ಪಶ್ಚಿಮ ಬಂಗಾಳದ ಚುನಾವಣಾ ಕಣದಲ್ಲಿ ರಾಜಕೀಯ ವಾಗ್ವಾದಗಳು ತಾರಕಕ್ಕೇರಿವೆ. ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚುನಾವಣಾ ಪ್ರಚಾರದ ವೇಳೆ ಪೊಲೀಸ್ ಅಧಿಕಾರಿಯೊಬ್ಬರನ್ನು ಉದ್ದೇಶಿಸಿ ನೀಡಿದ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ರಾಜಕೀಯ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ.
ಪಶ್ಚಿಮ ಬಂಗಾಳದ ಅರಾಮ್‌ಬಾಗ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಅಮಿತ್ ಶಾ ವೇದಿಕೆಯ ಮೇಲೆ ಮಾತನಾಡುತ್ತಿದ್ದಾಗ, ಅಲ್ಲಿನ ಭದ್ರತಾ ವ್ಯವಸ್ಥೆಯಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರನ್ನು ಕಂಡು, “ಓ… ಬಂಗಾಳ ಪೊಲೀಸರೇ, ಜರಾ ವಾಪಾಸ್ ಜಾವೋ” (ಬಂಗಾಳ ಪೊಲೀಸರೇ, ಸ್ವಲ್ಪ ಹಿಂದೆ ಸರಿಯಿರಿ) ಎಂದು ಹೇಳಿದ್ದರು. ಶಾ ಈ ನೇರ ನುಡಿಗಳು ಅಲ್ಲಿ ನೆರೆದಿದ್ದ ಜನಸಮೂಹದಲ್ಲಿ ಭಾರಿ ಹರ್ಷೋದ್ದಾರ ಮೂಡಿಸಿತ್ತು. ಈ ವಿಡಿಯೋ ತುಣುಕು ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಮಾತಿನ ಸಮರಕ್ಕೆ ನಾಂದಿ ಹಾಡಿದೆ.
ಮಹುವಾ ಮೊಯಿತ್ರಾ ತಿರುಗೇಟು: ಅಮಿತ್ ಶಾ ಈ ಹೇಳಿಕೆಗೆ ತೃಣಮೂಲ ಕಾಂಗ್ರೆಸ್ (TMC) ಸಂಸದೆ ಮಹುವಾ ಮೊಯಿತ್ರಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಶಾ ‘ವಾಪಾಸ್ ಜಾವೋ’ ಎಂಬ ಪದವನ್ನೇ ಬಳಸಿ ತಿರುಗೇಟು ನೀಡಿದ್ದು, “ಅರೆ ಓ ಮೋಟಾಭಾಯಿ… ಸ್ವಲ್ಪ ಕೇಳಿ… ನೀವೇ ದಿಲ್ಲಿಗೆ ವಾಪಾಸ್ ಹೋಗಿ”, ಎಂದು ‘ಎಕ್ಸ್’ (X) ಮೂಲಕ ಕಿಡಿಕಾರಿದ್ದಾರೆ. ರಾಜ್ಯದ ಪೊಲೀಸರನ್ನು ಗೌರವಿಸದ ಕೇಂದ್ರ ನಾಯಕರ ನಡೆಗೆ ಟಿಎಂಸಿ ಆಕ್ರೋಶ ವ್ಯಕ್ತಪಡಿಸಿದೆ.
ಚುನಾವಣಾ ಕಣದಲ್ಲಿ ಬಿಜೆಪಿಯ ವಿಶ್ವಾಸ: ಮೊದಲ ಹಂತದ ಮತದಾನದ ಬಳಿಕ ಕೋಲ್ಕತ್ತಾದಲ್ಲಿ ಸುದ್ದಿಗೋಷ್ಠಿ ನಡೆಸಿದ ಅಮಿತ್ ಶಾ, ಬಿಜೆಪಿಯ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಹಾಗೇ ಮೊದಲ ಹಂತದಲ್ಲಿ ದಾಖಲಾದ ಭಾರಿ ಮತದಾನವು (ಸುಮಾರು ಶೇ. 91.78) ಆಡಳಿತ ವಿರೋಧಿ ಅಲೆ ಮತ್ತು ಬಿಜೆಪಿಗೆ ಸಿಗುತ್ತಿರುವ ಬೆಂಬಲದ ಸಂಕೇತ ಎಂದು ಶಾ ವಿಶ್ಲೇಷಿಸಿದರು.
ಅಲ್ಲದೇ.. ಮತದಾರರಿಗೆ ತೊಂದರೆ ನೀಡುವ ಅಧಿಕಾರಿಗಳ ವಿರುದ್ಧ ಮೇ 5ರ ನಂತರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ಪಶ್ಚಿಮ ಬಂಗಾಳದ ಚುನಾವಣೆ ಕೇವಲ ಮತದಾನಕ್ಕೆ ಸೀಮಿತವಾಗದೆ, ಕೇಂದ್ರ ಮತ್ತು ರಾಜ್ಯದ ಅಧಿಕಾರ ಕೇಂದ್ರಗಳ ನಡುವಿನ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಅಮಿತ್ ಶಾ ಈ ಒಂದು ಸಣ್ಣ ಹೇಳಿಕೆಯು ಈಗ ಬಂಗಾಳದ ರಾಜಕೀಯ ಅಖಾಡದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.























