ದಾವಣಗೆರೆ: ನಗರದ ದೇವರಾಜ ಅರಸು ಬಡಾವಣೆಯ ಈಜುಕೊಳದಲ್ಲಿ ಮುಳುಗಿ ಬಾಲಕನೊಬ್ಬ ಶನಿವಾರ ಮೃತಪಟ್ಟಿದ್ದು, ಮೃತ ಬಾಲಕನನ್ನು ರಾಜ ಭಕ್ಷಿ (15) ಎಂದು ಗುರುತಿಸಲಾಗಿದೆ.
ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಇಬ್ಬರು ಸ್ನೇಹಿತರೊಂದಿಗೆ ಬಾಲಕ ಶನಿವಾರ ಈಜುಕೊಳಕ್ಕೆ ತೆರಳಿದ್ದ. ಈ ವೇಳೆ ಸ್ನೇಹಿತರೊಂದಿಗೆ ಈಜುಕೊಳಕ್ಕೆ ಜಿಗಿದಿದ್ದಾನೆ. ಈಜು ಬಾರದೇ ನೀರಿನಲ್ಲಿ ಮುಳುಗಿದ್ದಾನೆ. ಈಜು ತಿಳಿದಿದ್ದ ಆತನ ಇಬ್ಬರು ಸ್ನೇಹಿತರು ಅಪಾಯದಿಂದ ಪಾರಾಗಿದ್ದಾರೆ.
ಈಜುಕೊಳದ ಸಿಬ್ಬಂದಿ ತಕ್ಷಣವೇ ಬಾಲಕನನ್ನು ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದಾರೆ. ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಈ ಸಂಬಂಧ ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






















