SK Home Ad
Home ನಮ್ಮ ಜಿಲ್ಲೆ ಬೆಂಗಳೂರು ಹೈಕೋರ್ಟ್ ಮಹತ್ವದ ಆದೇಶ: ರಾಹುಲ್ ವಿರುದ್ಧ ದ್ವಿಪೌರತ್ವ ಸಮರ ಸಾರಿದ ವಿಘ್ನೇಶ್ ಶಿಶಿರ್ ಬಗ್ಗೆ ಇಲ್ಲಿದೆ...

ಹೈಕೋರ್ಟ್ ಮಹತ್ವದ ಆದೇಶ: ರಾಹುಲ್ ವಿರುದ್ಧ ದ್ವಿಪೌರತ್ವ ಸಮರ ಸಾರಿದ ವಿಘ್ನೇಶ್ ಶಿಶಿರ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

0
237

ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ದ್ವಿಪೌರತ್ವ ವಿವಾದವು ಈಗ ರಾಷ್ಟ್ರಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ಪ್ರಕರಣದ ಬೆನ್ನತ್ತಿರುವ ಕರ್ನಾಟಕ ಮೂಲದ ವಿಘ್ನೇಶ್ ಶಿಶಿರ್ ಹೆಸರು ಮುನ್ನೆಲೆಗೆ ಬಂದಿದ್ದು, ಜೀವ ಬೆದರಿಕೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು Z+ ಭದ್ರತೆಗಾಗಿ ಮನವಿ ಮಾಡಿದ್ದಾರೆ.

ವಿಘ್ನೇಶ್ ಶಿಶಿರ್ ಕರ್ನಾಟಕ ಮೂಲದ ಬಿಜೆಪಿ ಕಾರ್ಯಕರ್ತ ಹಾಗೂ ರಾಹುಲ್ ಗಾಂಧಿ ವಿರುದ್ಧದ ‘ಬ್ರಿಟಿಷ್ ಪೌರತ್ವ’ ಪ್ರಕರಣದ ಮುಖ್ಯ ಅರ್ಜಿದಾರ. ರಾಹುಲ್ ಗಾಂಧಿ ಭಾರತದ ಪ್ರಜೆಯಾಗಿರುವ ಜೊತೆಗೆ ಬ್ರಿಟಿಷ್ ಪೌರತ್ವವನ್ನೂ ಹೊಂದಿದ್ದಾರೆ ಮತ್ತು ಲಂಡನ್ ಮೂಲದ ಕಂಪನಿಯೊಂದರಲ್ಲಿ ನಿರ್ದೇಶಕರಾಗಿದ್ದರು ಎಂದು ಶಿಶಿರ್ ನ್ಯಾಯಾಲಯಕ್ಕೆ ಸಾಕ್ಷ್ಯಗಳನ್ನು ಒದಗಿಸಿದ್ದಾರೆ. ಹಾಗೇ ದೂರಿನ ಆಧಾರದ ಮೇಲೆ ಕೇಂದ್ರ ಗೃಹ ಸಚಿವಾಲಯ ಹಾಗೂ ಜಾರಿ ನಿರ್ದೇಶನಾಲಯ (ED) ಈಗಾಗಲೇ ಇವರಿಂದ ಮಾಹಿತಿ ಪಡೆದುಕೊಂಡಿವೆ.

ಇತ್ತೀಚೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ರಾಹುಲ್ ಗಾಂಧಿ ದ್ವಿಪೌರತ್ವ ಆರೋಪದ ಕುರಿತು ಎಫ್‌ಐಆರ್ ದಾಖಲಿಸುವಂತೆ ರಾಯ್‌ಬರೇಲಿ ಪೊಲೀಸರಿಗೆ ಸೂಚನೆ ನೀಡಿದೆ. ಅಲ್ಲದೆ ರಾಹುಲ್ ಗಾಂಧಿ ಪೌರತ್ವದ ಸ್ಥಿತಿಗತಿಯ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಕೇಂದ್ರ ಸರ್ಕಾರಕ್ಕೂ ನ್ಯಾಯಾಲಯ ನಿರ್ದೇಶನ ನೀಡಿದೆ. ಈ ಬೆಳವಣಿಗೆಯು ಕಾಂಗ್ರೆಸ್ ಸಂಸದರಿಗೆ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಹೈಕೋರ್ಟ್ ಆದೇಶದ ಬೆನ್ನಲ್ಲೇ ವಿಘ್ನೇಶ್ ಶಿಶಿರ್ ತಮಗೆ ಗಂಭೀರ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಮನವಿ ಮಾಡಿರುವ, “ಕಳೆದ 30 ತಿಂಗಳುಗಳಿಂದ ನನ್ನ ಮೇಲೆ ಹಲವಾರು ಬಾರಿ ಕೊಲೆ ಪ್ರಯತ್ನಗಳು ನಡೆದಿವೆ. ಈ ಪ್ರಕರಣದ ಪ್ರಧಾನ ದೂರುದಾರ ಮತ್ತು ಮುಖ್ಯ ಸಾಕ್ಷಿ ನಾನೇ ಆಗಿರುವುದರಿಂದ, ದೇಶಾದ್ಯಂತ ಓಡಾಡಲು ನನಗೆ ಸಿಆರ್‌ಪಿಎಫ್‌ನ Z+ ದರ್ಜೆಯ ಭದ್ರತೆ ನೀಡಬೇಕು,” ಎಂದು ಕೋರಿದ್ದಾರೆ.

ಸದ್ಯ ಈ ಪ್ರಕರಣವು ಕಾನೂನುಬದ್ಧವಾಗಿ ಮಹತ್ವದ ಹಂತ ತಲುಪಿದೆ. ಹಾಗೇ ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಾಗಿ ಶಿಶಿರ್ ತಿಳಿಸಿದ್ದಾರೆ. ಕೇಂದ್ರ ಗೃಹ ಇಲಾಖೆಯ ಮುಂದಿನ ನಡೆಯ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ.