SK Home Ad
Home ನಮ್ಮ ಜಿಲ್ಲೆ ವಿಜಯಪುರ ಭೀಮಾತೀರದ ಕೊಲೆ ಪ್ರಕರಣ: 12 ಜನರ ಮೇಲೆ FIR

ಭೀಮಾತೀರದ ಕೊಲೆ ಪ್ರಕರಣ: 12 ಜನರ ಮೇಲೆ FIR

0
24

ವಿಜಯಪುರ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದ ಆರು ಜನರ ಕೊಲೆ ಪ್ರಕರಣದಲ್ಲಿ ಪೊಲೀಸರು 12 ಜನರ ವಿರುದ್ಧ ಎಫ್‌ಐರ್ ದಾಖಲಿಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.

ಚೈತನ್ಯಕುಮಾರ ನಿರಾಳೆ ಎಂಬುವರ ನೀಡಿದ ದೂರಿನ ಅನ್ವಯ ಗೋವಿಂದಪುರದ ಕಲ್ಲನಗೌಡ ಪಾಟೀಲ, ಅಪ್ಪುಗೌಡ ಪಾಟೀಲ, ಈಶ್ವರಪ್ಪ ಪಾಟೀಲ, ಪ್ರಕಾಶ ಪಾಟೀಲ, ಪ್ರಶಾಂತ ಊರ್ಫ್ ಪರುಗೌಡ ಪಾಟೀಲ, ಸಿದ್ದರಾಮ ಪಾಟೀಲ, ಲಾಯಪ್ಪ ಬಿರಾದಾರ, ಚಿದಾನಂದಗೌಡ ಕೋಲಿ ಊರ್ಫ್ ಟಕ್ಕಲಕಿ, ಮಾಸಿದ್ದ ಶ್ರೀಮಂತ ಬಿರಾದಾರ, ಶ್ರೀಮಂತ ಬಿರಾದಾರ, ಶಂಕರಪ್ಪ ಅರಕೇರಿ, ಅಪ್ಪಾಸಾಹೇಬ ಭೋವಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಜಮೀನು ವಿವಾದವೇ ಮೂಲ ಕಾರಣ: ಘಟನೆಗೆ ಜಮೀನಿನ ವಿವಾದವೇ ಕಾರಣ ಎಂದು ತಿಳಿಸಲಾಗಿದೆ. ಗೋವಿಂದಪುರದಲ್ಲಿ ನಿವರಗಿ ಗ್ರಾಮದ ಖ್ಯಾಮನಿಂಗ ತೇಲಿ ಕುಟುಂಬಕ್ಕೆ ಸೇರಿದ ಜಮೀನಿತ್ತು. ಸುಮಾರು 5-6 ತಿಂಗಳ ಹಿಂದೆ ತೇಲಿ ಕುಟುಂಬ ನಿರಾಳೆ ಅವರ ಮನೆಗೆ ಬಂದು ಗೋವಿಂದಪುರದಲ್ಲಿನ ತಮ್ಮ ಜಮೀನು ಕೊಲೆ ಪ್ರಕರಣವೊಂದರ ಹಿನ್ನೆಲೆ ಪಾಳುಬಿದ್ದಿದೆ. ಕಲ್ಲನಗೌಡ ಈಶ್ವರಗೌಡ ಪಾಟೀಲ ಹಾಗೂ ಅವರ ಕುಟುಂಬಸ್ಥರು ಉಳಮೆಗೆ ತಕರಾರು ಮಾಡುತ್ತಿದ್ದು, ತಾವು ಜಮೀನು ತೆಗೆದುಕೊಳ್ಳುವುದಿದ್ದರೆ ಖರೀದಿ ಹಾಕಿಕೊಡುವುದಾಗಿ ತಿಳಿಸಿದ್ದರಂತೆ. ಅದಕ್ಕೆ ಒಪ್ಪಿಕೊಂಡಿದ್ದ ನಿರಾಳೆ ಕುಟುಂಬ ಮೊದಲು ಕಲ್ಲನಗೌಡರಿಗೂ ತಿಳಿಸಿ ಜಮೀನು ಖರೀದಿಸಿತ್ತು.

ಇತ್ತೀಚಿಗೆ ಜಮೀನಿನಲ್ಲಿ ಬೆಳೆದಿರುವ ಮುಳ್ಳು ಕಂಟಿ ತೆಗೆದು ಸ್ವಚ್ಛಗೊಳಿಸಲು ಹೋದಾಗ ಕಲ್ಲನಗೌಡ ಪಾಟೀಲ ಹಾಗೂ ಕುಟುಂಬಸ್ಥರು ಅಡ್ಡಿಪಡಿಸಿದರು. ಈ ಬಗ್ಗೆ ತಹಶೀಲ್ದಾರ್ ಕೋರ್ಟ್‌ನಲ್ಲಿಯೂ ದಾವೆ ಹೂಡಲಾಗಿ ನಿರಾಳೆ ಕುಟುಂಬದ ಪರವಾಗಿಯೇ ನ್ಯಾಯ ಸಿಕ್ಕಿತ್ತು. ಹೀಗಾಗಿ ಜಮೀನಿನಲ್ಲಿ ಕೆಲಸ ಮಾಡುತ್ತಿರಬೇಕಾದರೆ ಅಲ್ಲಿಗೆ ಬಂದ ಆರೋಪಿತರು ಖಾರದ ಪುಡಿ ಕಣ್ಣಿಗೆ ಎರಚಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

ನಿರಾಳ ಕುಟುಂಬ ಖರೀದಿಸಿದ್ದ ಜಮೀನಿನ ಹಿಂದಿನ ಹಕೀಕತ್ ಕೂಡ ರೋಚಕವಾಗಿದೆ. ತೇಲಿ ಕುಟುಂಬ ಯುವತಿಯನ್ನು ಕಲ್ಲನಗೌಡ ಪಾಟೀಲರ ಪುತ್ರ ಕರೆದುಕೊಂಡು ಹೋಗಿ ಮದುವೆಯಾಗಿದ್ದನು. ಈ ಸಿಟ್ಟಿನಿಂದ ತೇಲಿ ಕುಟುಂಬಸ್ಥರು ಆತನನ್ನು ಟ್ರ್ಯಾಕ್ಟರ್ ಹಾಯಿಸಿ ಸಾಯಿಸಿದ್ದರಂತೆ. ಈ ಪ್ರಕರಣದಲ್ಲಿ ಇವರು ಜೈಲಿಗೂ ಹೋಗಿ ಬಂದಿದ್ದರು. ಅಲ್ಲಿಯವರೆಗೂ ಆ ಜಮೀನು ಪಾಳು ಬಿದ್ದಿತ್ತು. ಹೀಗಾಗಿ ಆ ಜಮೀನು ಮಾರಾಟ ಮಾಡಲು ಮುಂದಾದಾಗ ನಿರಾಳೆ ಕುಟುಂಬ ಖರೀದಿಸಿತ್ತು ಎನ್ನಲಾಗಿದೆ.