ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕನ ಆಯ್ಕೆ ಪ್ರಕ್ರಿಯೆ ಸುಸೂತ್ರವಾಗಿ ಮುಕ್ತಾಯಗೊಂಡಿದೆ. ಇಂದು ನಡೆದ ಮಹತ್ವದ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಮುಂದಿನ ಎರಡು ವರ್ಷಗಳ ಅವಧಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಉಸ್ತುವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹುಬೇಗನೆ ನಿರ್ಣಯ ಮಂಡಿಸಿದರು. “ನಮ್ಮ ಶಾಸಕಾಂಗ ಪಕ್ಷದ ನಾಯಕ ಡಿ.ಕೆ. ಶಿವಕುಮಾರ್” ಎಂದು ಕೇವಲ ಒಂದೇ ಸಾಲಿನಲ್ಲಿ ಸಿದ್ದರಾಮಯ್ಯ ಪ್ರಸ್ತಾಪಿಸಿದ ನಿರ್ಣಯಕ್ಕೆ ಹಿರಿಯ ನಾಯಕ ಡಾ. ಜಿ. ಪರಮೇಶ್ವರ್ ಔಪಚಾರಿಕವಾಗಿ ಅನುಮೋದನೆ ನೀಡಿದರು. ಸಭೆಯಲ್ಲಿದ್ದ ಉಳಿದ ಎಲ್ಲಾ ಶಾಸಕರು ಇದಕ್ಕೆ ಒಮ್ಮತದ ಒಪ್ಪಿಗೆ ಸೂಚಿಸುವ ಮೂಲಕ ಡಿಕೆಶಿ ನಾಯಕರಾಗಿ ಅಧಿಕೃತವಾಗಿ ಆಯ್ಕೆಯಾದರು.
ಸಿಎಂ ಪ್ರಮಾಣ ವಚನಕ್ಕೆ ಮುಹೂರ್ತ ಫಿಕ್ಸ್: CLP ನಾಯಕರಾಗಿ ಆಯ್ಕೆಯಾಗಿರುವ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ದಿನಾಂಕ ಮತ್ತು ಸಮಯ ನಿಗದಿಯಾಗಿದೆ. ಬರುವ ಜೂನ್ 3, ಬುಧವಾರ ಸಂಜೆ 4:05 ಕ್ಕೆ ಬೆಂಗಳೂರಿನ ಲೋಕಭವನದ ಗಾಜಿನ ಮನೆಯಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜನೆಯಾಗಿದ್ದು, ರಾಜಭವನದಿಂದ ಅಧಿಕೃತ ಮುಹೂರ್ತ ನಿಶ್ಚಿತವಾಗಿದೆ.
ನುಡಿದಂತೆ ನಡೆದಿದ್ದೇನೆ’ : ಶಾಸಕಾಂಗ ಸಭೆಯಲ್ಲಿ ಮಾತನಾಡಿದ ಉಸ್ತುವಾರಿ ಸಿಎಂ ಸಿದ್ದರಾಮಯ್ಯ ತಮ್ಮ ಸರ್ಕಾರದ ಆಡಳಿತದ ದಿನಗಳನ್ನು ಸ್ಮರಿಸಿದರು. “ರಾಜ್ಯದಲ್ಲಿ ಪ್ರಮುಖ 5 ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವ ಮೂಲಕ ನಾವು1ನುಡಿದಂತೆ ನಡೆದಿದ್ದೇವೆ’. ಜನರಿಗೆ ಉತ್ತಮ ಆಡಳಿತ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ” ಎಂದು ತಿಳಿಸುತ್ತಾ ತಮ್ಮ ಅವಧಿಯ ಸಾಧನೆಗಳನ್ನು ಶಾಸಕರ ಮುಂದೆ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆ.ಸಿ. ವೇಣುಗೋಪಾಲ್ ಸ್ಪಷ್ಟನೆ: ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅಧಿಕೃತ ಮಾಹಿತಿ ಹಂಚಿಕೊಂಡರು. ಡಿ.ಕೆ.ಶಿಯವರನ್ನ ಶಾಸಕರೆಲ್ಲರೂ ಸರ್ವಾನುಮತದಿಂದ ಆರಿಸಿದ್ದಾರೆ. ಸಿದ್ದರಾಮಯ್ಯ ಪ್ರಸ್ತಾಪ ಮತ್ತು ಪರಮೇಶ್ವರ್ ಅನುಮೋದನೆಯೊಂದಿಗೆ ಈ ಪ್ರಕ್ರಿಯೆ ಪ್ರಜಾಪ್ರಭುತ್ವದ ಮಾದರಿಯಲ್ಲಿ ಸೌಹಾರ್ದಯುತವಾಗಿ ನಡೆದಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರು.





















