SK Home Ad
Home ನಮ್ಮ ಜಿಲ್ಲೆ ಚಿತ್ರದುರ್ಗ ‘ಬಸವ ಮಂಟಪ’ ಕೃತಿ ವಿಕಾರ ಮನಸ್ಥಿತಿಯ ಪ್ರತಿಬಿಂಬ

‘ಬಸವ ಮಂಟಪ’ ಕೃತಿ ವಿಕಾರ ಮನಸ್ಥಿತಿಯ ಪ್ರತಿಬಿಂಬ

0
5

ಚಿತ್ರದುರ್ಗ: ಬಸವ ಮಂಟಪ ಕೃತಿ ವಿವಾದಕ್ಕೆ ಸಂಬಂಧಿಸಿದಂತೆ ಸಾಣೇಹಳ್ಳಿ ತರಳಬಾಳು ಮಠದ ಡಾ. ಪಂಡಿತಾರಾಧ್ಯ ಶ್ರೀಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸವಣ್ಣನವರ ವ್ಯಕ್ತಿತ್ವವನ್ನು ಮಸುಕುಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.

ಬಸವಣ್ಣನವರು ಕೇವಲ ಒಬ್ಬ ವ್ಯಕ್ತಿಯಲ್ಲ. ಅವರು ಲಿಂಗಾಯತ ಧರ್ಮದ ಸಂಸ್ಥಾಪಕರು, ಭಕ್ತಿ ಭಂಡಾರಿ, ಕರ್ನಾಟಕದ ಸಾಂಸ್ಕೃತಿಕ ನಾಯಕ. ಅಂತಹ ಮಹಾನ್ ಚೇತನದ ಬಗ್ಗೆ ತೇಜೋವಧೆ ಮಾಡಲು ಹೊರಟಿರುವ ಸ್ವಯಂಘೋಷಿತ ಸಂಶೋಧಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ದುರದೃಷ್ಟಕರ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.

ಈ ತೇಜೋವಧೆ ಪರಂಪರೆಯಲ್ಲಿ ರವಿ ಹಂಜ್ ಹಾಗೂ ಅವರಿಗೆ ಬೆಂಬಲವಾಗಿ ನಿಂತಿರುವರು ಮೊದಲಿಗರು ಎಂದು ಶ್ರೀಗಳು ನೇರವಾಗಿ ಆರೋಪಿಸಿದರು. 2020ರಿಂದಲೇ ಈ ರೀತಿಯ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದರು.

12ನೇ ಶತಮಾನದಲ್ಲಿ ಕೊಂಡಿ ಮಂಚಣ್ಣ, ನಾರಾಯಣ ಪಂಡಿತರಂತಹ ಪಟ್ಟಭದ್ರ ಹಿತಾಸಕ್ತಿಗಳು ಬಸವ ಚಳವಳಿಯನ್ನು ಹತ್ತಿಕ್ಕಲು ಮುಂದಾಗಿದ್ದರು. ಆ ಮನಸ್ಥಿತಿಯೇ ಇಂದಿಗೂ ಬೇರೆ ರೂಪದಲ್ಲಿ ಮುಂದುವರೆದಿದೆ ಎಂದು ಶ್ರೀಗಳು ವಿಶ್ಲೇಷಿಸಿದರು.

2023ರ ನವೆಂಬರ್ 2ರಂದು ನಡೆದ ನಾಟಕೋತ್ಸವದಲ್ಲಿ ಲಿಂಗಾಯತ ಧರ್ಮ ಗಣಪತಿ ಪೂಜೆ ಮಾಡುವುದಲ್ಲ ಎಂದು ತಾವು ಹೇಳಿದ್ದಕ್ಕೆ ಒಂದು ಪತ್ರಿಕೆಯಲ್ಲಿ ಲೇಖನ ಬರೆಸಿ ತಮ್ಮನ್ನು ಲೇವಡಿ ಮಾಡಲಾಗಿತ್ತು ಎಂದು ಆರೋಪಿಸಿದರು. ಅದೇ ಕೆಲಸವನ್ನು ಈಗ ಹಂಜ್ ಮುಂದುವರೆಸಿದ್ದಾರೆ ಎಂದರು.

ಬಸವ ಮಂಟಪದಲ್ಲಿನ ಬರಹಗಳು ಸಂಶೋಧನಾ ಲೇಖನಗಳಲ್ಲ, ಅವು ಮನಸಿನಲ್ಲಿರುವ ದುರ್ಭಾವನೆಯ ಪ್ರತಿಫಲನ ಎಂದು ಶ್ರೀಗಳು ಟೀಕಿಸಿದರು. ಬಸವಣ್ಣನವರ ತೇಜೋವಧೆಗಾಗಿಯೇ ಆ ಅಂಕಣಗಳನ್ನು ಬರೆಯಲಾಗಿದೆ. ಅದೇ ಬರಹಗಳನ್ನು ಈಗ ಪುಸ್ತಕ ರೂಪದಲ್ಲಿ ಹೊರತರಲಾಗಿದೆ. ಪುಸ್ತಕದುದ್ದಕ್ಕೂ ಲಿಂಗಾಯತ ಧರ್ಮದ ಬಗ್ಗೆ ಅವಹೇಳನ ಮಾಡಲಾಗಿದೆ ಎಂದು ಅವರು ಹೇಳಿದರು.

ಹಿರಿಯ ಸಂಶೋಧಕ ಎಂ.ಎಂ. ಕಲಬುರ್ಗಿ ಅವರ ಸಂಶೋಧನೆಯನ್ನು ಈ ಕೃತಿಯಲ್ಲಿ ತಿರಸ್ಕರಿಸಲಾಗಿದೆ. ಬಸವಣ್ಣನವರ ಅನುಯಾಯಿಗಳನ್ನು ತಾಲಿಬಾನಿಗಳಿಗೆ ಹೋಲಿಸಲಾಗಿದೆ. ಲಿಂಗಾಯತರನ್ನು ಲಿಂಗಾಹತರು ಎಂದು ವ್ಯಂಗ್ಯವಾಡಲಾಗಿದೆ. ಕಳಬೇಡ, ಕೊಲಬೇಡ ಎಂಬ ವಚನವನ್ನು ಎತ್ತಿಕೊಂಡು ತಪ್ಪಾಗಿ ಅರ್ಥೈಸಲಾಗಿದೆ. ವಚನಕ್ಕೂ ಬದುಕಿಗೂ ಸಂಬಂಧವಿಲ್ಲ ಎಂಬಂತೆ ಅಪಪ್ರಚಾರ ಮಾಡಲಾಗಿದೆ. ಶರಣರ ವಚನಗಳಲ್ಲಿ ದ್ವಂದ್ವಾರ್ಥ ಇದೆ ಎಂದು ತುಚ್ಛವಾಗಿ ಮಾತನಾಡಲಾಗಿದೆ. ಒಟ್ಟಾರೆ ಇಡೀ ಪುಸ್ತಕದಲ್ಲಿ ವಿಕಾರ ಮನಸ್ಥಿತಿಯನ್ನೇ ಹೊರಹಾಕಲಾಗಿದೆ ಎಂದು ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದರು.

ಬಸವಣ್ಣ ಕಾಲ್ಪನಿಕ ವ್ಯಕ್ತಿ, ಪೌರಾಣಿಕ ವ್ಯಕ್ತಿ ಎಂಬ ಆಪಾದನೆಯನ್ನೂ ಕೃತಿಯಲ್ಲಿ ಮಾಡಲಾಗಿದೆ. ಇದು ಲಿಂಗಾಯತ ಧರ್ಮೀಯರನ್ನು ಅವಹೇಳನ ಮಾಡುವ ಅತ್ಯಂತ ನಿಕೃಷ್ಟ ಕೃತಿ ಎಂದು ಶ್ರೀಗಳು ಖಂಡಿಸಿದರು.

ತಮ್ಮ ಬಗ್ಗೆಯೂ ಆ ಕೃತಿಯಲ್ಲಿ ಅವಹೇಳನಕಾರಿಯಾಗಿ ಬರೆಯಲಾಗಿದೆ ಎಂದು ಹೇಳಿದ ಶ್ರೀಗಳು, ನಾವೇನು ಎಂಬುದು ನಮ್ಮ ಪರಿಸರದ ಜನರಿಗೆ ಚೆನ್ನಾಗಿ ಗೊತ್ತು. ಅಮೆರಿಕದಲ್ಲಿ ಕುಳಿತು ಬಸವಣ್ಣನವರ ಬಗ್ಗೆ ಸಂಶೋಧನೆ ಮಾಡುತ್ತೇನೆ ಎನ್ನುವುದು ಸರಿಯಲ್ಲ. ನಮ್ಮ ಬಗ್ಗೆ ಬರೆಯುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಎಚ್ಚರಿಕೆ ನೀಡಿದರು.

ಈಗಾಗಲೇ ಹಲವೆಡೆ ಬಸವ ಮಂಟಪ ಕೃತಿಯನ್ನು ಸುಟ್ಟು ಹಾಕಲಾಗಿದೆ. ರಾಜ್ಯ ಸರ್ಕಾರ ಕೃತಿಯನ್ನು ಮುಟ್ಟುಗೋಲು ಹಾಕಿದೆ. ಆದರೆ ಅಷ್ಟಕ್ಕೇ ಮುಗಿಯುವುದಿಲ್ಲ. ಲೇಖಕ ಹಾಗೂ ಪ್ರಕಾಶಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ತಾವು ದೊಡ್ಡವರಾಗಲು ದೊಡ್ಡವರ ತೇಜೋವಧೆ ಮಾಡುವವರಿಗೆ ಸರಿಯಾದ ಪಾಠ ಕಲಿಸಬೇಕು. ಕೃತಿಯನ್ನು ಸಂಪೂರ್ಣವಾಗಿ ನಿಷೇಧ ಮಾಡುವುದು ಸರ್ಕಾರದ ಹೊಣೆ ಎಂದು ಶ್ರೀಗಳು ಒತ್ತಾಯಿಸಿದರು.