Home Advertisement
Home ನಮ್ಮ ಜಿಲ್ಲೆ ಬೆಳಗಾವಿ ಒಂದೇ ಬೈಕ್‌ ಕಳ್ಳತನ ಪ್ರಕರಣದ ಬೆನ್ನುಹತ್ತಿದ ಪೊಲೀಸರಿಗೆ ಸಿಕ್ಕಿತು 20 ಬೈಕ್‌ಗಳ ಭಾರಿ ಬೇಟೆ!

ಒಂದೇ ಬೈಕ್‌ ಕಳ್ಳತನ ಪ್ರಕರಣದ ಬೆನ್ನುಹತ್ತಿದ ಪೊಲೀಸರಿಗೆ ಸಿಕ್ಕಿತು 20 ಬೈಕ್‌ಗಳ ಭಾರಿ ಬೇಟೆ!

0
111

ಬೆಳಗಾವಿ: ಯಳ್ಳೂರ ಗ್ರಾಮದಲ್ಲಿ ನಡೆದ ಒಂದು ಮೋಟಾರ್‌ಸೈಕಲ್ ಕಳ್ಳತನ ಪ್ರಕರಣದ ತನಿಖೆ ಬೆಳಗಾವಿ ಗ್ರಾಮೀಣ ಪೊಲೀಸರ ಕೈಯಲ್ಲಿ ದೊಡ್ಡ ಕಳ್ಳತನ ಜಾಲದ ಸುಳಿವಾಗಿ ಮಾರ್ಪಟ್ಟಿದೆ.

ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ ಸುಮಾರು 11.73 ಲಕ್ಷ ರೂ. ಮೌಲ್ಯದ ಒಟ್ಟು 20 ಮೋಟಾರ್‌ಸೈಕಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಹೊನಗಾ ಗ್ರಾಮದ ದಿಲೀಪ ತುಕಾರಾಮ ಜಾಧವ ಅವರ ಮೋಟಾರ್‌ಸೈಕಲ್ ಯಳ್ಳೂರ ಗ್ರಾಮದಲ್ಲಿ ಕಳವಾಗಿತ್ತು. ಈ ಕುರಿತು ಏಪ್ರಿಲ್ 23ರಂದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ವಿಶೇಷ ಪೊಲೀಸ್‌ ತಂಡ ರಚಿಸಿ ತನಿಖೆ ಆರಂಭಿಸಿದ್ದರು. ಪೊಲೀಸರ ಚುರುಕು ಕಾರ್ಯಾಚರಣೆಯಿಂದ ಏಪ್ರಿಲ್ 25ರಂದು ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು.

ಬಂಧಿತರನ್ನು ಗೋಕಾಕ ತಾಲೂಕಿನ ಹೀರೆಹಟ್ಟಿ ಗ್ರಾಮದ ಫಕೀರಪ್ಪ ಸಿದ್ದಪ್ಪ ಕರಿಗಾರ, ಹುಕ್ಕೇರಿ ತಾಲೂಕಿನ ಆಲದಾಳ ಗ್ರಾಮದ ರಮೇಶ ಪ್ರಭು ಪಾಟೀಲ ಮತ್ತು ಬೆಳಗಾವಿ ತಾಲೂಕಿನ ಕೆಂಚನಟ್ಟಿ–ಮಾರ್ಕಂಡೇಯ ನಗರದ ಕಮಲಪ್ಪ ಅಲಿಯಾಸ್ ಕಮಲು ಯಲ್ಲಪ್ಪ ಗುಂಡ್ಯಾಗೋಳ ಎಂದು ಗುರುತಿಸಲಾಗಿದೆ.

ವಿಚಾರಣೆ ವೇಳೆ ಆರೋಪಿಗಳು ಬೆಳಗಾವಿ ಗ್ರಾಮೀಣ ಠಾಣೆ ವ್ಯಾಪ್ತಿಯ ಯಳ್ಳೂರ, ಮಾರ್ಕಂಡೇಯ ನಗರ, ಟಿಳಕವಾಡಿ, ಶಹಾಪುರ ಹಾಗೂ ಹುಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ ಮೋಟಾರ್‌ಸೈಕಲ್‌ಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ ಯಮಹಾ, ಹೀರೋ ಸ್ಪ್ಲೆಂಡರ್, ಟಿವಿಎಸ್, ಸುಜುಕಿ ಸೇರಿದಂತೆ ವಿವಿಧ ಕಂಪನಿಗಳ ಒಟ್ಟು 20 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.