SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಕ್ಷೇತ್ರದ ಮಹಿಳೆಗೆ ಅಪಘಾತ: ಪ್ರವಾಸ ಮೊಟಕುಗೊಳಿಸಿದ ಸಚಿವ

ಕ್ಷೇತ್ರದ ಮಹಿಳೆಗೆ ಅಪಘಾತ: ಪ್ರವಾಸ ಮೊಟಕುಗೊಳಿಸಿದ ಸಚಿವ

0
10

ದಾವಣಗೆರೆ: ವರಲಕ್ಷ್ಮೀ ಹಬ್ಬ ಮುಗಿಸಿಕೊಂಡು ತವರು ಮನೆಯಿಂದ ವಾಪಸಾಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ವಾಹನ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಭಾನುವಾರ ಮಧ್ಯಾಹ್ನ ಆನಗೋಡು ಸಮೀಪದ ಆರಾಧ್ಯ ಫ್ಯಾಕ್ಟರಿ ಬಳಿ ನಡೆದಿದೆ.

ಆನಗೋಡು ಗ್ರಾಮದ ಲಕ್ಷ್ಮೀ (28) ಮೃತಪಟ್ಟ ಮಹಿಳೆ. ಅಪಘಾತದಲ್ಲಿ ಮೃತಳ ತಂದೆ ಕೃಷ್ಣಪ್ಪ (62) ಗಂಭೀರವಾಗಿ ಗಾಯಗೊಂಡಿದ್ದು, ಪುತ್ರಿ ಶರಣ್ಯ (5) ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ದಾವಣಗೆರೆಯ ಎಸ್‌.ಎಸ್‌. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರವಾಸ ಮೊಟಕುಗೊಳಿಸಿದ ಸಚಿವ: ಕ್ಷೇತ್ರದ ಮಹಿಳೆಯೊಬ್ಬರು ಅಪಘಾತದಲ್ಲಿ ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಹಿರಿಯೂರಿನ ಪ್ರವಾಸದಲ್ಲಿದ್ದ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ಅವರು ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ದಾವಣಗೆರೆಗೆ ಧಾವಿಸಿದರು.

ನಂತರ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು ಗಾಯಾಳುಗಳ ಆರೋಗ್ಯ ವಿಚಾರಿಸಿ, ವೈದ್ಯರಿಂದ ಚಿಕಿತ್ಸೆಯ ಕುರಿತು ಮಾಹಿತಿ ಪಡೆದರು. ಸುಮಾರು ಎರಡು ಗಂಟೆಗಳ ಕಾಲ ಆಸ್ಪತ್ರೆಯಲ್ಲೇ ಇದ್ದು, ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ದೊರೆಯುವಂತೆ ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಗೆ ಸೂಚನೆ ನೀಡಿದರು.

ಮೃತ ಮಹಿಳೆಯ ಕುಟುಂಬದ ಪರಿಸ್ಥಿತಿಯನ್ನು ವಿಚಾರಿಸಿದ ಸಚಿವರು, ತಕ್ಷಣವೇ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದರು. ಬಳಿಕ ಮೃತಳ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ, ದುಃಖದ ಸಂದರ್ಭದಲ್ಲಿ ಸರ್ಕಾರ ಹಾಗೂ ತಾವು ಕುಟುಂಬದೊಂದಿಗೆ ಇರುವುದಾಗಿ ಧೈರ್ಯ ತುಂಬಿದರು.

ಅಪಘಾತದ ಸುದ್ದಿ ತಿಳಿದ ತಕ್ಷಣ ತಮ್ಮ ಅಧಿಕೃತ ಪ್ರವಾಸವನ್ನು ಬದಿಗಿಟ್ಟು ಆಸ್ಪತ್ರೆಗೆ ಧಾವಿಸಿ, ಗಾಯಾಳುಗಳ ಚಿಕಿತ್ಸೆಯ ಮೇಲ್ವಿಚಾರಣೆ ನಡೆಸಿ, ಮೃತಳ ಕುಟುಂಬಕ್ಕೆ ಸಾಂತ್ವನ ಹೇಳಿದ ಸಚಿವ ಬಸವಂತಪ್ಪ ಅವರ ನಡೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.