಯಾಡಿ ಪಲ್ಕೆ ನಿವಾಸಿ ಬಾಲಕೃಷ್ಣ ನಾಯ್ಕ ಅವರ ಮನೆಯ ಅಂಗಳದಲ್ಲಿ ಬೆಳ್ತಂಗಡಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಸೆರೆಹಿಡಿಯಲು ಬೋನು ಇರಿಸಿದ್ದರು. ಬೆಳಗ್ಗೆ ಪರಿಶೀಲನೆ ನಡೆಸಿದಾಗ ಚಿರತೆ ಬೋನಿಗೆ ಸೆರೆಯಾಗಿರುವುದು ಕಂಡುಬಂದಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ದಾಂಡೇಲಿ ನಗರಸಭೆ ಆಡಳಿತಕ್ಕೆ ‘ಸರ್ಜರಿ’ ಅಗತ್ಯ? : ಜನಸಾಮಾನ್ಯರ ಸಣ್ಣಪುಟ್ಟ ಕೆಲಸಗಳಿಗೂ ವಿಳಂಬ, ಸಿಬ್ಬಂದಿ ಕೊರತೆ ಹಾಗೂ ಮಾಹಿತಿ ನೀಡುವಲ್ಲಿ ನಿರ್ಲಕ್ಷ್ಯದ ಆರೋಪಗಳ ನಡುವೆ ದಾಂಡೇಲಿ ನಗರಸಭೆಯ ಆಡಳಿತ ವ್ಯವಸ್ಥೆ ಸುಧಾರಣೆಯ ಅಗತ್ಯ ಎದುರಿಸುತ್ತಿದೆ. ಇದರ ನಡುವೆ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆಯಲ್ಲಿ ನಕಲಿ ಹಕ್ಕುಪತ್ರ, ಅಧಿಕಾರಿಗಳ ಸಹಿ ನಕಲು ಹಾಗೂ ಅರ್ಹರಲ್ಲದವರಿಗೆ ನಿವೇಶನ ನೀಡಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಲೋಕಾಯುಕ್ತ ಪರಿಶೀಲನೆಯಲ್ಲಿ ಹೆಚ್ಚು ಅನುಮಾನಾಸ್ಪದ ಹಕ್ಕುಪತ್ರಗಳು ಪತ್ತೆಯಾಗಿವೆ ಎನ್ನಲಾಗಿದ್ದು, ಈ ಕುರಿತು ಸಮಗ್ರ ದಾಖಲೆ ಆಧಾರಿತ ತನಿಖೆಗೆ ಆಗ್ರಹಿಸಲಾಗಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಭದ್ರಾ ಮೇಲ್ದಂಡೆ ಯೋಜನೆಗೆ ನೀರು – ದಾವಣಗೆರೆ ಬಂದ್‌ಗೆ ಸಹಕರಿಸಲು ಬಿಜೆಪಿ ಮನವಿ : ಭದ್ರಾ ಮೇಲ್ದಂಡೆ ಯೋಜನೆಗೆ ಭದ್ರಾ ಜಲಾಶಯದಿಂದ ಮೂರು ಟಿಎಂಸಿ ಅಡಿ ನೀರು ಹರಿಸುವಂತೆ ಒತ್ತಾಯಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಕರೆ ನೀಡಿದ್ದ ದಾವಣಗೆರೆ ಬಂದ್‌ಗೆ ಸಹಕರಿಸುವಂತೆ ಬಿಜೆಪಿ ಮುಖಂಡರು ನಗರದ ವ್ಯಾಪಾರಸ್ಥರು, ಅಂಗಡಿ ಮಾಲೀಕರು, ಆಟೋ ಚಾಲಕರು ಹಾಗೂ ಬಸ್ ಮಾಲೀಕರಿಗೆ ಮನವಿ ಮಾಡಿದರು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಅಣ್ಣಾ ಹಜಾರೆ ಆರೋಗ್ಯದಲ್ಲಿ ಏರುಪೇರು – ಮುಂಬೈ ಆಸ್ಪತ್ರೆಗೆ ದಾಖಲು : ಹಿರಿಯ ಸಾಮಾಜಿಕ ಕಾರ್ಯಕರ್ತ ಹಾಗೂ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಮುಂಬೈನ ಬಾಂಬೆ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಲಾಗಿದೆ. ಮಹಾರಾಷ್ಟ್ರದ ರಾಲೇಗಣ ಸಿದ್ಧಿ ಗ್ರಾಮದ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಣ್ಣಾ ಹಜಾರೆ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮುಂಬೈಗೆ ಸ್ಥಳಾಂತರಿಸಲಾಗಿದೆ. ಅವರನ್ನು ಕಾರ್ಡಿಯಾಕ್ ಆಂಬ್ಯುಲೆನ್ಸ್ ಮೂಲಕ ಮುಂಬೈನ ಬಾಂಬೆ ಆಸ್ಪತ್ರೆಗೆ ಕರೆತರಲಾಗಿದೆ ಎಂದು ವರದಿಗಳು ತಿಳಿಸಿವೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಡಿವೈಡರ್‌ಗೆ ಗುದ್ದಿ ಪಲ್ಟಿಯಾದ ಕಾರು; ಧಾರವಾಡದಲ್ಲಿ ಮೂವರ ದಾರುಣ ಸಾವು : ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ಧಾರವಾಡ ತಾಲೂಕಿನ ವೆಂಕಟಾಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ನಡೆದಿದೆ. ಘಟನೆ ಕುರಿತು ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ದಾವಣಗೆರೆ ಬಂದ್‌ – ಬಸ್‌, ಆಟೋ ಸಂಚಾರ ವಿರಳ : ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಯೋಜನೆಗೆ ಮೂರು ಟಿಎಂಸಿ ಅಡಿ ನೀರು ಹರಿಸುವುದು ಹಾಗೂ ಗುಟ್ಕಾ ನಿಷೇಧವನ್ನು ವಿರೋಧಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಕರೆ ನೀಡಿದ್ದ ದಾವಣಗೆರೆ ಬಂದ್‌ಗೆ ಮಂಗಳವಾರ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಬಂದ್‌ ಹಿನ್ನೆಲೆಯಲ್ಲಿ ಕೆಲವು ಖಾಸಗಿ ಶಾಲಾ-ಕಾಲೇಜುಗಳು ರಜೆ ಘೋಷಿಸಿದ್ದರಿಂದ ಬೆಳಗ್ಗೆಯಿಂದಲೇ ವಿದ್ಯಾರ್ಥಿಗಳ ಸಂಚಾರ ಕಡಿಮೆಯಾಗಿತ್ತು. ನಗರ ಸಾರಿಗೆ ಬಸ್‌ಗಳು ಹಾಗೂ ಆಟೋಗಳ ಸಂಚಾರವೂ ವಿರಳವಾಗಿತ್ತು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

‘ಬಳ್ಳಾರಿ ಚಲೋ’ ಪಾದಯಾತ್ರೆ ಶುರು! : ಬಿಜೆಪಿ ‘ಬಳ್ಳಾರಿ ಚಲೋ’ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದು ಇಂದು ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ಪಾದಯಾತ್ರೆ ಆರಂಭವಾಗಿ, 10 ದಿನಗಳ ಕಾಲ ಸುಮಾರು 170 ಕಿಲೋಮೀಟರ್ ದೂರ ಸಾಗಲಿದೆ. ಈ ಯಾತ್ರೆಯು ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಎಂಟು ವಿಧಾನಸಭಾ ಕ್ಷೇತ್ರಗಳ ಮೂಲಕ ಸಾಗಲಿದೆ. ಲಿಂಗಸುಗೂರು, ಮಸ್ಕಿ, ಸಿಂಧನೂರು (ರಾಯಚೂರು), ಕಾರಟಗಿ, ಗಂಗಾವತಿ (ಕೊಪ್ಪಳ), ಕಂಪ್ಲಿ ಮತ್ತು ಸಂಡೂರು (ಬಳ್ಳಾರಿ) ಕ್ಷೇತ್ರಗಳಲ್ಲಿ ಪಾದಯಾತ್ರೆ ಸಾಗಿ, ನಂತರ ಬಳ್ಳಾರಿಯಲ್ಲಿ ಸಮಾವೇಶದೊಂದಿಗೆ ಮುಕ್ತಾಯಗೊಳ್ಳಲಿದೆ. ಬಿ.ನಾಗೇಂದ್ರ ರಾಜೀನಾಮೆ ನಂತರವು ಪಾದಯಾತ್ರೆ ನಡೆಸುವ ನಿರ್ಧಾರದ ಹಿಂದೆ ಸರಿಯದ ಬಿಜೆಪಿಯು ಸರ್ಕಾರದ ವೈಫಲ್ಯ, ದುರಾಡಳಿತ ಹಾಗೂ ದಲಿತ ವಿರೋಧಿ ಧೋರಣೆ ವಿರುದ್ಧ ಜನಾಂದೋಲನ ರೂಪಿಸುವ ಸಲುವಾಗಿ ಪಾದಯಾತ್ರೆ ಮಾಡಿಯೇ ತೀರುವುದಾಗಿ ಹೋರಾಟಕ್ಕೆ ಮುಂದಾಗಿದೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.