SK Home Ad
Home ನಮ್ಮ ಜಿಲ್ಲೆ ಚಿತ್ರದುರ್ಗ ರಾಹುಲ್ ಗಾಂಧಿಗೆ ರಾಹುಕಾಲ ಬಂದಿದೆ: ಕಾಂಗ್ರೆಸ್ ಗೆದ್ದಾಗ ಮಾತ್ರ ಚುನಾವಣಾ ಆಯೋಗ ಸರಿಯೇ? – ಆರ್.ಅಶೋಕ್...

ರಾಹುಲ್ ಗಾಂಧಿಗೆ ರಾಹುಕಾಲ ಬಂದಿದೆ: ಕಾಂಗ್ರೆಸ್ ಗೆದ್ದಾಗ ಮಾತ್ರ ಚುನಾವಣಾ ಆಯೋಗ ಸರಿಯೇ? – ಆರ್.ಅಶೋಕ್ ಕಿಡಿ

0
6
(FIle Photo)

ಚಿತ್ರದುರ್ಗ: ನಗರದ ವಾಲ್ಮೀಕಿ ಭವನದಲ್ಲಿ ನಡೆದ ಬಿಜೆಪಿಯ ಸೇವಾ ಸಂಕಲ್ಪ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಈ ಸೇವಾ ಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ, ಮಾಜಿ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ, ಎಂಎಲ್ ಸಿ ಕೆ.ಎಸ್. ನವೀನ್ ಮತ್ತಿತರರು ಭಾಗವಹಿಸಿದ್ದರು.

ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ: ರಾಹುಲ್ ಗಾಂಧಿಗೆ ರಾಹುಕಾಲ ಬಂದಿದೆ, ಅದಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಅವರ ಪ್ರತಿಭಟನೆಗೆ ಯಾವುದೇ ಅರ್ಥವಿಲ್ಲ. ಚುನಾವಣಾ ಆಯೋಗದ ಮುಖ್ಯಸ್ಥರನ್ನು ತೆಗೆಯಲು ನಿಯಮಗಳಿವೆ. ನಾನು ಡಿ.ಕೆ. ಶಿವಕುಮಾರ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ರಸ್ತೆಯಲ್ಲಿ ಕೂಗಿದರೆ ಅವರು ಸಿಎಂ ಸ್ಥಾನದಿಂದ ಇಳಿಯುತ್ತಾರಾ? ವಿಧಾನಸಭೆಯಲ್ಲಿ ಬಹುಮತ ಸಾಬೀತಾದರೆ ಮಾತ್ರ ಇಳಿಯುತ್ತಾರೆ. ರಸ್ತೆಯಲ್ಲಿ ಕೂಗಾಟ, ಚೀರಾಟ ಉಪಯೋಗವಾಗಲ್ಲ, ಅದು ಸಂವಿಧಾನಾತ್ಮಕ ನಡೆಯಲ್ಲ ಎಂದು ಅಶೋಕ್ ಹೇಳಿದರು.

ಚುನಾವಣಾ ಆಯೋಗ ಸ್ವತಂತ್ರ ಸಂಸ್ಥೆ. ಇದನ್ನು ಹಿಂದೆ ನೆಹರು, ಇಂದಿರಾ ಗಾಂಧಿ ಅವರೆಲ್ಲ ರಚನೆ ಮಾಡಿದ್ದು. ಹಿಂದೆ ರಾಹುಲ್ ಗಾಂಧಿಗೆ ನಯಾಪೈಸೆ ಬೆಲೆ ಇರಲಿಲ್ಲ, ಈಗ ಕಾಂಗ್ರೆಸ್ ಪಾರ್ಟಿ ಮೇಲೆ ಸವಾರಿ ಮಾಡಿದರೆ ರೀಚ್ ಆಗುವ ಹಂಬಲ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಾಗ ಚುನಾವಣೆ ಸರಿಯಿತ್ತಾ? ಸರಿಯಿಲ್ಲದಿದ್ದರೆ ರಾಜೀನಾಮೆ ಕೊಡಿ, ಮತ್ತೆ ಚುನಾವಣೆಗೆ ಹೋಗೋಣ ಎಂದು ಸವಾಲು ಹಾಕಿದರು.

ತೆಲಂಗಾಣ, ಕೇರಳದಲ್ಲಿ SIR ಆದ ಬಳಿಕ ಚುನಾವಣೆ ನಡೆದಿದೆ. ಕೇರಳದಲ್ಲಿ ಬಿಜೆಪಿ ಬಹುಮತ ಪಡೆದಿಲ್ಲ. ಅಕ್ರಮ ಮಾಡುವಂತಿದ್ದರೆ ಬಿಜೆಪಿ ಬಹುಮತ ಗಳಿಸಬಹುದಿತ್ತು. ಕಾಂಗ್ರೆಸ್ ಗೆದ್ದಾಗ ಚುನಾವಣಾ ಆಯೋಗ ಭರ್ಜರಿ, ಸೋತಾಗ ಸರಿಯಿಲ್ಲ ಎನ್ನುತ್ತಾರೆ. ಇದು ರಾಹುಲ್ ಗಾಂಧಿಯ ರಾಹುಕಾಲದ ಕಥೆ. ಅವರು ವಿಪಕ್ಷ ನಾಯಕನಾಗಲು ಯೋಗ್ಯರಲ್ಲ. ಇಡಿ, ಸಿಬಿಐ, ಚುನಾವಣಾ ಆಯೋಗ ಬಿಜೆಪಿ ಅಂತೀರಿ, ಕೆಪಿಎಸ್ ಸಿ ಬಗ್ಗೆ ಹೈಕೋರ್ಟ್ ತೀರ್ಪು ಸರಿಯಿಲ್ಲ ಅಂದಿರಿ, ತ್ರಿವಳಿ ತಲಾಖ್ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಸರಿಯಿಲ್ಲ ಅಂದಿರಿ ಎಂದು ಕಿಡಿಕಾರಿದರು.

ಡಿಕೆಶಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ: ಸಿಎಂ ಡಿ.ಕೆ. ಶಿವಕುಮಾರ್ ಗೆ ಪಿತ್ತ ನೆತ್ತಿಗೇರಿದೆ. ಸ್ವಾಮೀಜಿಗಳು ನನ್ನ ಸೇವೆ ಮಾಡಬೇಕು ಎಂದು ಸಿಎಂ ಹೇಳಿದ್ದಾರೆ. ಇದು ಮಾಧ್ಯಮಗಳಲ್ಲಿ ರಾ ವಿಡಿಯೋ ಸಮೇತ ವರದಿಯಾಗಿದೆ. ಪ್ರಿಂಟ್ ಮೀಡಿಯಾ ಆಗಿದ್ದರೆ ತಿರುಚಿದ್ದಾರೆ ಅನ್ನಬಹುದು, ವಿಡಿಯೋದಲ್ಲಿ ನೀನೇ ಹೇಳಿದ್ದೀಯಾ ಮಿಸ್ಟರ್ ಡಿಕೆ ಶಿವಕುಮಾರ್ ಎಂದು ಆರ್. ಅಶೋಕ್ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಇದು ಶಿಲಾಯುಗ ಅಲ್ಲ, ಮಾಡರ್ನ್ ಯುಗ. ತಿರುಚೋದು, ಗಿರುಚೋದು ಏನೂ ಆಗಲ್ಲ. ನಿನಗೆ ಮಾನ ಮರ್ಯಾದೆ ಇದ್ದರೆ ಸ್ವಾಮೀಜಿಗಳನ್ನು ನಿಲ್ಲಿಸಿ ಕ್ಷಮೆ ಕೇಳು. ಮಿಸ್ಟರ್ ಡಿಕೆಶಿ, ಯಾವುದಾದರೂ ಮುಲ್ಲಾ ಸಭೆಯಲ್ಲಿ ಮುಲ್ಲಾಗಳು ನನ್ನ ಸೇವೆ ಮಾಡಿ ಎಂದು ಹೇಳುವ ಧೈರ್ಯ ನಿನಗಿದೆಯಾ? ಹಿಂದೂಗಳನ್ನು ಕಂಡರೆ ನಿನಗೆ ಆಗಲ್ಲ. ವಿಭೂತಿ, ನಾಮ ಹಾಕಿಕೊಂಡರೆ ನೀನು ಹಿಂದೂ ಆಗಲ್ಲ. ಇನ್ನಾದರೂ ಬುದ್ಧಿ ಕಲಿತು ರಾಜ್ಯದ ಜನರು, ಶ್ರೀಗಳ ಎದುರು ಕ್ಷಮೆ ಕೇಳಿ ಎಂದರು.

ಇಷ್ಟು ದಿನ ಸಿದ್ದರಾಮಯ್ಯ ಅವರನ್ನು ಒದ್ದು ಆಚೆ ಹಾಕಿದಿರಿ, ಈಗ ಮಾಧ್ಯಮದವರ ಮೇಲೆ ಬಿದ್ದಿದ್ದೀರಾ. ಮಠಗಳು ಲಕ್ಷಾಂತರ ವಿದ್ಯಾಸಂಸ್ಥೆಗಳನ್ನು ಕಟ್ಟಿ ಸೇವೆ ಮಾಡುತ್ತಿವೆ, ಹಿಂದೂ ಧರ್ಮದ ಪಾವಿತ್ರ್ಯತೆಯೇ ಮಠಗಳು.

2028ಕ್ಕೆ ಎನ್ ಡಿಎ ಸರ್ಕಾರ ಬರೋದು ಸತ್ಯ, ಸೂರ್ಯ, ಚಂದ್ರ ಹುಟ್ಟುವಷ್ಟೇ ಸತ್ಯ. ನೂರು ಡಿಕೆಶಿಗಳು ಬಂದರೂ ತಪ್ಪಿಸಲು ಆಗಲ್ಲ, ಸಿಎಂ ಯಾರಾಗಬೇಕೆಂದು ಎನ್ ಡಿಎ ನಾಯಕತ್ವ ತೀರ್ಮಾನಿಸಲಿದೆ ಎಂದು ಅಶೋಕ್ ಹೇಳಿದರು.