Home Advertisement
Home ನಮ್ಮ ಜಿಲ್ಲೆ ದಾವಣಗೆರೆ ದೇವಸ್ಥಾನಕ್ಕೆ ಸ್ಕೆಚ್ ಹಾಕಿದ್ದ ಗ್ಯಾಂಗ್‌: ನಿಧಿಗಳ್ಳರ ಕಾಲೆಳೆದ ವಿಧಿ!

ದೇವಸ್ಥಾನಕ್ಕೆ ಸ್ಕೆಚ್ ಹಾಕಿದ್ದ ಗ್ಯಾಂಗ್‌: ನಿಧಿಗಳ್ಳರ ಕಾಲೆಳೆದ ವಿಧಿ!

0
100

ದಾವಣಗೆರೆ: ನಿಧಿಗಾಗಿ ಗ್ರಾಮಕ್ಕೆ ಬಂದಿದ್ದ ಕಳ್ಳರನ್ನು ಗ್ರಾಮಸ್ಥರು ಸಿನಿಮೀಯ ರೀತಿ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ತಾಲೂಕಿನ ಕಾಡಜ್ಜಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.

ಕಾಡಜ್ಜಿ ಗ್ರಾಮದ ಲಿಂಗದಹಳ್ಳಿ ಬಸವರಾಜ (40) ಸೇರಿದಂತೆ ಐದು ಜನರು ಗ್ರಾಮದ ಚೌಡೇಶ್ವರಿ ದೇವಸ್ಥಾನದ ಬಳಿ ನಿಧಿ ಇದೆ ಎಂಬ ಗುಪ್ತ ಮಾಹಿತಿ ಪಡೆದ ಕಳ್ಳರ ಗುಂಪೊಂದು ಗ್ರಾಮಕ್ಕೆ ಆಗಮಿಸಿತ್ತು.

ಕಳೆದ ಏ. 22ರಂದು ರಾತ್ರಿ 12.30ರ ಸುಮಾರಿನಲ್ಲಿ ಕಳ್ಳರ ಗುಂಪು ಕೆರೆ ಏರಿ ಮೇಲೆ ಇರುವ ಚೌಡಮ್ಮ ದೇವಸ್ಥಾನ ಮುಂದೆ ಜೆಸಿಬಿ ಬಳಸಿ ಗುಂಡಿ ತೆಗೆದು ದುಷ್ಟಶಕ್ತಿಗಳ ಪೂಜೆ, ಹೋಮ ಹವನ ಮಾಡಿ ದೇವಸ್ಥಾನ ಗರ್ಭಗುಡಿಯಲ್ಲಿ ನಿಧಿ ತೆಗೆಯಲು ಪ್ರಯತ್ನಿಸಿದೆ. ಆದರೆ, ಏನೂ ಸಿಗದೇ ವಾಪಸ್ಸಾಗಿದ್ದಾರೆ.

ಇದಾದ ಬಳಿಕ ಏ. 29ರಂದು ರಾತ್ರಿ 11.30ರ ಸುಮಾರಿನಲ್ಲಿ 100 ವರ್ಷಗಳ ಹಳೆಯದಾದ ಪೇಟೆ ದುರುಗಮ್ಮ ದೇವಸ್ಥಾನದ ಬಳಿ ನಿಧಿ ತೆಗೆಯಲು ಕಳ್ಳರ ಗುಂಪು ಬಂದಿದೆ. ಇವರ ಚಲನವಲನದ ಬಗ್ಗೆ ಸಂಶಯಗೊಂಡಿದ್ದ ಗ್ರಾಮಸ್ಥರು ಕಳ್ಳರ ಗುಂಪಿನ ಮೇಲೆ ನಿಗಾ ವಹಿಸಿತ್ತು.

ರಾತ್ರಿ ಕಳ್ಳರ ಗುಂಪು ದೇವಸ್ಥಾನದ ಗರ್ಭಗುಡಿಯಲ್ಲಿ ಗುಂಡಿ ತೆಗೆದು ದುಷ್ಟ ಶಕ್ತಿಗಳ ಪೂಜೆ, ಹೋಮ, ಹವನ ಮಾಡಿ ನಿಧಿ ತೆಗೆಯಲು ಪ್ರಯತ್ನಿಸುತ್ತಿದ್ದಾಗ ಗ್ರಾಮಸ್ಥರು ಏಕಾಏಕಿ ದಾಳಿ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಕಳ್ಳರು ತಪ್ಪಿಸಿಕೊಳ್ಳಲು ಮುಂದಾದಾಗ ಗ್ರಾಮಸ್ಥರು ಬೆನ್ನಟ್ಟಿ ಒಬ್ಬ ಸ್ವಾಮೀಜಿ ಮತ್ತು ಕಾರಿನ ಚಾಲಕನನ್ನು ಹಿಡಿದಿದ್ದಾರೆ. ಬಳಿಕ ವಿಚಾರಿಸಿದಾಗ ಲಿಂಗದಹಳ್ಳಿ ಬಸವರಾಜ ಎನ್ನುವವರು ನಿಧಿ ತೆಗೆಯಲು ಕರೆಸಿದ್ದಾರೆ. ನೀವು ಬಂದಿದ್ದನ್ನು ನೋಡಿ ಉಳಿದವರು ಓಡಿ ಹೋದರು ಎಂದು ತಿಳಿಸಿದ್ದಾರೆ.

ಕೂಡಲೇ ಗ್ರಾಮಾಂತರ ಪೊಲೀಸ್ ಠಾಣೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ನಂತರ ಬಂದ ಪೊಲೀಸರಿಗೆ ನಿಧಿಗಾಗಿ ಗ್ರಾಮಕ್ಕೆ ಬಂದಿದ್ದ ಕಳ್ಳರನ್ನು ಒಪ್ಪಿಸಿದ್ದಾರೆ. ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.