Home Advertisement
Home ನಮ್ಮ ಜಿಲ್ಲೆ ವಿಜಯಪುರ BJPಗೆ ಗುಡ್ ಬೈ ಹೇಳಿದ ಸ್ಥಳೀಯ ನಾಯಕರು: ಕಾಂಗ್ರೆಸ್‌ಗೆ ಸೇರ್ಪಡೆ

BJPಗೆ ಗುಡ್ ಬೈ ಹೇಳಿದ ಸ್ಥಳೀಯ ನಾಯಕರು: ಕಾಂಗ್ರೆಸ್‌ಗೆ ಸೇರ್ಪಡೆ

0
119

ಗ್ಯಾರಂಟಿ ಯೋಜನೆಗಳಿಗೆ ಮನಸೋತು ಕಾಂಗ್ರೆಸ್ ಸೇರಿದ ಬಿಜೆಪಿ ಕಾರ್ಯಕರ್ತರು

ವಿಜಯಪುರ: ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಳ್ಳುತ್ತಿರುವ ನಡುವೆ, ಬಿಜೆಪಿಯ ಹಲವು ಮುಖಂಡರು ಮತ್ತು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಸ್ಥಳೀಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಸಚಿವ ಎಂ.ಬಿ. ಪಾಟೀಲ್ ಅವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಶಾಲು ಧರಿಸಿ ಅಧಿಕೃತವಾಗಿ ಸೇರ್ಪಡೆಯಾದರು.

ಸಚಿವ ಎಂ.ಬಿ. ಪಾಟೀಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, “ನುಡಿದಂತೆ ನಡೆಯುವ ನಮ್ಮ ಗ್ಯಾರಂಟಿ ಸರ್ಕಾರದ ಜನಪರ ಆಡಳಿತಕ್ಕೆ ಮನಸೋತು ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರಿದ್ದಾರೆ. ಇವರ ಆಗಮನದಿಂದ ಬಬಲೇಶ್ವರದಲ್ಲಿ ಕಾಂಗ್ರೆಸ್ ಇನ್ನಷ್ಟು ಬಲಿಷ್ಠವಾಗಿದೆ” ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಸುರೇಶ್ ತೊರವಿ, ಎಚ್.ಎಲ್. ತಳವಾರ್, ಪರಸು ಕೋಳಿ ಗಣಪತಿ ತೊರವಿ, ಅಪ್ಪಸಾಹೇಬ್ ಡ್ಯಾಬೇರಿ, ದಯಾನಂದ ಶಿರಹಟ್ಟಿ, ಪ್ರಕಾಶ್ ಹಾಲಳ್ಳಿ, ಭೀಮು ಹಾಲಳ್ಳಿ, ರಮೇಶ್ ಗುಡದಿನ್ನಿ, ವಿಲಾಸ ಮಾಳಿ, ನಾಗಪ್ಪ ಮಾಳಿ ಸೇರಿದಂತೆ ಹಲವು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಮಹಿಳಾ ಕಾರ್ಯಕರ್ತರಾದ ಶಾಂತಾಭಾಯಿ ತಳವಾರ, ಗೀತಾ ತೊರವಿ, ಪುಷ್ಪಾ ತೊರವಿ, ಮಂಗಲಾ ತಳವಾರ ಮತ್ತು ಮನಿಷಾ ತಳವಾರ ಕೂಡ ಪಕ್ಷ ಸೇರ್ಪಡೆಗೊಂಡಿರುವುದು ಗಮನಾರ್ಹವಾಗಿದೆ.

ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ಪರಿಣಾಮದಿಂದಲೇ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದೆಡೆ, ಮುಂಬರುವ ಸ್ಥಳೀಯ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ತನ್ನ ಸಂಘಟನೆಯನ್ನು ಬಲಪಡಿಸುವ ಕಾರ್ಯಕ್ಕೆ ವೇಗ ನೀಡಿದೆ ಎನ್ನಲಾಗಿದೆ.

ಬಬಲೇಶ್ವರ ಕ್ಷೇತ್ರದಲ್ಲಿ ಈ ಸೇರ್ಪಡೆ ಕಾಂಗ್ರೆಸ್‌ಗೆ ರಾಜಕೀಯ ಬಲ ನೀಡುವ ಸಾಧ್ಯತೆ ಇದ್ದು, ಬಿಜೆಪಿಗೆ ಇದು ಹಿನ್ನಡೆಯಾಗಬಹುದು ಎಂಬ ವಿಶ್ಲೇಷಣೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ತನ್ನ ಹಿಡಿತವನ್ನು ಗಟ್ಟಿಗೊಳಿಸಲು ಪ್ರಯತ್ನಿಸುತ್ತಿರುವ ಸಮಯದಲ್ಲಿ ನಡೆದಿರುವ ಈ ಬೆಳವಣಿಗೆ ಗಮನ ಸೆಳೆಯುತ್ತಿದೆ.

ಸಚಿವ ಎಂ.ಬಿ. ಪಾಟೀಲ್ ಅವರು ಹೊಸದಾಗಿ ಸೇರ್ಪಡೆಯಾದ ಮುಖಂಡರನ್ನು ಆತ್ಮೀಯವಾಗಿ ಸ್ವಾಗತಿಸಿ, ಪಕ್ಷ ಸಂಘಟನೆ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.