SK Home Ad
Home ನಮ್ಮ ಜಿಲ್ಲೆ ಬಳ್ಳಾರಿ ದಲಿತ ನಾಯಕ ಬೆಳೆಯುವುದನ್ನು ಬಿಜೆಪಿ ಸಹಿಸುವುದಿಲ್ಲ

ದಲಿತ ನಾಯಕ ಬೆಳೆಯುವುದನ್ನು ಬಿಜೆಪಿ ಸಹಿಸುವುದಿಲ್ಲ

0
82

ಬಳ್ಳಾರಿ: ‘ಜಿಲ್ಲೆಗೆ ಸಚಿವ ಸ್ಥಾನ ಸಿಗುತ್ತದೆಯೋ, ಇಲ್ಲವೋ ಎಂಬ ಪರಿಸ್ಥಿತಿ ಇತ್ತು. ಇದೀಗ ವರಿಷ್ಠರು ಜವಾಬ್ದಾರಿ ನೀಡಿದ್ದಾರೆ. ಜಿಲ್ಲೆಯ ಐವರು ಶಾಸಕರು ಒಗ್ಗಟ್ಟಾಗಿದ್ದು, ಎಲ್ಲರೂ ಸೇರಿ ಕೆಲಸ ಮಾಡುತ್ತೇವೆ’ ಎಂದು ನೂತನ ಸಚಿವ ಬಿ. ನಾಗೇಂದ್ರ ಹೇಳಿದರು.

ಚೇಳ್ಳಗುರ್ಕಿಯ ಯರ್ರಿಸ್ವಾಮಿ ತಾತನ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನ ಮುಂದೆ ಸಾಕಷ್ಟು ಸವಾಲುಗಳಿವೆ. ವರಿಷ್ಠರು ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಜಿಲ್ಲೆಯ ಎಲ್ಲ ಶಾಸಕರೂ ಒಂದಾಗಿ ಕೆಲಸ ಮಾಡಲಿದ್ದೇವೆ. ಜಿಲ್ಲೆಯ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಶ್ರಮಿಸುತ್ತೇವೆ’ ಎಂದು ಹೇಳಿದರು.

ದಲಿತ ನಾಯಕ ಬೆಳೆಯುವುದನ್ನು ಬಿಜೆಪಿ ಸಹಿಸದು: ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ನಾಗೇಂದ್ರ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಒಬ್ಬ ದಲಿತ ಹಾಗೂ ಹಿಂದುಳಿದ ನಾಯಕ ಬೆಳೆಯುವುದನ್ನು ಬಿಜೆಪಿ ನಾಯಕರು ಸಹಿಸಿಕೊಳ್ಳುವುದಿಲ್ಲ’ ಎಂದು ಆರೋಪಿಸಿದರು.

‘ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಹಿರಿಯರು. ಅವರನ್ನೇ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲಾಗಿದೆ. ಅವರು ಈ ರೀತಿ ಮಾತನಾಡುತ್ತಾರೆ ಎಂದರೆ ಏನು ಹೇಳಬೇಕು? ಬಿಜೆಪಿಯಲ್ಲಿ ಎಷ್ಟು ಜನರ ಮೇಲೆ ಭ್ರಷ್ಟಾಚಾರದ ಆರೋಪಗಳಿಲ್ಲ?’ ಎಂದು ಪ್ರಶ್ನಿಸಿದ ಅವರು, ‘ನನಗೆ ಎಸ್‌ಐಟಿ ಕ್ಲೀನ್‌ಚಿಟ್ ನೀಡಿದೆ. ಕೇಂದ್ರದ ಕುತಂತ್ರದಿಂದ ನನ್ನನ್ನು ಬಲಿಪಶು ಮಾಡಲು ಹೊರಟಿದ್ದಾರೆ’ ಎಂದು ಆರೋಪಿಸಿದರು.

ಜನಾರ್ದನ ರೆಡ್ಡಿಗೆ ತಿರುಗೇಟು: ತಮ್ಮ ವಿರುದ್ಧ ಮಾಜಿ ಸಚಿವ ಜನಾರ್ದನ ರೆಡ್ಡಿ ಮಾಡಿರುವ ಟೀಕೆಗಳಿಗೆ ತೀವ್ರ ಪ್ರತಿಕ್ರಿಯೆ ನೀಡಿದ ನಾಗೇಂದ್ರ, ‘ಜನಾರ್ದನ ರೆಡ್ಡಿ ಅವರು ಮೊದಲು ತಮ್ಮ ಮಾತಿನ ಮೇಲೆ ನಿಗಾ ಇಟ್ಟುಕೊಂಡು ಮಾತನಾಡಬೇಕು. ಏಕವಚನದಲ್ಲಿ ಮಾತನಾಡುವುದನ್ನು ಬಿಡಬೇಕು’ ಎಂದು ಹೇಳಿದರು.

‘ಎಲುಬಿಲ್ಲದ ನಾಲಿಗೆ. ನಾನೂ ಅದೇ ರೀತಿ ಮಾತನಾಡಬಹುದು. ಆದರೆ ಅವರಷ್ಟು ಕೆಳಮಟ್ಟಕ್ಕೆ ಇಳಿದು ಮಾತನಾಡುವುದಿಲ್ಲ. ಕೈಮುಗಿದು ಕೇಳಿಕೊಳ್ಳುತ್ತೇನೆ, ನೀವು ಮಾತನಾಡುವುದನ್ನು ಸರಿಯಾಗಿ ಕಲಿಯಿರಿ’ ಎಂದರು. ‘ನನ್ನ ಬೆಳವಣಿಗೆಯನ್ನು ಜನಾರ್ದನ ರೆಡ್ಡಿ ಅವರಿಗೆ ಸಹಿಸಲು ಆಗುತ್ತಿಲ್ಲ. ಒಬ್ಬ ದಲಿತ ಬೆಳೆಯುವುದನ್ನು ಅವರು ಸಹಿಸುವುದಿಲ್ಲ’ ಎಂದು ಆರೋಪಿಸಿದರು.

ವಿಜಯೇಂದ್ರ ವಿರುದ್ಧವೂ ವಾಗ್ದಾಳಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಟೀಕೆಗೂ ಪ್ರತಿಕ್ರಿಯಿಸಿದ ನಾಗೇಂದ್ರ, ‘ವಿಜಯೇಂದ್ರ ಅವರದ್ದೂ ಬಹಳಷ್ಟಿದೆ. ನಾವೂ ಮಾತನಾಡಬಹುದು. ಅವರು ಏನೇನು ಎಂಬುದು ನಮಗೂ ಗೊತ್ತಿದೆ’ ಎಂದರು. ವಿಜಯೇಂದ್ರ ಅವರ ತಂದೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧದ ಪ್ರಕರಣಗಳನ್ನು ಉಲ್ಲೇಖಿಸಿದ ಅವರು, ‘ಅವರ ತಂದೆಯ ಮೇಲೆಯೇ ಪೋಕ್ಸೊ ಪ್ರಕರಣ ಇದೆ. ಅವರು ಜೈಲಿಗೆ ಹೋಗಿ ಬಂದವರು’ ಎಂದು ಟೀಕಿಸಿದರು.

ಯತೀಂದ್ರ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ: ‘ಹಿಂದೂ ರಾಷ್ಟ್ರವಾದರೆ ದಲಿತರು ಹಾಗೂ ಹಿಂದುಳಿದವರು ಶೋಷಣೆಗೆ ಒಳಗಾಗುತ್ತಾರೆ’ ಎಂಬ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ನಾಗೇಂದ್ರ, ‘ಯತೀಂದ್ರ ಸಿದ್ದರಾಮಯ್ಯ ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ನಾವೆಲ್ಲರೂ ಹಿಂದೂಗಳೇ’ ಎಂದರು.

‘ಬಿಜೆಪಿಯವರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ನಮ್ಮ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗಿಂತಲೂ ಹಿಂದುತ್ವ ಯಾರಿಗಿದೆ? ಅವರು ಮಾಡಿದಷ್ಟು ಪೂಜೆ, ಪುನಸ್ಕಾರ, ಹೋಮ ಯಾರೂ ಮಾಡಿಸುವುದಿಲ್ಲ. ಹಿಂದೂ ಎಂಬುದು ನಮ್ಮ ಸಂಪ್ರದಾಯ’ ಎಂದರು. ‘ನಾನೂ ಇಂದು ದೇವಸ್ಥಾನಕ್ಕೆ ಬಂದಿದ್ದೇನೆ. ಜಾತಿ ವ್ಯವಸ್ಥೆ ಹೋಗಬೇಕು ಎಂಬುದು ನಿಜ. ಆದರೆ ಯತೀಂದ್ರ ಸಿದ್ದರಾಮಯ್ಯ ಅವರು ಆ ಅರ್ಥದಲ್ಲಿ ಹೇಳಿರಲಿಕ್ಕಿಲ್ಲ’ ಎಂದು ಸ್ಪಷ್ಟಪಡಿಸಿದರು.

ಜಲಾಶಯಕ್ಕೆ ನೀರಿನ ಒಳಹರಿವು: ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸುವ ಕುರಿತು ಮಾತನಾಡಿದ ನಾಗೇಂದ್ರ, ‘ಸದ್ಯ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಸಭೆ ನಡೆಸಿ ಕಾಲುವೆಗಳಿಗೆ ನೀರು ಹರಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.